ಬೆಳಗಾವಿ:ಕಂಡಕ್ಟರ್ ಮೇಲೆ ಪೋಕ್ಸೋ ಕೇಸ್ ವಿಚಾರದಲ್ಲಿ ಮಾರಿಹಾಳ ಪೊಲೀಸ್ ಠಾಣೆ ಸಿಪಿಐ ತಮ್ಮ ಕರ್ತವ್ಯ ನಿಭಾಯಿಸುವುದರಲ್ಲಿ ವಿಫಲರಾಗಿದ್ದಾರೆ. ಅವರು ಯಾರ ಒತ್ತಡಕ್ಕೆ ಮಣಿದರು ಅಂತಾ ಅವರನ್ನೇ ಕೇಳಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಬೆಳಗಾವಿ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನನ್ನ ಮತ್ತು ಯಾರ ಗಮನಕ್ಕೂ ಅವರು ಬಂದಿಲ್ಲ. ನಾನು ಮತ್ತು ಸಹೋದರ ಚನ್ನರಾಜ ಅವರು ಪೊಲೀಸ್ ಕಮಿಷನರ್ ಜೊತೆಗೆ ಅವತ್ತು ರಾತ್ರಿ 11 ಗಂಟೆವರೆಗೆ ಸಂಪರ್ಕದಲ್ಲಿ ಇದ್ದೆವು. ತ್ವರಿತವಾಗಿ ಕ್ರಮ ತೆಗೆದುಕೊಳ್ಳದೇ ಕೂಲಂಕಷವಾಗಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಅಂತಾನೇ ಹೇಳಿದ್ದೆವು . ಹೀಗೆ ಹೇಳಿದಾಗಲೂ ರಾತ್ರೋ ರಾತ್ರಿ 12 ಗಂಟೆಗೆ ಪೋಕ್ಸೋ ಕೇಸ್ ಹಾಕಿದ್ದಾರೆ. ಹಾಗಾಗಿ, ಈ ಬಗ್ಗೆ ತನಿಖೆ ನಡೆಸುತ್ತೇವೆ. ಈ ಪ್ರಕರಣ ಬಗ್ಗೆ ಗೃಹ ಸಚಿವರು ಮತ್ತು ಡಿಜಿ ಅವರ ಜೊತೆಗೂ ಮಾತನಾಡಿದ್ದೇನೆ ಎಂದು ಹೇಳಿದರು.
‘ಕಂಡಕ್ಟರ್ ಮೇಲಿನ ಹಲ್ಲೆ ಖಂಡಿಸುತ್ತೇನೆ’:ಕಂಡಕ್ಟರ್ ಮೇಲಿನ ಹಲ್ಲೆಯನ್ನು ಖಂಡಿಸುತ್ತೇನೆ. ನಾವೆಲ್ಲರೂ ಸಹೋದರತ್ವದಿಂದ ಚೆನ್ನಾಗಿದ್ದೇವೆ. ಘಟನೆ ತಿಳಿದ ಐದೇ ನಿಮಿಷಕ್ಕೆ ನಾನು ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರಿಗೆ ಕರೆ ಮಾಡಿದ್ದೆ. ಆಗ ಅವರು ಬೆಂಗಳೂರಿನಲ್ಲಿದ್ದರು. ಡಿಸಿಪಿ ರೋಹನ್ ಜಗದೀಶ ಅವರಿಂದ ಮಾಹಿತಿ ಪಡೆದುಕೊಂಡಿದ್ದೆ. ಅಲ್ಲದೇ ಯಾರು ಸರ್ಕಾರಿ ನೌಕರನ ಮೇಲೆ ಕೈ ಮಾಡಿದ್ದಾರೆ ಅವರನ್ನು ತಕ್ಷಣ ಬಂಧಿಸುವಂತೆ ನಿರ್ದೇಶನ ನೀಡಿದ್ದೆ ಎಂದರು.
ಇದರಲ್ಲಿ ರಾಜಕೀಯ ಮಾಡೋದನ್ನು ನಾನು ಒಪ್ಪುವುದಿಲ್ಲ:ಕರ್ನಾಟಕ ಸುವರ್ಣ ಮಹೋತ್ಸವ ಆಚರಿಸುವ ಈ ಸಂದರ್ಭದಲ್ಲಿ 10 ಜನ ಪುಂಡರು ಬಂದು ಭಾಷಾ ವಿವಾದವನ್ನು ಎಳೆದು ತಂದು, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದನ್ನು ನಾನು ಖಂಡಿಸುತ್ತೇನೆ. ಬೆಳಗಾವಿಯಲ್ಲಿ ಎಲ್ಲರೂ ಗೌರವ ಮತ್ತು ಭ್ರಾತೃತ್ವದಿಂದ ಬಾಳುತ್ತಿದ್ದೇವೆ. ನನ್ನ ಕ್ಷೇತ್ರದಲ್ಲಿ ಇಡೀ ಮರಾಠಿಗರು ಮತ ಹಾಕಿ ಗೆಲ್ಲಿಸುತ್ತಾರೆ. ಯಾಕೆಂದರೆ ಭಾಷಾ ವಿವಾದವನ್ನು ನಾವು ಬೇರು ಸಮೇತ ಇಲ್ಲಿ ಕಿತ್ತು ಹಾಕಿದ್ದೇವೆ. ಹಬ್ಬ ಹರಿದಿನ ಸೇರಿ ರಜಾ ದಿನಗಳನ್ನು ಬಿಟ್ಟು ನಮಗಾಗಿ ಸಾರಿಗೆ ಸಿಬ್ಬಂದಿ ಸೇವೆ ಸಲ್ಲಿಸುತ್ತಾರೆ. ಇಂಥ ಸಂದರ್ಭದಲ್ಲಿ ಅವರ ಮೇಲೆ ಕೈ ಮಾಡಿದ್ದು, ಅಕ್ಷಮ್ಯ ಅಪರಾಧ. ತಪ್ಪಿತಸ್ಥ ಕಿಡಿಗೇಡಿಗಳಿಗೆ ಶಿಕ್ಷೆ ಆಗುವ ನಿಟ್ಟಿನಲ್ಲಿ ನಾವೆಲ್ಲಾ ನೋಡಿಕೊಳ್ಳುತ್ತೇವೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದರು.
ಕಾನೂನು ಸುವ್ಯವಸ್ಥಿತ ದೃಷ್ಟಿಯಿಂದ ಇದೆಲ್ಲ ಇಲ್ಲಿಗೆ ನಿಲ್ಲಿಸಿ;ಕಂಡಕ್ಟರ್ ಮೇಲಿನ ಪೋಕ್ಸೊ ಕೇಸ್ ತನಿಖೆ ನಡೆಯುತ್ತಿದೆ. ಈಗಾಗಲೇ ಸಾರಿಗೆ ಸಚಿವರು ಹೇಳಿದ್ದಾರೆ. ಬಸ್ನಲ್ಲಿ 90 ಜನ ಪ್ರಯಾಣಿಸುತ್ತಿದ್ದರು ಅಂತಾ. ಆದರೆ, ಈ ರೀತಿ ಪೋಕ್ಸೊ ಕೇಸ್ ಹಾಕಿದ್ದಾರೆ. ಈ ಬಗ್ಗೆ ತನಿಖೆಯಾಗಲಿ, ಸತ್ಯಾಂಶ ಹೊರಗೆ ಬರುತ್ತದೆ. ಕರ್ನಾಟಕ ಮತ್ತು ಬೇರೆ ರಾಜ್ಯ ಬೇರೆ ಅಲ್ಲ. ದೇಶ ಅಂತಾ ಬಂದಾಗ ನಾವೆಲ್ಲರೂ ಒಂದೇ. ಆ ರಾಜ್ಯದ ಜನರು ನಿನ್ನೆ ನಮ್ಮ ಬಸ್ ಚಾಲಕ, ನಿರ್ವಾಹಕರಿಗೆ ಧಮ್ಕಿ ಕೊಡುವುದನ್ನು ಗಮನಿಸಿದ್ದೇನೆ. ನಾವು ನಾವೇ ಹೊಡೆದಾಡುವುದಲ್ಲ. ಎಲ್ಲರೂ ಬಹಳಷ್ಟು ಪ್ರಬುದ್ಧರಾಗಿ ವರ್ತಿಸಬೇಕಾಗುತ್ತದೆ. ಎಲ್ಲರಿಗೂ ಅವರವರ ಭಾಷೆ ಮೇಲೆ ಅಭಿಮಾನ ಇರುತ್ತದೆ. ಹಾಗಾಗಿ, ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಇದೆಲ್ಲಾ ಇಲ್ಲಿಗೆ ನಿಲ್ಲಬೇಕು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಮನವಿ ಮಾಡಿಕೊಂಡರು.