ಕರ್ನಾಟಕ

karnataka

ETV Bharat / state

ಸಾರಿಗೆ ಸಂಸ್ಥೆಯಿಂದ 9 ಸಾವಿರ ಸಿಬ್ಬಂದಿ ನೇಮಕ: ಸಚಿವ ರಾಮಲಿಂಗಾರೆಡ್ಡಿ - MINISTER RAMALINGA REDDY

ಸಚಿವ ರಾಮಲಿಂಗಾರೆಡ್ಡಿ ಅವರು ಸಾರಿಗೆ ಸಿಬ್ಬಂದಿ ನೇಮಕಾತಿ ಕುರಿತು ಮಾತನಾಡಿದ್ದಾರೆ. 9 ಸಾವಿರ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಗೆ ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.

minister-ramalinga-reddy
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 27ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭ ಉದ್ಘಾಟನೆ (ETV Bharat)

By ETV Bharat Karnataka Team

Published : Nov 15, 2024, 6:46 PM IST

Updated : Nov 15, 2024, 6:58 PM IST

ಹುಬ್ಬಳ್ಳಿ :ಸಾರಿಗೆ ಸಂಸ್ಥೆಗಳಲ್ಲಿ ನೇಮಕಾತಿ ಪ್ರಕ್ರಿಯೆ ಕಳೆದ 7 - 8 ವರ್ಷಗಳಿಂದ ನಡೆದಿರುವುದಿಲ್ಲ. 9 ಸಾವಿರ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಗೆ ಮುಂದಾಗಿದ್ದು, 1 ಸಾವಿರ ಜನರನ್ನ ಅನುಕಂಪದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಮುಂದಿನ 2 ತಿಂಗಳಲ್ಲಿ ನೇಮಕಾತಿ ಪ್ರಕ್ರಿಯೆ ಮುಕ್ತಾಯವಾಗಲಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಇಂದು ಗೋಕುಲ ರಸ್ತೆಯ ಹೆಚ್.ಡಿ.ಬಿ.ಆರ್.ಟಿ.ಎಸ್ ಘಟಕದಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 27ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಚಿವ ರಾಮಲಿಂಗಾರೆಡ್ಡಿ ಮಾತನಾಡಿದರು (ETV Bharat)

ಅಪಘಾತ ಹಾಗೂ ಅಪರಾಧ ರಹಿತ ಸೇವೆ ಸಲ್ಲಿಸಿದ ಚಾಲಕರಿಗೆ ಬೆಳ್ಳಿ ಪದಕ ವಿತರಿಸಲಾಗುತ್ತಿದೆ. ಅಲ್ಲದೇ ಅಪಘಾತ ವಿಮಾ ಯೋಜನೆಯಡಿ ಮೃತಪಟ್ಟ ನೌಕರರ ಕುಟುಂಬಸ್ಥರಿಗೆ ರೂ. 1 ಕೋಟಿ ವಿಮೆಯನ್ನು ವಿತರಣೆ ಮಾಡಲು ಕ್ರಮ ವಹಿಸಲಾಗುವುದು. ಯುಪಿಐ ಮೂಲಕ ಪ್ರಯಾಣಿಕರು ಟಿಕೆಟ್ ಪಡೆಯಬಹುದಾಗಿದೆ. ಸಾರಿಗೆ ಸಂಜೀವಿನಿ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಯೋಜನೆಯಡಿ ನೌಕರರು ಹಾಗೂ ಅವರ ಕುಟುಂಬಸ್ಥರು ಚಿಕಿತ್ಸಾ ಸೌಲಭ್ಯ ಪಡೆಯಬಹುದು ಎಂದರು.

ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಮಾತನಾಡಿ, ಸಾರಿಗೆ ಸಂಸ್ಥೆಗಳಿಗೆ 800 ಬಸ್ ನೀಡುವ ನಿಟ್ಟಿನಲ್ಲಿ ಈಗಾಗಲೇ 584 ಬಸ್‌ಗಳನ್ನು ಒದಗಿಸಲಾಗಿದೆ. ಡಿಸೆಂಬರ್ ಅಂತ್ಯದೊಳಗೆ ಉಳಿದ ಬಸ್‌ಗಳು ಬರಲಿವೆ. ಶಕ್ತಿ ಯೋಜನೆಯು ಭಾರತ ದೇಶದಲ್ಲಿ ಉಚಿತ ಪ್ರಯಾಣ ನೀಡುವ ಮೂಲಕ ದಾಖಲೆ ಮಾಡಿದೆ. ಸರ್ಕಾರದ ಯಶಸ್ವಿ ಕಾರ್ಯಕ್ರಮಗಳು ಮುಂದುವರೆಯಲಿವೆ. ನೌಕರರ ಕುಟುಂಬ ಕಲ್ಯಾಣ ನಿಧಿ ಯೋಜನೆಯಡಿ ರೂ.5 ಲಕ್ಷದ ಬದಲಾಗಿ ರೂ.10 ಲಕ್ಷ ನೀಡಬೇಕು ಎಂದು ಅವರು ತಿಳಿಸಿದರು.

ಪ್ರತಿದಿನ 25 ಲಕ್ಷ ಜನರ ಓಡಾಟ:ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರಾದ ಭರಮಗೌಡ (ರಾಜು) ಅಲಗೌಡ ಕಾಗೆ ಮಾತನಾಡಿ, ಪ್ರತಿದಿನ 5 ಸಾವಿರ ಸಾರಿಗೆ ಬಸ್‌ಗಳಲ್ಲಿ 25 ಲಕ್ಷ ಜನರು ಪ್ರಯಾಣ ಮಾಡುತ್ತಿದ್ದಾರೆ. ಪ್ರತಿದಿನ ಬಸ್‌ಗಳು 16 ಲಕ್ಷ ಕಿ.ಮೀ ಸಂಚಾರ ಮಾಡುತ್ತಿವೆ. ಬಡವರಿಗೆ ಸಾರಿಗೆ ಬಸ್‌ಗಳು ಅನುಕೂಲಕರವಾಗಿವೆ. ಸಾರಿಗೆ ಸಂಸ್ಥೆ ನೌಕರರ ವೇತನ ಪರಿಷ್ಕರಣೆ ಮಾಡಬೇಕಿದೆ. ಗುತ್ತಿಗೆ ಆಧಾರ ಹೊರತುಪಡಿಸಿ ಖಾಯಂ ನೌಕರರ ನೇಮಕಕ್ಕೆ ಮುಂದಾಗಬೇಕು. ಸಂಸ್ಥೆಗೆ 1 ಸಾವಿರ ಕೋಟಿ ವಿಶೇಷ ಅನುದಾನ ನೀಡಬೇಕಾಗಿದೆ. ನೌಕರರು ಕ್ರೀಡೆಯಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದು, ಅವರಿಗೂ ಸಹ ಪ್ರೋತ್ಸಾಹ ನೀಡಬೇಕು. ಅವರು ಸಹ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಯುತ್ತಾರೆ ಎಂದು ಹೇಳಿದರು.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗ ಎಂ. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, 2023ರ ಜೂನ್ 11 ರಿಂದ ಇಲ್ಲಿಯವರೆಗೆ 74.18 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, 1905.70 ಕೋಟಿ ಯೋಜನಾ ವೆಚ್ಚ ಮಾಡಲಾಗಿದೆ. ರೂ. 150 ಕೋಟಿ ವೆಚ್ಚದಲ್ಲಿ 375 ಬಸ್ ಖರೀದಿಸಲಾಗಿದೆ. ರೂ. 60 ಕೋಟಿ ವೆಚ್ಚದಲ್ಲಿ 127 ಬಸ್‌ಗಳಿಗೆ ಇಂದು ಚಾಲನೆ ನೀಡಲಾಗುತ್ತಿದೆ ಎಂದರು.

ಸಾರಿಗೆ ಸಂಜೀವಿನಿ ಯೋಜನೆಯಡಿ ನಗದು ರಹಿತ ಚಿಕಿತ್ಸೆ ನೀಡಲಾಗುತ್ತಿದೆ. ಕಾರವಾರ, ಬೆಳಗಾವಿ ಹಾಗೂ ಗದಗ ಜಿಲ್ಲೆಗಳ ವೈದ್ಯಕೀಯ ವಿಜ್ಞಾನ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಯುಪಿಐ ವಹಿವಾಟಿನ ಮೂಲಕ ರೂ.50 ಕೋಟಿ ಆದಾಯ ಸಂಸ್ಥೆಗೆ ಬಂದಿದೆ. ಪ್ರಯಾಸ ಯೋಜನೆಯಡಿ ಪಿಂಚಣಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ದೀಪಾವಳಿ ಸಂದರ್ಭದಲ್ಲಿ 8.69 ಕೋಟಿ ರೂ. ಆದಾಯವನ್ನು ಗಳಿಸಲಾಗಿದೆ. ಸಂಸ್ಥೆಗೆ ಉನ್ನತ ಸೇವೆ ಮಾಡುವ ನಿಟ್ಟಿನಲ್ಲಿ ನೌಕರರು ಮುಂದಾಗಬೇಕು ಎಂದು ಅವರು ತಿಳಿಸಿದರು.

ನೂತನ ಬಸ್​ಗಳ ಲೋಕಾರ್ಪಣೆ : ಇಂದು 100 ಬಿಎಸ್-6 ನೂತನ ಗ್ರಾಮಾಂತರ ಮಾದರಿ ವಾಹನಗಳನ್ನು ಉದ್ಘಾಟನೆಗೊಳಿಸಲಾಯಿತು. ಈ ವಾಹನಗಳು ಪರಿಸರ ಸ್ನೇಹಿ ಬಿಎಸ್-6 ವಾಹನಗಳಾಗಿದ್ದು, ಎಐಎಸ್-140 ವಾಹನ ಟ್ರ್ಯಾಕಿಂಗ್ ವ್ಯವಸ್ಥೆ, ಪ್ರಯಾಣಿಕರ ಸುರಕ್ಷತೆಗೆ ಸಿಸಿ ಕ್ಯಾಮೆರಾ, ಪ್ಯಾನಿಕ್ ಬಟನ್ ಇತರೆ ಸಾಧನಗಳನ್ನು ಹೊಂದಿವೆ. 350 ಇಲೆಕ್ಟ್ರಿಕ್​ ಬಸ್​ಗಳನ್ನು ಜಿ.ಸಿ.ಸಿ ಮಾದರಿಯಲ್ಲಿ ಸಂಸ್ಥೆಯ ಆಂತರಿಕ ಸಂಪನ್ಮೂಲದಿಂದ ಅಳವಡಿಸಿಕೊಳ್ಳಲಾಗುತ್ತಿದ್ದು, ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ.

ಕ್ರೀಡಾ ಚಟುವಟಿಕೆಗಳ ಪ್ರಶಸ್ತಿ ಪ್ರದಾನ :27ನೇ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಅಂತರ್​ ವಿಭಾಗೀಯ ಕ್ರೀಡೆ ಮತ್ತು ಕಲಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಶಿರಸಿ ವಿಭಾಗವು ವಾಲಿಬಾಲ್, ಥ್ರೋ ಬಾಲ್(ಮಹಿಳೆಯರ) ಹಾಗೂ ಅಥ್ಲೆಟಿಕ್ಸ್​ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಕಬಡ್ಡಿ ಕ್ರೀಡೆಯಲ್ಲಿ ಗದಗ ವಿಭಾಗ ಪ್ರಶಸ್ತಿ ಪಡೆಯಿತು. ಕ್ರಿಕೆಟ್‌ನಲ್ಲಿ ಚಿಕ್ಕೋಡಿ ವಿಭಾಗ ಪ್ರಶಸ್ತಿ ಬಾಚಿಕೊಂಡಿತು. ಸಮೂಹ ನೃತ್ಯದಲ್ಲಿ ಬಿಆರ್‌ಟಿಎಸ್ ಪ್ರಶಸ್ತಿ ಪಡೆಯಿತು.

ಹಳೆ ವಾಹನಗಳ ನವೀಕರಣ : ಡಿಯುಎಲ್‌ಟಿ ಇಲಾಖೆಯಿಂದ 100 ಹಳೆಯ ವಾಹನಗಳನ್ನು ನವೀಕರಣಕ್ಕಾಗಿ ರೂ. 800 ಲಕ್ಷ ಅನುದಾನ ಮಂಜೂರಾಗಿದ್ದು, ಆಗಸ್ಟ್ 2024 ರಿಂದ ಇಲ್ಲಿಯವರೆಗೆ 82 ವಾಹನಗಳ ನವೀಕರಣ ಮುಕ್ತಾಯವಾಗಿದ್ದು, ಇನ್ನುಳಿದ 18, ಬಸ್​ಗಳನ್ನು ಡಿಸೆಂಬರ್‌ರೊಳಗಾಗಿ ಮುಕ್ತಾಯಗೊಳಿಸಲಾಗುವುದು. ಇದರಿಂದ ಸಂಸ್ಥೆಗೆ ರೂ. 34 ಕೋಟಿ ಉಳಿತಾಯವಾಗಲಿದೆ.

ಇದನ್ನೂ ಓದಿ :ಬಸ್​ಗಳಲ್ಲಿ ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯದ ಪ್ರಸ್ತಾವನೆ ಇಲ್ಲ: ಸಚಿವ ರಾಮಲಿಂಗಾರೆಡ್ಡಿ

Last Updated : Nov 15, 2024, 6:58 PM IST

ABOUT THE AUTHOR

...view details