ರಮೇಶ್ ಜಾರಕಿಹೊಳಿ (ETV Bharat) ಚಿಕ್ಕೋಡಿ (ಬೆಳಗಾವಿ):ಲೋಕಸಭಾ ಚುನಾವಣೆಯಲ್ಲಿ ಜನರು ಬಿಜೆಪಿ ಮೇಲೆ ವಿಶ್ವಾಸವಿಟ್ಟು ವೋಟ್ ಹಾಕಿದ್ದಕ್ಕೆ ಪ್ರತೀಕಾರವಾಗಿ ಕಾಂಗ್ರೆಸ್ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದೆ ಎಂದು ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಆರೋಪಿಸಿದರು. ಅಥಣಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನರು ಕಷ್ಟದಲ್ಲಿರುವಾಗ ಬೆಲೆ ಏರಿಕೆ ಮಾಡಬಾರದಿತ್ತು. ಸರ್ಕಾರ ಈ ಬೆಲೆ ಏರಿಕೆ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸುತ್ತೇವೆ ಎಂದರು.
ಸರ್ಕಾರ ಒಂದು ಕೈಯಿಂದ ಕೊಡುವುದು, ಇನ್ನೊಂದು ಕೈಯಿಂದ ಕಿತ್ತುಕೊಳ್ಳುವುದನ್ನು ಮಾಡುತ್ತಿದೆ. ಸಾಮಾನ್ಯಜನರ ಮೇಲೆ ಆರ್ಥಿಕ ಹೊರೆ ಸರಿಯಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು ಸರಿಯಾದ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು.
ಅಥಣಿಯಲ್ಲಿ ಮಾಜಿ ಶಾಸಕರೊಂದಿಗೆ ಸಭೆ ನಡೆಸಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗೆ ತಳಮಟ್ಟದಿಂದ ಪಕ್ಷ ಕಟ್ಟಿ ಗೆಲ್ಲಿಸಲು ಒತ್ತುಕೊಟ್ಟಿದ್ದೇವೆ. ಬೇರೆ ವಿಚಾರಗಳನ್ನು ಚರ್ಚೆ ಮಾಡಿಲ್ಲ ಎಂದರು.
ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಎರಡು ರಾಷ್ಟ್ರೀಯ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ಅದರಲ್ಲೂ ವಿಶೇಷವಾಗಿ ಅಥಣಿ ಬಗ್ಗೆ ತಿಳಿದುಕೊಳ್ಳಬೇಕು. ಕೆಲವರು ನಾವು ಆಡಿದ್ದೇ ಆಟ ಎಂದು ತಿಳಿದುಕೊಂಡಿದ್ದಾರೆ. 2004 ರಲ್ಲಿ ಶಹಜಾನ್ ಡೊಂಗರಗಾಂವ್ ಸೋಲಿಸಬೇಕು ಎಂದು ಪಕ್ಷ ತೊರೆದು ಶಾಸಕ ಸ್ಥಾನಕ್ಕೆ ಆಯ್ಕೆಯಾದರು. ಮಹೇಶ್ ಕುಮಟಳ್ಳಿ ಅಥಣಿ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದರು. ಕೆಟ್ಟ ವಾತಾವರಣದಲ್ಲಿ ಪಕ್ಷ ತೊರೆದು ಶಾಸಕರಾದರು. ಅಥಣಿ ಜನರು ಬುದ್ಧಿವಂತರಿದ್ದಾರೆ, ಮುಂದಿನ ದಿನಗಳಲ್ಲಿ ಅವರು ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
ಲಕ್ಷ್ಮಣ್ ಸವದಿ ಬಿಜೆಪಿ ಸೇರುವ ಬಗ್ಗೆ ಮಾತನಾಡಿ, ಲಕ್ಷ್ಮಣ್ ಸವದಿ ಅವರಿಗೆ ಬಿಜೆಪಿಯವರು ಆಹ್ವಾನ ಕೊಟ್ಟಿಲ್ಲ. ಇಂಥ ಸಾವಿರಾರು ಜನ ಕಾರ್ಯಕರ್ತರು ನಮ್ಮ ಪಕ್ಷದಲ್ಲಿದ್ದಾರೆ. ಅವರೇ ಬರಬೇಕು ಅಂಥ ಏನಿಲ್ಲ. ಪಕ್ಷ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಅದನ್ನು ಸ್ವಾಗತಿಸುತ್ತೇನೆ. ಪಕ್ಷದಿಂದ ಪಕ್ಷಕ್ಕೆ ಜಂಪ್ ಮಾಡುವ ನಾಯಕರ ಬಗ್ಗೆ ಎರಡೂ ರಾಷ್ಟ್ರೀಯ ಪಕ್ಷಗಳು ಸರಿಯಾದ ನಿರ್ಣಯ ತೆಗೆದುಕೊಳ್ಳಬೇಕು ಎಂದು ಆಗ್ರಹಿಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ:ಕಿವಿಗೆ ಹೂವು, ಕೈಗೆ ಚಿಪ್ಪು; ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿ ವಿನೂತನ ಪ್ರತಿಭಟನೆ - PETROL AND DIESEL PRICE