ದಾವಣಗೆರೆ:ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಶಬ್ದ ಬಳಸಿದ ಆರೋಪ ಪ್ರಕರಣದಲ್ಲಿ ಬಂಧನಕ್ಕೊಳಪಟ್ಟಿದ್ದ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಇಂದು ಸಂಜೆ ಹೈಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಬಿಡುಗಡೆಗೊಳಿಸಿದ್ದಾರೆ. ನಂತರ ಸಿ.ಟಿ.ರವಿ ಪೊಲೀಸ್ ಭದ್ರತೆಯೊಂದಿಗೆ ದಾವಣಗೆರೆ ಸರ್ಕ್ಯೂಟ್ ಹೌಸ್ಗೆ ಆಗಮಿಸಿ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
"ನನ್ನನ್ನು ಒಟ್ಟು 4 ಜಿಲ್ಲೆ, 11 ಗಂಟೆಗೂ ಹೆಚ್ಚಿನ ಕಾಲ ಅಲೆದಾಡಿಸಿದ್ದಾರೆ. ಮಾನಸಿಕವಾಗಿ ಕುಗ್ಗಿಸುವ ಕೆಲಸ ಮಾಡಿದ್ದಾರೆ. ದೈಹಿಕವಾಗಿ ಹಲ್ಲೆ ಮಾಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಪೊಲೀಸ್ ಪವರ್ ಮೂಲಕ ಮಾಡಿಸಿದೆ. ಬಿ.ವೈ.ವಿಜಯೇಂದ್ರ, ಆರ್.ಆಶೋಕ್, ನಾರಾಯಣಸ್ವಾಮಿ ಎಲ್ಲರೂ ಸಂಕಷ್ಟದ ಸಮಯದಲ್ಲಿ ನನಗೆ ಅತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು" ಎಂದರು.
ಹೈಕೋರ್ಟ್ ಆದೇಶದ ಬಗ್ಗೆ ಸತ್ಯಮೇವ ಜಯತೇ ಎಂದು ಒಂದೇ ಮಾತು ಹೇಳುವೆ. ಸತ್ಯಕ್ಕೆ ಜಯ ಸಿಗುತ್ತೆ ಎಂದು ಹೇಳಿದ್ದೆ. ಸತ್ಯಕ್ಕೆ ಜಯ ಸಿಕ್ಕಿದೆ. ಕಾಂಗ್ರೆಸ್ ಪಕ್ಷ ಪೊಲೀಸ್ ಪವರ್ ಮೂಲಕ ನನ್ನನ್ನು ಕುಗ್ಗಿಸುವ ಕೆಲಸ ಮಾಡಿದರೆ ನಾನು ಕುಗ್ಗುವುದಿಲ್ಲ. ಇಂತಹ ಸಂಕಷ್ಟಗಳನ್ನು 35 ವರ್ಷಗಳಿಂದ ನೋಡಿಕೊಂಡು ಬಂದಿದ್ದೇನೆ. ವಿದ್ಯಾರ್ಥಿ ದೆಸೆಯಲ್ಲಿ ಹೋರಾಟದ ಸಮಯದಲ್ಲಿ ಅನುಭವಿಸಿದ್ದೇನೆ. ನೀವು ಕೊಡುವ ತೊಂದರೆ ಮತ್ತಷ್ಟು ಹೋರಾಟ ಮಾಡುವ ಶಕ್ತಿ ನೀಡುತ್ತದೆ. ನಮ್ಮ ಕಾರ್ಯಕರ್ತರು ಸಂಕಷ್ಟದಲ್ಲಿದ್ದಾಗ ಸಹಾಯಕ್ಕೆ ಬಂದಿದ್ದಾರೆ. ಅವರೆಲ್ಲರೂ ಧನ್ಯವಾದಗಳು" ಎಂದು ಹೇಳಿದರು.
ಬಳೆ ತೊಟ್ಟು ಕೂತಿಲ್ಲ- ಡಿಕೆಶಿಗೆ ವಿಜಯೇಂದ್ರ ಎಚ್ಚರಿಕೆ:"ಕಳೆದ ದಿನ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಘಟನೆಯನ್ನು ಇಡೀ ದೇಶದ ಜನರು ಗಮನಿಸಿದ್ದಾರೆ. ಕಾಂಗ್ರೆಸ್ ಪಕ್ಷದವರು ಸುವರ್ಣಸೌಧಕ್ಕೆ ನುಗ್ಗಿ ಸಿ.ಟಿ.ರವಿ ಅವರ ಮೇಲೆ ಹಲ್ಲೆ ಮಾಡುವ ಪ್ರಯತ್ನ ನಡೆಸಿದರು" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ಬಿಜಯೇಂದ್ರ ವಾಗ್ದಾಳಿ ನಡೆಸಿದರು. "ಎಫ್ಐಆರ್ ಹಾಕಿ ಕಾನೂನುಬಾಹಿರವಾಗಿ ಅರೆಸ್ಟ್ ಮಾಡಿದ್ದಾರೆ. ರಾತ್ರಿ 12 ಗಂಟೆಗೆ ಬೆಂಗಳೂರಿಗೆ ಕರೆತರುವ ನೆಪ ಮಾಡಿ ಖಾನಾಪುರ ಠಾಣೆಗೆ ಕರೆತಂದು ಪೊಲೀಸರು ಹಲ್ಲೆ ನಡೆಸಿದ್ದಾರೆ. ತಲೆಯಿಂದ ರಕ್ತ ಸುರಿಯುತ್ತಿದ್ದರೂ ಆಸ್ಪತ್ರೆಗೆ ಸೇರಿಸದೇ ದುರ್ವರ್ತನೆ ತೋರಿದ್ದಾರೆ. ರವಿ ಅವರನ್ನು ಕಾರಿನಲ್ಲಿ ಕೂರಿಸಿಕೊಂಡು 500 ಕಿ.ಮೀ ತಿರುಗಾಡಿಸಿದ್ದಾರೆ. ಭಯ ಹುಟ್ಟಿಸುವ ರೀತಿ ಪೊಲೀಸರು ವರ್ತಿಸಿದ್ದಾರೆ" ಎಂದು ಅವರು ದೂರಿದರು.