ಬೆಂಗಳೂರು: ಅಸಹಜ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣರನ್ನು ಜುಲೈ 1 ರವರೆಗೂ ಸಿಐಡಿ ವಶಕ್ಕೆ ನೀಡಿ ನ್ಯಾಯಾಲಯ ಆದೇಶಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈ ಆದೇಶ ಹೊರಡಿಸಿದೆ.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಪ್ರಕರಣದಲ್ಲಿ ದೂರುದಾರಿಗೆ ಆರೋಪಿಯಿಂದ ಭಯವಿದೆ. ಅದಕ್ಕಾಗಿ ತಡವಾಗಿ ದೂರು ನೀಡಲಾಗಿದೆ. ದೂರಿನ ಬಗ್ಗೆ ಸುದೀರ್ಘ ವಿಚಾರಣೆ ನಡೆಯಬೇಕಾಗಿದೆ. ಹಾಸನದಲ್ಲಿ ಘಟನೆ ನಡೆದಿದೆ. ಅಲ್ಲಿಗೆ ಹೋಗಿ ಮಹಜರು ಮಾಡಬೇಕು. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು. ಸಾಕ್ಷ್ಯಗಳ ಸಂಗ್ರಹ ಮಾಡಬೇಕು. ಮೊಬೈಲ್ ಫೋನ್ ವಶಕ್ಕೆ ಪಡೆಯಬೇಕು. ವಾಟ್ಸ್‌ಪ್ ಸಂದೇಶಗಳನ್ನು ಪಡೆದುಕೊಳ್ಳಬೇಕು. ಅಲ್ಲದೆ, ದೂರುದಾರರಿಗೆ ಬೆದರಿಕೆ ಹಾಕಿರೋದಕ್ಕೆ ಸಾಕ್ಷಿ ಕಲೆ ಹಾಕಬೇಕಾಗಿದೆ. ಕೃತ್ಯ ನಡೆದ ದಿನ ಧರಿಸಿದ್ದ ಬಟ್ಟೆ, ಬಳಕೆ ಮಾಡಿದ್ದ ವಾಹನ ವಶಕ್ಕೆ ಪಡೆದುಕೊಳ್ಳಬೇಕು. ಎರಡನೇ ಆರೋಪಿಯ ಬಂಧನ ಮಾಡಬೇಕು. ಹೀಗಾಗಿ 14 ದಿನ ಕಸ್ಟಡಿ ಬೇಕು ಎಂದು ವಾದ ಮಂಡಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸೂರಜ್ ರೇವಣ್ಣರ ಪರ ವಕೀಲರು, ಪ್ರಕರಣದಲ್ಲಿ ದೂರುದಾರ ಘಟನೆ ಆದಾಗ ದೂರು ನೀಡಿಲ್ಲ. ಬದಲಾಗಿ ಆತ ತಡವಾಗಿ ದೂರು ನೀಡಲಾಗಿದೆ. ಅಲ್ಲದೇ ಆತ ಬ್ಲಾಕ್ ಮೇಲ್ ಯತ್ನ ಮಾಡಿರುವುದು ಪ್ರಕರಣದಲ್ಲಿ ಸ್ಪಷ್ಟವಾಗಿದೆ. 2 ರಿಂದ 3 ದಿನ ಸಿಐಡಿ ವಶಕ್ಕೆ ನೀಡಿದರೆ ಸಾಕು. ಆದರೆ, ವಿನಾಕಾರಣ ಕಿರುಕುಳ ನೀಡುವ ಉದ್ದೇಶದಿಂದ 14 ದಿನಗಳ ಕಾಲ ಸಿಐಡಿ ವಶಕ್ಕೆ ಕೇಳಲಾಗುತ್ತಿದೆ ಎಂದು ವಿವರಿಸಿದರು.