ಬೆಳಗಾವಿ: "ಕರ್ನಾಟಕ ಗಡಿ ಹೊಂದಿರುವ ಮಹಾರಾಷ್ಟ್ರ ಕನ್ನಡ ಮಾಧ್ಯಮಗಳ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ, ರಾಜ್ಯದಲ್ಲಿ ಮಕ್ಕಳಿಗೆ ಕೊಡುವಂತಹ ಯೋಜನೆಗಳನ್ನು ವಿಸ್ತರಣೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗುವುದು" ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.
ಮಹಾರಾಷ್ಟ್ರದ ಕನ್ನಡ ಶಾಲೆಗಳ ಮಕ್ಕಳಿಗೆ ರಾಜ್ಯ ಸರ್ಕಾರದ ಯೋಜನೆಗಳ ಲಾಭ ಸಿಗಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಮಹಾರಾಷ್ಟ್ರ ಸರ್ಕಾರ ಇದನ್ನು ಮಾಡಿದರೆ ಒಳ್ಳೆಯದು. ನಾವು ಒಬ್ಬರಿಗೆ ಕೊಡೋದು ಎಷ್ಟು ಸರಿ ಎನ್ನುವುದು ಯೋಚಿಸಿ ನೋಡಬೇಕು. ಈ ಕುರಿತು ಕಾನೂನು ತಜ್ಞರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವೆ. ಮಕ್ಕಳಿಗೆ ಶೂಗಳನ್ನು ಕೊಡುವುದು ಒಳ್ಳೆಯದು. ನಮ್ಮಿಂದ ಏನೂ ತೊಂದರೆಯಾಗುವುದಿಲ್ಲ ಅಂತಾದರೆ ನಾವು ಆ ಮಕ್ಕಳಿಗೆ ಶೂ ಹಾಗೂ ವಿವಿಧ ಯೋಜನೆಗಳನ್ನು ವಿತರಣೆ ಮಾಡುತ್ತೇವೆ" ಎಂದು ಘೋಷಿಸಿದರು.
"ವಿಜಯೇಂದ್ರ ಅವರಿಗೆ ಸಿಬಿಐ ಜೊತೆಗೆ ಅಡ್ಜಸ್ಟ್ಮೆಂಟಿಗೆ ಸರಿಯಾಗಿತ್ತು. ಹೀಗಾಗಿ ಅದೇ ತನಿಖೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಸಿಬಿಐ ತನಿಖಾ ಸಂಸ್ಥೆಗೆ ಇರಬೇಕಾಗಿದ್ದ ಮೂಲ ಉದ್ದೇಶವನ್ನೇ ಕಳೆದುಕೊಂಡಿದೆ. ಇದರಿಂದ ವಿಜಯೇಂದ್ರ ಅವರಿಗೆ ಮತ್ತಷ್ಟು ಅನುಕೂಲವಾಗುತ್ತದೆ. ಕಾಂಗ್ರೆಸ್ ಇದ್ದಾಗ ಸಿಬಿಐ ತನಿಖೆಗೆ ಬೇಡ ಅಂತ ಇವರೇ ಹೇಳುತ್ತಿದ್ದರು." ಎಂದು ವಕ್ಫ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಹೇಳಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ತಿರುಗೇಟು ನೀಡಿದರು.
"ಪ್ರಕರಣವನ್ನು ಸಿಬಿಐ ಅಥವಾ ಎಸ್ಐಟಿಗೆ ನೀಡಿದರೂ, ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂಬುದು ನನ್ನ ಉದ್ದೇಶವಾಗಿದೆ. ಬಿಜೆಪಿಯವರು ಅವರ ಹಣೆಬರಹಕ್ಕೆ ಸ್ವಂತ ಶಕ್ತಿಯ ಮೇಲೆ ಸರ್ಕಾರ ನಡೆಸಿಲ್ಲ. ಬಿಜೆಪಿಯವರದ್ದು ಎಲ್ಲ ಫ್ಲಾಪ್ ಶೋ" ಎಂದು ಆಕ್ರೋಶ ವ್ಯಕ್ತಪಡಿಸಿದರು.