ಧಾರವಾಡ :ಕೃಷಿಮೇಳದ ವೇದಿಕೆಯಲ್ಲಿ ಕೃಷಿ ವಿವಿಯ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಸಲಹೆಗಳನ್ನು ನೀಡಿದರು. ಕೃಷಿ ಮೇಳದಲ್ಲಿ ಭಾಗವಹಿಸಿ ಮಾತನಾಡುವ ವೇಳೆ ಈ ಘಟನೆ ನಡೆಯಿತು.
ಕಳೆದ ವರ್ಷ 10 ಲಕ್ಷ ಜನ ಬಂದಿದ್ದರು. ಆದರೆ ಆ ಬಳಿಕ ಏನು ಆಗಿತ್ತು. ಕಳೆದ ಐದು ವರ್ಷದ ಮೇಳದ ಪ್ರಗತಿ ಏನು?. ಕಳೆದ ವರ್ಷದ ಹಿಂದೆಯೇ ನಾನು ನಿಮಗೆ ಹೇಳಿದ್ದೆ. ಆ ಬಳಿಕ ನಮ್ಮನ್ನು ಸಂಪರ್ಕಿಸಲೇ ಇಲ್ಲ. ಇದು ಸರ್ಕಾರದ ಹಣದ ಮೇಳ ಅಲ್ಲದಿರಬಹುದು. ಸ್ವಯಂ ಆಗಿ ದೇಣಿಗೆ, ಹಣ ಸಂಗ್ರಹದ ಮೂಲಕ ಆಗುತ್ತಿದೆ. ಸಂತೋಷ ಇದೆ. ಆದರೆ ಮೇಳದ ಪ್ರಗತಿಯ ವರದಿ ಏನಿದೆ, ಎಲ್ಲರನ್ನೂ ಸೇರಿಸಿ ಸಭೆ ಮಾಡಿ ಅಂತಾ ಹೇಳಿದ್ವಿ. ಸಭೆ ಮಾಡಿಲ್ಲ ಯಾಕೆ? ನೀವು ವೈಯಕ್ತಿಕವಾಗಿ ಮಾಡಿಕೊಂಡ್ರೆ ಹೇಗೆ? ಯಾಕೆ ನೀವು ಯಾರನ್ನು ಕರೆಯೊಲ್ಲ, ನೀವೇನು ಇಲ್ಲಿ ಶಾಶ್ವತ ಅಲ್ಲ ಎಂದು ಸಚಿವರು ಹರಿಹಾಯ್ದರು.
ವ್ಯವಸ್ಥೆ ಮಾತ್ರ ಇರೋದು. ನೀವು ಸಾರ್ವಜನಿಕವಾಗಿ ಇರಬೇಕು. ಯಾರೂ ಇಲ್ಲಿ ಶಾಶ್ವತ ಅಲ್ಲ. ನೀವು ನಿವೃತ್ತಿ ಆಗ್ತಿರಿ. ಅಧಿಕಾರ ಸಹ ನಮ್ಮಲ್ಲಿ ಬಹಳ ದಿನ ಇರೋದಿಲ್ಲ. ಆದರೆ ನಿಮ್ಮಲ್ಲಿ ಕೃಷಿಗೆ ಸಂಬಂಧಿಸಿದ ಮಾಹಿತಿಯೇ ಇರೋದಿಲ್ಲ. ನೀವು ಇರ್ತಿರೋ ಇಲ್ಲವೋ? ಮುಂದೆ ಯಾರು ಬರುತ್ತಾರೋ ಗೊತ್ತಿಲ್ಲ. ಆದರೆ ನಾವು ಹೋದ ಮೇಲೆ ಜನ ನೆನಸುವ ಕೆಲಸ ಮಾಡಬೇಕೆಂದು ಹೇಳಿದರು.
ಕೃಷಿ ಸಚಿವರು ವಾರಣಾಸಿಗೆ ಹೋಗಿದ್ದಾರೆ :ಧಾರವಾಡ ಕೃಷಿಮೇಳಕ್ಕೆ ಸಿಎಂ, ಕೃಷಿ ಸಚಿವರ ಗೈರು ವಿಚಾರದ ಬಗ್ಗೆ ನಾನು ಯಾವುದನ್ನು ಮಾತನಾಡಿಲ್ಲ. ಕೃವಿವಿ ಕುಲಪತಿ ಸಿಎಂ ಅವರನ್ನು ಭೇಟಿ ಆಗಿದ್ದಾರೋ, ಇಲ್ವೋ ಗೊತ್ತಿಲ್ಲ. ಕೃಷಿ ಸಚಿವರು ವಾರಣಾಸಿಗೆ ಹೋಗಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.