ಕಂದಾಯ ಸಚಿವ ಕೃಷ್ಣಬೈರೇಗೌಡ (ETV Bharat) ಬೆಂಗಳೂರು : ಯಾರ ಚಾರ್ಜ್, ಯಾರ ಕೌಂಟರ್ ನನಗೆ ಬೇಕಿಲ್ಲ. ಇದು ಪ್ರಪಂಚದ ಅತಿ ದೊಡ್ಡ ಹಗರಣ. ಯಾರು ತಪ್ಪು ಮಾಡಿದ್ದಾರೋ, ಅವರಿಗೆ ಶಿಕ್ಷೆಯಾಗಬೇಕು. ಯಾರಿಗೆ ಅನ್ಯಾಯ ಆಗಿದೆಯೋ ಅವರಿಗೆ ನ್ಯಾಯ ಸಿಗಬೇಕು. ಇದರಲ್ಲಿ ಯಾರೇ ಇರಲಿ ವಿಷಯಾಂತರ ಬೇಡ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಹೆಚ್ಡಿಕೆ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ವಿಕಾಸಸೌಧದಲ್ಲಿ ಇಂದು ಸಂಜೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾಗರಿಕ ಸಮಾಜ ತಲೆತಗ್ಗಿಸುವ ಪ್ರಕರಣ ಇದಾಗಿದೆ. ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು ಕರೆ ಮಾಡಿ, ಈ ಘಟನೆ ನೆನಸಿಕೊಳ್ಳೋಕೆ ಆಗ್ತಿಲ್ಲ ಅಂತ ಕಣ್ಣೀರಿಟ್ರು. ನನ್ನ ಗುರಿ ನನ್ನ ಉದ್ದೇಶ ಇಷ್ಟೇ. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆಯಾಗಬೇಕು. ಅದನ್ನ ಬಿಟ್ಟು ವಿಷಯಾಂತರ ಮಾಡುವುದು ಬೇಡ. ನನ್ನ ಮೇಲೆ ವೈಯುಕ್ತಿಕ ಹೇಳ್ತಾರೆ ಅಂತ ಬೇಕಿಲ್ಲ. ನಾನು ಇರುವುದರಲ್ಲೇ ಸಭ್ಯತೆ ಕಾಪಾಡಿಕೊಂಡಿದ್ದೇನೆ ಎಂದು ಹೇಳಿದರು.
ನಾನು ನನ್ನ ಭಾವನೆ ಹೇಳಿದ್ದೇನೆ. ತನಿಖೆ ನಿಷ್ಪಕ್ಷಪಾತವಾಗಿ ಆಗಬೇಕು. ಅನ್ಯಾಯ ಆದವರಿಗೆ ನ್ಯಾಯ ಸಿಗಬೇಕು. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ನನ್ನ ಮೇಲೆ ಆರೋಪ ಮಾಡಿದ್ರೆ ಸಂಬಂಧವಿಲ್ಲ. ವಿಷಯಾಂತರಕ್ಕೆ ನಾನು ಬಲಿಯಾಗುವುದಿಲ್ಲ. ಮೂಲ ಅನ್ಯಾಯ ಏನಾಗಿದೆ ಗಮನಕೊಡಿ. ನ್ಯಾಯ ಕೊಡಿಸುವ ಪ್ರಯತ್ನ ಎಲ್ಲರೂ ಮಾಡಬೇಕು ಎಂದರು.
ಮಾಡಬಾರದ್ದನ್ನು ಮಾಡಿ ಜಾತಿ ಧರ್ಮದ ಹೆಸರಿನಲ್ಲಿ ರಕ್ಷಣೆ ಪಡೆಯುವುದು ಸರಿಯಲ್ಲ. ಅದರಂತ ಹೀನಾಯ ಇನ್ಯಾವುದೂ ಇಲ್ಲ. ತನಿಖೆಯನ್ನು ಮಾಡಲಿ. ತನಿಖೆಗೆ ಎಲ್ಲರೂ ಸಹಕರಿಸಲಿ. ತನಿಖೆ ಬಿಟ್ಟು ಬೇರೆಡೆ ಗಮನ ಸೆಳೆಯೋದು ಸರಿಯಲ್ಲ. ಇಂತಹ ದೌರ್ಭಾಗ್ಯದ ಘಟನೆ ಎಲ್ಲಿದೆ?. ಪ್ರಪಂಚದ ಅತ್ಯಂತ ದೊಡ್ಡ ಲೈಂಗಿಕ ಹಗರಣ ಇದು ಎಂದು ಹೇಳಿದರು.
ಅವರಿಬ್ಬರು ಭೇಟಿ ಮಾಡಿರಲಿಲ್ವೇ?, ಅವರಿಬ್ಬರು ಏನು ಮಾತನಾಡಿದ್ರು. ಇದರ ಬಗ್ಗೆಯೂ ಮಾತನಾಡಲಿ ಅಲ್ವೇ. ಡಿ. ಕೆ ಶಿವಕುಮಾರ್ ಅವರ ಪಾತ್ರ ಇದ್ದರೆ ತನಿಖೆ ಮಾಡಲಿ. ಇವರ ಆರೋಪ ಮೂಲ ಪ್ರಕರಣವೇ ಮುಚ್ಚಿಹೋಗ್ತಿದೆ ಎಂದು ಹೆಚ್ ಡಿಕೆ ಹೇಳಿಕೆಗೆ ತಿರುಗೇಟು ನೀಡಿದರು.
ಬಳ್ಳಾರಿಯಲ್ಲಿ ಏನು ನಡೆಯುತ್ತಿತ್ತು. ಸಂವಿಧಾನದಿಂದ ಅಲ್ಲಿ ಹೊರಗಿದ್ದರು. ಒಂದು ಕಡೆ ಕಾನೂನಿಗೆ ಬಗ್ಗಲೇಬೇಕಾಗುತ್ತದೆ. ಕಾನೂನಿನ ಮೇಲೆ ಕೂತಿದ್ದೇವೆ ಅಂದುಕೊಂಡರೆ ತಪ್ಪು. ನನ್ನಂತವರಿಗೂ ಬುದ್ಧಿ ಕಲಿಸಬೇಕು. ಕೋರ್ಟ್ ಡೈರೆಕ್ಷನ್ ಮೇಲೆ ಎಷ್ಟು ಕೇಸ್ ಆಗಿಲ್ಲ. ಅಧಿಕಾರ ಉಪಯೋಗ ಮಾಡುವುದು ಇರುತ್ತದೆ. ನಮ್ಮನ್ನು ಯಾರೂ ಮುಟ್ಟಲ್ಲ ಅಂದುಕೊಂಡ್ರೆ ಕಷ್ಟ ಎಂದರು.
ಬರಪರಿಹಾರ ರೈತರ ಖಾತೆಗೆ ಜಮೆ : ಬರಪರಿಹಾರ ವಿತರಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರೈತರ ಖಾತೆಗೆ ಜಮೆ ಮಾಡುತ್ತಿದ್ದೇವೆ. 32.12 ಲಕ್ಷ ರೈತರಿಗೆ ಜಮೆ ಮಾಡಲಾಗಿದೆ. ಮೊದಲ ಕಂತು ಎರಡನೇ ಕಂತು ಸೇರಿದರೆ 3 ಸಾವಿರ ಕೋಟಿ ರೂ. ಡಿಬಿಟಿ ಮೂಲಕ ರೈತರ ಖಾತೆಗೆ ಹೋಗಿದೆ. ಒಂದೂವರೆ ಲಕ್ಷ ರೈತರಿಗೆ ಪರಿಹಾರ ಹೋಗಬೇಕಿದೆ. ಅದು ಕ್ಲಿಯರ್ ಆದರೆ 3.5 ಲಕ್ಷ ರೈತರಿಗೆ ಹೋಗಲಿದೆ. ಸಣ್ಣ ಪುಟ್ಟ ಟೆಕ್ನಿಕಲ್ ಸಮಸ್ಯೆ ಇದೆ. ಹೀಗಾಗಿ ಒಂದೂವರೆ ಲಕ್ಷ ರೈತರಿಗೆ ಪರಿಹಾರ ತಲುಪಿಲ್ಲ. ಸಮಸ್ಯೆ ಸರಿಪಡಿಸುವ ಕೆಲಸ ನಡೆದಿದೆ ಎಂದು ತಿಳಿಸಿದರು.
ಸಣ್ಣ, ಅತಿಸಣ್ಣ ಒಣಬೇಸಾಯ ಕುಟುಂಬ 16 ಲಕ್ಷ ಇವೆ. ಈ ಕುಟುಂಬಕ್ಕೆ 3 ಸಾವಿರ ಕೊಡಲು ಸೂಚನೆ ನೀಡಲಾಗಿದೆ. ಕೇಂದ್ರದಿಂದ 3454 ಕೋಟಿ ರೂ. ಬಂದಿದೆ. ಇದನ್ನು ಸೇರಿಸಿ 4500 ಕೋಟಿ ರೂ. ಪರಿಹಾರ ಆಗುವುದು. ಈಗಾಗಲೇ ಮೂರು ಸಾವಿರ ಕೋಟಿ ಪಾವತಿಯಾಗಿದೆ. 460 ಕೋಟಿ ಹಣ ಸಣ್ಣ, ಅತಿಸಣ್ಣ ರೈತರಿಗೆ ನೀಡಲಾಗುತ್ತಿದೆ. ಈ ಪರಿಹಾರ ಕೊಡುತ್ತಿರುವುದು ಇದೇ ಮೊದಲ ಬಾರಿ. 16 ಲಕ್ಷ ಕುಟುಂಬಗಳಿಗೆ ಈ ಹಣ ತಲುಪಲಿದೆ. ಎನ್ಡಿಆರ್ಎಫ್, ಎಸ್ಡಿಆರ್ ಎಫ್ ರಾಜ್ಯ ಸರ್ಕಾರದ ಹಣ ಸೇರಲಿದೆ. ಕುಟುಂಬಕ್ಕೆ 3 ಸಾವಿರ ಹಣ ಕೊಡುತ್ತೇವೆ ಎಂದು ಹೇಳಿದರು.
ಕುಡಿಯುವ ನೀರಿನ ಅಭಾವ ಕಡಿಮೆಯಾಗಿದೆ. 270 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಕೊಡಲಾಗುತ್ತಿದೆ. 594 ಗ್ರಾಮಗಳಲ್ಲಿ ಖಾಸಗಿ ಬೋರ್ವೆಲ್ ನೀರು ಪೂರೈಕೆ ಮಾಡಲಾಗಿದೆ. ನಗರ ಪ್ರದೇಶಗಳ 150 ವಾರ್ಡ್ಗಳಲ್ಲಿ ನೀರಿನ ಅಭಾವವಿದೆ. ಅಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ :ಮಹಿಳೆ ಅಪಹರಣ ಪ್ರಕರಣ: ಹೆಚ್.ಡಿ. ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ - H D Revanna Case