ಬೆಂಗಳೂರು : ರಾಜ್ಯದಲ್ಲಿ ಸರ್ಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ 2015ರ ಪೂರ್ವದಲ್ಲಿ ವಾಸದ ಮನೆ ಕಟ್ಟಡ ನಿರ್ಮಿಸಿಕೊಂಡು ವಾಸಿಸುತ್ತಿರುವ ಮನೆಗಳನ್ನು ಸಕ್ರಮಗೊಳಿಸುವ ಸಲುವಾಗಿ ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ರ ಕಲಂ 94 ಸಿ ಮತ್ತು 94 ಸಿಸಿ ಅಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ವಿಧಾನಸಭೆಯಲ್ಲಿ ತಿಳಿಸಿದರು.
ಪ್ರಶ್ನೋತ್ತರ ವೇಳೆ ಉಡುಪಿ ಕ್ಷೇತ್ರದ ಬಿಜೆಪಿ ಶಾಸಕ ಯಶ್ಪಾಲ್ ಸುವರ್ಣ ಅವರು ಪ್ರಶ್ನೆ ಕೇಳಿ, 94 ಸಿ ಮತ್ತು 94 ಸಿಸಿ ಕಾನೂನಿನಡಿ ನಿವೇಶನ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು. ಇದಕ್ಕೆ ಉತ್ತರ ನೀಡಿದ ಸಚಿವರು, 2016, 2018, 2019, 2021, 2022 ರ ಮಾರ್ಚ್ 31ರೊಳಗೆ 5 ಬಾರಿ ನಿವೇಶನ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು. ಮಾಹಿತಿ ಕೊರತೆ ಎಂದು ಹಲವು ಬಾರಿ ಕಾಲಾವಕಾಶ ನೀಡಿದ್ದೇವೆ ಎಂದರು.
ಔಚಿತ್ಯ ತಿರಸ್ಕಾರಗೊಳ್ಳುವ ಸಾಧ್ಯತೆ : ನ್ಯಾಯಾಲಯಗಳು ಒಂದು ಬಾರಿ ಎಂದು ಎಷ್ಟು ಬಾರಿ ಕಾಲಾವಾಕಾಶ ನೀಡುತ್ತೀರಾ? ಎಂದು ಆಕ್ಷೇಪ ವ್ಯಕ್ತಪಡಿಸುತ್ತಿವೆ. ಕಾಲಾವಕಾಶ ನೀಡುವ ಮೂಲಕ ಅಕ್ರಮಗಳನ್ನು ಸಕ್ರಮಗೊಳಿಸಲಾಗುತ್ತಿದೆ ಎಂಬ ಆಕ್ಷೇಪವು ನ್ಯಾಯಾಲಯದಿಂದ ಬಂದಿದೆ. ವಕೀಲರು ನನಗೆ ನೀಡಿರುವ ಮಾಹಿತಿ ಪ್ರಕಾರ, ಸುಪ್ರೀಂಕೋರ್ಟ್ ತಡೆ ನೀಡಿದ್ದ ಅಕ್ರಮ-ಸಕ್ರಮ ಕಾಯ್ದೆ ವಿಚಾರಣೆ ಮಹತ್ವದ ಘಟ್ಟ ತಲುಪಿದೆ. ಬಹುತೇಕ ಕಾಯ್ದೆಯ ಔಚಿತ್ಯ ತಿರಸ್ಕಾರಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದರು.
94 ಸಿ ಅಡಿ ರಾಜ್ಯಾದ್ಯಂತ 6,26,058 ಜನ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 1.63 ಲಕ್ಷ ಅರ್ಜಿಗಳು ಮಂಜೂರಾಗಿವೆ. 4,12,056 ಅರ್ಜಿಗಳು ಅನರ್ಹ ಎಂದು ತಿರಸ್ಕರಿಸಲಾಗಿದೆ. 94 ಸಿಸಿ ಅಡಿ 2,12,727 ಅರ್ಜಿಗಳು ಸ್ವೀಕಾರವಾಗಿದ್ದು, 69,236 ಅರ್ಜಿಗಳಿಗೆ ಮಂಜೂರಾತಿ ನೀಡಲಾಗಿದೆ. 1,28,531 ಅರ್ಜಿಗಳನ್ನು ಅನರ್ಹ ಎಂದು ತಿರಸ್ಕರಿಸಲಾಗಿದೆ. ಬಾಕಿ 50 ಸಾವಿರ ಉಳಿದಿದ್ದು, ಅವುಗಳನ್ನು ಶೀಘ್ರವೇ ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿದರು.
ತಿರಸ್ಕಾರಗೊಂಡಿರುವುದರಲ್ಲಿ ಪಕ್ಷಭೇದವಿಲ್ಲ. ಬಿಜೆಪಿ ಸರ್ಕಾರವೇ ಹೆಚ್ಚು ಅರ್ಜಿ ತಿರಸ್ಕರಿಸಿದೆ. ಅರ್ಜಿ ಸಲ್ಲಿಸಿದವರಲ್ಲಿ ಮತ್ತು ಮಂಜೂರು ಪಡೆದವರಲ್ಲಿ ಅನರ್ಹರೇ ಹೆಚ್ಚಿದ್ದಾರೆ. ಇತ್ತೀಚೆಗೆ ಪರಿಶೀಲನೆ ವೇಳೆ ನೆಲಮಂಗಲದಲ್ಲಿ ಒಂದು ನಿಯಮ ಬಾಹಿರ ಮಂಜೂರಾತಿ ಕಂಡುಬಂದಿತ್ತು. ಇದಕ್ಕೆ ಸಂಬಂಧಪಟ್ಟಂತೆ ತಹಶೀಲ್ದಾರರನ್ನು ಅಮಾನತುಪಡಿಸಿದ್ದಾಗಿ ಹೇಳಿದರು.
2015ರವರೆಗೆ ಮನೆ ನಿರ್ಮಿಸಿಕೊಂಡವರಿಗೆ ಮಂಜೂರಾತಿ ನೀಡಬೇಕು ಎಂಬ ನಿಯಮ ಇದೆ. ಈಗ ಶಾಸಕರು 2019 ರವರೆಗೂ ಮನೆ ನಿರ್ಮಿಸಿದವರಿಗೆ ಅವಕಾಶ ಮಾಡಿಕೊಡಿ ಎನ್ನುತ್ತಿದ್ದಾರೆ. ಇದರ ಅರ್ಥ 2015 ರ ನಂತರವೂ ಉದ್ದೇಶಪೂರಕವಾಗಿ ಮನೆ ನಿರ್ಮಿಸಿಕೊಂಡಿದ್ದಾರೆ ಅಲ್ಲವೇ?. ಈ ರೀತಿ ಎಷ್ಟು ಬಾರಿ ಅವಕಾಶ ನೀಡುವುದು ಎಂದು ಪ್ರಶ್ನಿಸಿದರು. ಈ ಬಾರಿ ಹಲವು ಶಾಸಕರು ಮತ್ತೊಂದು ಅವಕಾಶ ನೀಡುವಂತೆ ಹೇಳಿದ್ದಾರೆ ಎಂದು ಪುನರ್ ಉಚ್ಚರಿಸಿದರು.