ಬೆಂಗಳೂರು:ರಾಜ್ಯ ಬಿಜೆಪಿ ಒಡೆದ ಮನೆಯಾಗಿದೆ. ಒಂದೇ ಕುಟುಂಬದ ದರ್ಬಾರ್ ನಡೆಯುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ವಾಗ್ದಾಳಿ ನಡೆಸಿದರು. ನಗರದ ಫ್ರೀಡಂ ಪಾರ್ಕ್ನಲ್ಲಿ ಇಂದು ಪ್ರೊ.ರಾಜೀವ್ ಗೌಡ ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬೃಹತ್ ಸಮಾವೇಶಕ್ಕೆ ಸಂವಿಧಾನ ಪೀಠಿಕೆ ಓದುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ರಾಜೀವ್ ಗೌಡ ಅವರು ಜನರ ಪ್ರತೀಕ. ಅವರು ಸ್ಥಳೀಯರು. ರಾಜ್ಯಸಭಾ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ನಾವು ಸ್ಥಳೀಯರಿಗೆ ಟಿಕೆಟ್ ನೀಡಿದ್ದೇವೆ. 2004ರಲ್ಲಿ ಬಿಜೆಪಿಯವರು ನಿವೃತ್ತ ಪೊಲೀಸ್ ಅಧಿಕಾರಿ ಹೆಚ್.ಟಿ.ಸಾಂಗ್ಲಿಯಾನ ಅವರಿಗೆ ಟಿಕೆಟ್ ಕೊಟ್ರು. ಅವರಿಗೆ ಕನ್ನಡ ಬರುತ್ತಿರಲಿಲ್ಲ. ನಯಾ ಪೈಸೆ ಕೆಲಸ ಮಾಡಲಿಲ್ಲ. ನಂತರ ಡಿ.ಬಿ.ಚಂದ್ರೇಗೌಡರನ್ನು ಕರೆದುಕೊಂಡು ಬಂದು ನಿಲ್ಲಿಸಿದರು. ಅವರೂ ಸಹ ಕೆಲಸ ಮಾಡಲಿಲ್ಲ ಎಂದರು.
10 ವರ್ಷ ಡಿ.ವಿ.ಸದಾನಂದ ಗೌಡರನ್ನು ಗೆಲ್ಲಿಸಿದ್ರಿ. ನಯಾಪೈಸೆ ಕೆಲಸ ಮಾಡಲಿಲ್ಲ. ಈ ಬಾರಿ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ಕೊಟ್ಟಿದ್ದಾರೆ. ಬಿಜೆಪಿಯವರೇ ಗೋ ಬ್ಯಾಕ್ ಎಂದು ತಿರಸ್ಕರಿಸಿರುವ ಶೋಭಕ್ಕನನ್ನು ಇಲ್ಲಿಗೆ ಕರೆ ತಂದಿದ್ದಾರೆ. ಗೆದ್ದು ಬಂದರೆ ಬೆಂಗಳೂರು ಉತ್ತರಕ್ಕೆ ಬರುತ್ತಾರೋ, ಬೇರೆ ಕಡೆ ಹೋಗುತ್ತಾರೋ?. ಬೆಂಗಳೂರು ಉತ್ತರ ನಂತರ ತಮ್ಮ ಮುಂದಿನ ಕ್ಷೇತ್ರ ಯಾವುದು ಹೇಳಿ? ಎಂದು ವ್ಯಂಗ್ಯವಾಡಿದರು.
ಬೆಲೆ ಏರಿಕೆಯಾಗಿದೆ. ಜನರನ್ನು ಸುಲಿಗೆ ಮಾಡ್ತಿದ್ದಾರೆ. ಬಡವ ಮನೆ ಕಟ್ಟಲೂ ಆಗ್ತಿಲ್ಲ. ಬೆಲೆ ಏರಿಕೆ ಹೊರೆ ನಮ್ಮ ಮೇಲೆ ಹಾಕಿದ್ದಾರೆ. ಉಪ್ಪು, ಜೀರಿಗೆ, ಮೈದಾ ಎಲ್ಲದರ ಮೇಲೆ ಜಿಎಸ್ಟಿ ತೆರಿಗೆ ಹಾಕಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಮಾತನಾಡಿ, ಬಿಜೆಪಿ ಜಗಳಗಂಟ ಪಕ್ಷ. ಆ ಅಮ್ಮ ಮಹಾತಾಯಿ ಕುಮಾರಿ ಶೋಭಾ ಕರಂದ್ಲಾಜೆ ಜಂಪಿಂಗ್ ಮಾಡುತ್ತಾರೆ. ಅವರಿಗೆ ಇದು ಐದನೇ ಕ್ಷೇತ್ರ. ಸದಾನಂದ ಗೌಡರ ಕಣ್ಣಲ್ಲಿ ನೀರು ಹಾಕಿಸಿದರು. ಬಿಜೆಪಿ ಹಾಗೂ ಜೆಡಿಎಸ್ ನಮಗೆ ಲೆಕ್ಕ ಇಲ್ಲ. ರಾಜ್ಯ ಸರ್ಕಾರದ ಫಂಡ್ನಿಂದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಕೇಂದ್ರದಿಂದ ಯಾವುದೇ ಅನುದಾನ ಬಂದಿಲ್ಲ. ಬಿಜೆಪಿ ಅಭ್ಯರ್ಥಿಯನ್ನು ಓಡಿಸಿ, ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ. ಮುಂದಿನ ಐದು ವರ್ಷ ನಾವೇ ಇರುತ್ತೇವೆ. ಕ್ಷೇತ್ರದ ಅಭಿವೃದ್ಧಿಗೆ ಸಹಾಯ ಮಾಡುತ್ತೇವೆ ಎಂದು ಭರವಸೆ ನೀಡಿದರು.