ಬೆಂಗಳೂರು : 15 ದಿನದಲ್ಲಿ ಸಿಎಂ ರಾಜೀನಾಮೆ ಕೊಡಬೇಕು ಎಂದು ವಿಜಯೇಂದ್ರ ಹೇಳುತ್ತಾರೆ. 15 ದಿನದಲ್ಲಿ ಏನೇನು ತಿರುವು ಪಡೆಯುತ್ತೆ ಗೊತ್ತಾಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ನಿನ್ನೆ ಮಾಧ್ಯಮಗಳಲ್ಲಿ ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ. ಕುನ್ಹಾ ವರದಿಯ ಕೆಲವು ಅಂಶಗಳನ್ನು ಪ್ರಕಟಣೆ ಮಾಡಿದ್ದಾರೆ. ಅಂದಿನ ಬಿಜೆಪಿ ಸರ್ಕಾರ ಕೊರೊನಾ ನಿರ್ವಹಣೆ ಮಾಡೋದನ್ನು ಬಿಟ್ಟು, ಜನರ ಜೀವನ ಉಳಿಸೋದನ್ನು ಬಿಟ್ಟು ಹಣ ಮಾಡಿದೆ. ಈಗ ಗೊತ್ತಾಗಿದೆ ತಾಲಿ ಬಜಾವೋ, ದೀಪ್ ಜಲಾವ್ ಇವೆಲ್ಲಾ ಮಾಡ್ತಿದ್ದು ಭ್ರಷ್ಟಾಚಾರ, ಹತ್ಯಾಕಾಂಡ ಮುಚ್ಚಿಹಾಕೋದಕ್ಕೆ. ಸರ್ಕಾರವನ್ನು ಜನ ನಂಬಿದ್ರು. ಸರ್ಕಾರ ಏನು ಹೇಳ್ತಿದ್ರು ಎಲ್ಲಾ ಮಾಡ್ತಿದ್ರು ಜನ. ಔಷಧ, ವ್ಯಾಕ್ಸಿನ್, ಬೆಡ್ ಹಂಚಿಕೆ, ಮಾಸ್ಕ್ ವಿತರಣೆ, ಪಿಪಿಇ ಕಿಟ್ ಖರೀದಿಯನ್ನು ಸರ್ಕಾರ ಮಾಡ್ತು. ಇದೆಲ್ಲಾ ಮಾಡಿಸುತ್ತಿದ್ದದ್ದು ತನಿಖೆಯಲ್ಲಿ ಗೊತ್ತಾಗ್ತಿದೆ ಎಂದು ಹೇಳಿದರು.
''ಬಿಜೆಪಿಯವರು ಹೆಣದ ಮೇಲೆ ಹಣ ಮಾಡ್ತಿದ್ದಾರೆ ಎಂದು ರಿಪೋರ್ಟ್ನಲ್ಲಿ ಗೊತ್ತಾಗಿದೆ. ಪ್ರಧಾನಿಯವರು ₹700 ಕೋಟಿ ಹಗರಣ ಆಗಿದೆ ಅಂತ ಆರೋಪ ಮಾಡ್ತಿದ್ದಾರೆ. ನಮ್ಮ ತೆರಿಗೆ ಬೇಕು. ಸಂಪನ್ಮೂಲ ಬೇಕು. ಮತ್ತೆ ಅವಮಾನ ಮಾಡ್ತಿರಾ. ಅವರ ಸರ್ಕಾರ ಇದ್ದಾಗ ಏನಾಯ್ತು?. ಇದಕ್ಕೆ ಅವರು ಉತ್ತರ ಕೊಡಬೇಕು. ಡಿಮಾನಿಟೈಸೇಷನ್ ಸಮಯದಲ್ಲಿ ಬಾಡಿಗೆ ಭಾಷಣಕಾರರು ಹೇಳಿದ್ದು ಗೊತ್ತಿದ್ಯಾ?. ಕೋವಿಡ್ ವೇಳೆ ಡಿಹೆಚ್ ಬಿ ಗ್ಲೋಬಲ್ ಹಾಂಕಾಂಗ್ ಕಂಪನಿಗೆ ಒಂದು ಲಕ್ಷ ಪಿಪಿ ಇ ಕಿಟ್ ಕೊಡಿ ಎಂದು ಅಂದಿನ ಸಿಎಂ ಯಡಿಯೂರಪ್ಪ ಆದೇಶ ಮಾಡಿದ್ದಾರೆ'' ಎಂದು ದೂರಿದರು.
''ಖರೀದಿಯಾದ 7 ದಿನದ ಒಳಗೆ ಡಿಲಿವರಿ ಕೊಡಬೇಕು. ಇಲ್ಲವಾದ್ರೆ ಪೆನಾಲ್ಟಿ ಹಾಕುತ್ತೇವೆ ಎಂಬ ಷರತ್ತಿಗೆ ಅವರು ಒಪ್ಪಿದ್ದಾರೆ. 10.04.2020 ರಂದು ಮತ್ತೆ ಡಿ ಹೆಚ್ ಬಿ ಗ್ಲೋಬಲ್ನಲ್ಲಿ ಒಂದು ಲಕ್ಷ ಪಿಪಿಇ ಕಿಟ್ ಆರ್ಡರ್ ಮಾಡ್ತಾರೆ. 2104.53 ರೂ. ಒಂದು ಕಿಟ್ಗೆ ವೆಚ್ಚವಾಗುತ್ತೆ. 10.04.2020ರಲ್ಲೇ ಅವತ್ತಿನ ದಿನ ಬಿಗ್ ಫಾರ್ಮಸೆಟಿಕಲ್ಗೂ ಕಿಟ್ ಬೇಕು ಅಂತ ಆರ್ಡರ್ ಮಾಡುತ್ತಾರೆ. ಇದಕ್ಕೆ ತಲಾ 2049.54 ರೂ. ಪಿಪಿಇ ಕಿಟ್ಗೆ ಫಿಕ್ಸ್ ಮಾಡ್ತಾರೆ. ಅದೇ ದಿನ ಡೆಲಿವರಿ ಕಂಡಿಷನ್ಸ್ಗೆ ಆರ್ಡರ್ ಕೊಡ್ತಾರೆ. ಯಡಿಯೂರಪ್ಪ ಮೂರು ಲಕ್ಷ ಪಿಪಿಇ ಕಿಟ್ಗೆ 62.57 ಕೋಟಿ ರೂ. ದರ ನಿಗದಿ ಮಾಡ್ತಾರೆ. ಖರೀದಿ ಆದ ತಕ್ಷಣ ಬೇರೆ ಬೇರೆ ಹಣ ನಿಗದಿ ಮಾಡಿದ್ದರು'' ಎಂದು ಆರೋಪಿಸಿದರು.
ನಿಮ್ಮ ಘನತೆಗೆ ತಕ್ಕಂತೆ ಮಾತನಾಡಿ: ''ಕಾಂಗ್ರೆಸ್ನಲ್ಲಿ ಕೆಪಿಸಿಸಿಯಲ್ಲಿ ಡಿಸಿಎಂ, ಸಿಎಂ ನಡುವೆ ಏನು ನಡೆಯುತ್ತೆ ಅಂತಾ ಪ್ರಧಾನಿಗೆ ಗೊತ್ತಾಗುತ್ತೆ. ಆರೋಪ ಮಾಡಿದ್ದಾರಲ್ಲ ತೋರಿಸಿ ಎಂದು ಚಾಲೆಂಜ್ ಮಾಡುತ್ತೇನೆ. ನಿಮ್ಮ ಘನತೆಗೆ ತಕ್ಕಂತೆ ಮಾತನಾಡಿ. ಸುಳ್ಳಿನ ಕಾರ್ಖಾನೆ ಮಾಲೀಕರಲ್ಲ ನಾವು. ವರದಿಯನ್ನು ನಾನು ಅಧ್ಯಯನ ಮಾಡಿದ್ದೇನೆ. ಯಾವ ರೀತಿ ಯಡಿಯೂರಪ್ಪ, ಶ್ರೀರಾಮುಲು ಹೆಣದ ಮೇಲೆ ಹಣ ಮಾಡಿದ್ರು ಅಂತ ಸಾಕ್ಷಿಯಿದೆ. ಚೀನಾ ಹಾಂಕಾಂಗ್ ಕಂಪನಿಯ ಬಿಗ್ ಫಾರ್ಮಸಿ ಹೇಳಿದ ಹಾಗೆ ಹಣ ಫಿಕ್ಸ್ ಮಾಡಿದ್ದರು'' ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಜಯದೇವ ಬೇರೆ ಬೇರೆ ಇಲಾಖೆಯಿಂದ ಎಷ್ಟು ಪಿಪಿಇ ಕಿಟ್ ತಗೊಂಡಿದ್ದಾರೆ ಅನ್ನೋದು ಇನ್ನೂ ಹೊರಬಂದಿಲ್ಲ. ಚೈನಾದಿಂದ ಏನೂ ತರಬಾರದು ಅಂತ ಪ್ರಧಾನಿ ಹೇಳ್ತಾರೆ. ಕೇಂದ್ರ ಸರ್ಕಾರ ನೀತಿ ಉಲ್ಲಂಘಿಸಿ ಚೈನಾದಿಂದ ತಂದಿದ್ದು ದೇಶದ್ರೋಹ ಅಲ್ವಾ? ಎಂದು ಪ್ರಶ್ನಿಸಿದರು.
ಬಿಜೆಪಿ ಸರ್ಕಾರ ಡೆತ್ ರಿಪೋರ್ಟ್ನ್ನು ಮುಚ್ಚಿಟ್ಟಿದೆ: ''ನಾವೇನಾದ್ರು ತರಿಸಿದ್ರೆ ಏನು ಅಂತಿದ್ರಿ. ಇಲ್ಲೇ ಸಿಗುವಾಗ ಚೈನಾದಿಂದ ತರುವ ಅವಶ್ಯಕತೆ ಏನಿತ್ತು?. ಬಿಜೆಪಿಯವರ ನಿರ್ಲಕ್ಷ್ಯದಿಂದ ಜನ ಸತ್ತಿರೋದು. ಕೊರೊನಾದಿಂದಲ್ಲ. ಅಂದಿನ ಬಿಜೆಪಿ ಸರ್ಕಾರ ಡೆತ್ ರಿಪೋರ್ಟ್ನ್ನು ಮುಚ್ಚಿಟ್ಟಿದೆ. 1.23 ಲಕ್ಷ ಜನ ತೀರಿ ಹೋಗಿದ್ದವರ ವರದಿಯನ್ನು ಸಲ್ಲಿಸಿಲ್ಲ. ರಾಜ್ಯ ಸರ್ಕಾರ ಮರಣ ಹೊಂದಿದ ಮಾಹಿತಿಯನ್ನು ತಪ್ಪಾಗಿ ಕೊಟ್ಟಿದೆ. ಯಾರದಪ್ಪ ಮಾಹಿತಿ ಇದು, ಮೋದಿ ಮಾಮಂದು ಅಲ್ವಾ?. ಕರ್ನಾಟಕದಲ್ಲಿ ಹತ್ಯಾಕಾಂಡ ನಡೆದಿದೆ. ದುಡ್ಡಿನ ಆಸೆಯಿಂದ ಲಕ್ಷಾಂತರ ಜನ ಸತ್ತಿದ್ದಾರೆ. ಇದರ ಅಂಕಿ-ಅಂಶ ಕೇಂದ್ರ ಸರ್ಕಾರ ಕೊಟ್ಟಿದೆ. ಮೋದಿಯವರ ಮಾಹಿತಿ ಇದು. ಕಳಪೆ ಇಂಜೆಕ್ಷನ್, ಕಳಪೆ ಪಿಪಿಇ ಕಿಟ್ ಇದಕ್ಕೆ ಏನು ಹೇಳ್ತಿರಾ?'' ಎಂದು ಟೀಕಿಸಿದರು.
ಚೀನಾಕ್ಕೆ ಹೋಗುವ ಅವಶ್ಯಕತೆ ಏನಿತ್ತು? ''ವರದಿಯಲ್ಲಿ ಪ್ರೂವ್ ಆಗಿದ್ಯಲ್ಲಾ?. ಯಡಿಯೂರಪ್ಪ ಅವರ ಮೇಲೆ ಏನು ಕ್ರಮ ತೆಗೆದುಕೊಳ್ತಿರಾ ಮೋದಿಯವರೇ?. ಮೋದಿಯವರು ಮೇಕ್ ಇನ್ ಇಂಡಿಯಾ ಆಗಬೇಕು ಅಂತಾರೆ. ಆದ್ರೆ ಬಿಜೆಪಿಯವರು ಇದನ್ನು ಹಾಳು ಮಾಡ್ತಾರೆ. ದೇಶದಲ್ಲೆ ಲೋಕಲ್ ಮಾರ್ಕೆಟ್ನಲ್ಲಿ ಪಿಪಿಇ ಕಿಟ್ ಇದ್ರು ಯಡಿಯೂರಪ್ಪ ಅವರು ಏಕೆ ಚೀನಾದಿಂದ ತರಿಸಿದ್ರು. 18 ಲಕ್ಷ ಪಿಪಿಇ ಕಿಟ್ ಕರ್ನಾಟಕದಲ್ಲಿ ಸಿಗುತ್ತಿರುವಾಗ ಚೀನಾಕ್ಕೆ ಹೋಗುವ ಅವಶ್ಯಕತೆ ಏನಿತ್ತು?. ಮನುಷ್ಯರಾ ನೀವು? ನಾಚಿಕೆ ಆಗಬೇಕು ನಿಮಗೆ. ಸಂದಿಗ್ಧ ಸ್ಥಿತಿಯಲ್ಲಿ ದುಡ್ಡು ಬೇಕಿತ್ತಾ ನಿಮಗೆ'' ಎಂದು ಪ್ರಶ್ನಿಸಿದರು.
ಜನರ ಬಲಿ ತಗೊಂಡಿರೋದಕ್ಕೆ ಉತ್ತರ ಕೊಡಬೇಕು : ''ಕರ್ನಾಟಕದ ಬಗ್ಗೆ ಮೋದಿಯವರಿಗೆ ಗೌರವ ಇದ್ರೆ ರಾಜ್ಯಾಧ್ಯಕ್ಷರು ಅಪ್ಪಾಜಿನ ಕೂಡಲೇ ತೆಗೆಯಬೇಕು. ಮಹಾರಾಷ್ಟ್ರದಲ್ಲಿ ನಮಗೆ ಅವಮಾನ ಮಾಡ್ತಿರಾ. ಮಹಾರಾಷ್ಟ್ರ ಬಿಜೆಪಿ ಮೇಲೆ ಕಾನೂನು ಹೋರಾಟಕ್ಕೆ ಚರ್ಚೆ ಮಾಡುತ್ತಿದ್ದೇವೆ. ಸಿಎಂ, ಡಿಸಿಎಂ, ಖರ್ಗೆ ಕುಟುಂಬದಲ್ಲಿ ಏನಾಗ್ತಿದೆ ಗೊತ್ತಿದೆ ನಿಮಗೆ. ಇದು ಗೊತ್ತಾಗಲ್ವಾ?. ಕೋವಿಡ್ ಅಕ್ರಮ ಬಗ್ಗೆ ಟ್ರೈಲರ್ ನಾವು ತೋರಿಸ್ತಿದ್ದೇವೆ. ಇದು ಹೇಗೆ ಹೊರಗೆ ಬಂತೋ ಗೊತ್ತಿಲ್ಲ. ಇದಕ್ಕೆ ಉತ್ತರ ಕೊಡಬೇಕು ಬಿಜೆಪಿಯವರು. ಜನರ ಬಲಿ ತಗೊಂಡಿರೋದಕ್ಕೆ ಉತ್ತರ ಕೊಡಬೇಕು. ಲಾಜಿಕಲ್ ಎಂಡ್ಗೆ ತಗೊಂಡು ಹೋಗುತ್ತೇವೆ'' ಎಂದು ಖರ್ಗೆ ಹೇಳಿದರು.
ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಅಷ್ಟೇ : ಮುಡಾ ಹಗರಣದಿಂದ ಆಚೆ ಬರೋದಕ್ಕೆ ಈ ರೀತಿ ಪ್ಲಾನ್ ಮಾಡ್ತಿದೆ ಎಂಬ ವಿಜಯೇಂದ್ರ ಆರೋಪದ ವಿಚಾರವಾಗಿ ಪ್ರತಿಕ್ರಿಯಿಸಿ, ಅದು ಪ್ರಕರಣ, ಹಗರಣ ಅಲ್ಲ. ಐಟಿ, ಇಡಿ, ಸಿಬಿಐ ತನಿಖೆ ಮಾಡ್ತಿದೆ. ನಿಮ್ಮ ಕೈಯಲ್ಲೇ ಇದ್ಯಲ್ಲಾ ಮಾಡ್ಲಿ. ಯಾರು ಬೇಡ ಅಂದಿದ್ದು. ಬರೀ ನೋಟಿಸ್ ಕೊಡಿಸೋದೆ ಮಾಡ್ತಿದ್ದಾರಲ್ಲ. ಅಂಕಿ -ಅಂಶಗಳ ಬಗ್ಗೆ ಮಾತಾಡಿದ್ದಾರಾ?. ಉಡಾಫೆ ಉತ್ತರ ಕೊಡಬೇಡಿ. ಹೆದರಿಕೆ, ಬೆದರಿಕೆ ಹಾಕುವುದಿಲ್ಲ. ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಅಷ್ಟೇ. ಯಡಿಯೂರಪ್ಪ ಇರಬಹುದು, ಬೊಮ್ಮಾಯಿ ಇರಬಹುದು. ಪ್ರಿಯಾಂಕ್ ಖರ್ಗೆ, ಡಿಸಿಎಂ, ಸಿಎಂಗೆ ಉತ್ತರ ಕೊಡಬೇಕಿಲ್ಲ. ಜನರಿಗೆ ಕೊಡಿ ಎಂದು ಒತ್ತಾಯಿಸಿದರು.
ಇದನ್ನೂ ಓದಿ :ಅಂದಾಜಿನ ಪ್ರಕಾರ ಕೋವಿಡ್ ವೇಳೆ ₹ 10 - 15 ಸಾವಿರ ಕೋಟಿಯಷ್ಟು ಭ್ರಷ್ಟಾಚಾರ ನಡೆದಿದೆ: ಸಿಎಂ ಸಿದ್ದರಾಮಯ್ಯ