ಮೈಸೂರು:ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಹಗರಣಗಳ ಸಂಬಂಧ ಮುಡಾದ ಮಾಜಿ ಆಯುಕ್ತರು ಹಾಗೂ ಅಧಿಕಾರಗಳನ್ನ ತನಿಖೆಗೆ ಒಳಪಡಿಸಬೇಕೆಂದು ಮೈಸೂರು ಕೆ.ಆರ್.ಕ್ಷೇತ್ರದ ಬಿಜೆಪಿ ಶಾಸಕ ಶ್ರೀವತ್ಸ ಅವರು ಕರ್ನಾಟಕ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.
ಮುಡಾ ಆಯುಕ್ತರಾಗಿ ಈ ಹಿಂದೆ ಕೆಲಸ ಮಾಡಿದ ದಿನೇಶ್ ಕುಮಾರ್, ನಟೇಶ್ ಹಾಗೂ ಭೂಸ್ವಾಧೀನಾಧಿಕಾರಿ, ನಗರ ಯೋಜನಾ ಅಧಿಕಾರಿ ಮತ್ತು ನಗರಾಭಿವೃದ್ಧಿ ಕಾರ್ಯದರ್ಶಿಯ ವಿರುದ್ಧ ತನಿಖೆ ನಡೆಸಬೇಕೆಂದು ಮೈಸೂರು ನಗರದ ಬಿಜೆಪಿ ಶಾಸಕ ಟಿ.ಎಸ್. ಶ್ರೀವತ್ಸ ಅವರು ಕರ್ನಾಟಕ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.
ಮುಡಾದಲ್ಲಿ ನಡೆದ ಅಕ್ರಮಗಳಿಂದ ಸರ್ಕಾರಕ್ಕೆ 5 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂಬ ವರದಿಗಳು ಬರುತ್ತಿದ್ದು, ಇದರ ಬಗ್ಗೆ ಸಂಪೂರ್ಣವಾಗಿ ತನಿಖೆ ನಡೆಸಬೇಕು. ಈ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಅವರನ್ನು ಬಂಧಿಸಿ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಶಾಸಕರು ಲೋಕಾಯುಕ್ತರಿಗೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಈಟಿವಿ ಭಾರತ ಜೊತೆ ದೂರವಾಣಿಯಲ್ಲಿ ಮಾಹಿತಿ ನೀಡಿದ ಶಾಸಕರು, ಮುಡಾದಲ್ಲಿ ನಡೆದಿರುವ ಆಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ, ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದೇನೆ. ಮುಡಾದಲ್ಲಿ ನಡೆದ ಅಕ್ರಮದಲ್ಲಿ ಹಿಂದಿನ ಇಬ್ಬರು ಆಯುಕ್ತರಾದ ನಟೇಶ್ ಹಾಗೂ ದಿನೇಶ್ ಕುಮಾರ್ ಹಾಗೂ ಪ್ರಾಧಿಕಾರದ ಇನ್ನಿತರ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ದೂರಿನಲ್ಲಿ ಲೋಕಾಯುಕ್ತಕ್ಕೆ ತಿಳಿಸಿದ್ದೇನೆ. ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಬೇಕೆಂದು ಲೋಕಾಯುಕ್ತಕ್ಕೆ ದೂರು ನೀಡಿರುವುದಾಗಿ ಮಾಹಿತಿ ನೀಡಿದರು.