ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯೆ ಮಂಡ್ಯ:"ಸಂಸದೆ ಸುಮಲತಾ ಅಂಬರೀಶ್ ನನಗೆ ಕಾಂಗ್ರೆಸ್ ಪಕ್ಷದಿಂದ ಆಹ್ವಾನ ಬಂದಿದೆ ಎಂದು ಹೇಳಿದ್ದಾರೆ, ಯಾರು ಕರೆದಿದ್ದಾರೆ ಎಂದು ನನಗೆ ಗೊತ್ತಿಲ್ಲ" ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು. ನಗರದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಅವರು, "ಸುಮಲತಾ ಅಂಬರೀಶ್ ಅಧಿಕೃತವಾಗಿ ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದಾರೆ" ಎಂದರು.
"ಪಕ್ಷಕ್ಕೆ ಬರುವ ಸಂಬಂಧ ಸಂಸದೆ ನಮ್ಮನ್ನ ಕೇಳಿಲ್ಲ, ನಾವಂತೂ ಅವರನ್ನು ಕರೆದಿಲ್ಲ. ಬಿಜೆಪಿ ಅಭ್ಯರ್ಥಿ ಆಗಲು ಬಯಸುತ್ತೇನೆಂದು ಅವರೇ ಸ್ಪಷ್ಟಪಡಿಸಿದ್ದಾರೆ. ನಾವೆಲ್ಲ ಮುಖಂಡರು ಒಗ್ಗಟ್ಟಾಗಿದ್ದೇವೆ. ಜೆಡಿಎಸ್‌ಗೆ ಮಂಡ್ಯ ಬಿಟ್ಟು ಕೊಡುವುದು ಬೇಡವೆಂದಿದ್ದಾರೆ. ಆದ್ದರಿಂದ ಯಾರು ಅವರಿಗೆ ಆಹ್ವಾನ ಕೊಟ್ಟರೆಂದು ಹೆಸರು ಹೇಳಿದರೆ ತಿಳಿದುಕೊಳ್ಳುತ್ತೇವೆ" ಎಂದು ಹೇಳಿದರು.
"ಈ ಬಾರಿ ಮಂಡ್ಯದಲ್ಲಿ ಸ್ವಾಭಿಮಾನದ ಚುನಾವಣೆ ನಡೆಯಲಿದೆ. ಮಂಡ್ಯ ನಾಟಿ ಸ್ಟೈಲ್‌ನಲ್ಲೇ ಸ್ವಾಭಿಮಾನದ ಚುನಾವಣೆ ಆಗಲಿದೆ. ಇದು ಮಂಡ್ಯ ಜನರ ಬಯಕೆ ಕೂಡ ಆಗಿದೆ. ಇನ್ನು ಕಾಂಗ್ರೆಸ್ ಅಭ್ಯರ್ಥಿಯನ್ನ ಶೀಘ್ರವಾಗಿ ಘೋಷಣೆ ಮಾಡಲಿದ್ದೇವೆ. ಹೈಕಮಾಂಡ್ ನಮ್ಮೆಲ್ಲರನ್ನು ವಿಶ್ವಾಸಕ್ಕೆ ಪಡೆದು ಅಭ್ಯರ್ಥಿ ಘೋಷಣೆ ಮಾಡುತ್ತಾರೆ" ಎಂದು ತಿಳಿಸಿದರು. ರಾಮ ಮಂದಿರ ಉದ್ಘಾಟನೆ ದಿನವೇ ಎಂಪಿ ಚುನಾವಣೆ ಮುಗಿತು ಎಂದು ಮಾಜಿ ಸಚಿವ ಪುಟ್ಟರಾಜು ಹೇಳಿಕೆ ಕುರಿತು ಪ್ರತಿಕ್ರಿಯಿಸಿ, "ನಾನು ಹಿಂದೂ, ರಾಮನ ಭಕ್ತ, ರಾಮನ ಪೂಜೆ ಮಾಡುತ್ತೇನೆ . ನಾನು ಮೇಲುಕೋಟೆಯ ಚಲುವರಾಯಸ್ವಾಮಿಯ ಹೆಸರು ಇಟ್ಟುಕೊಂಡಿದ್ದೀನಿ. ಇದನ್ನು ಪುಟ್ಟರಾಜಣ್ಣನಿಗೆ ಹೇಳಿ" ಎಂದು ತಿರುಗೇಟು ನೀಡಿದರು.
"ಬಿಜೆಪಿ, ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬರಲು ತಯಾರಾಗಿದ್ದಾರೆ. ಆದರೆ ಎಂಪಿ ಚುನಾವಣೆಗೂ ಮೊದಲೇ ತಗೊಳೋದಾ, ಆಮೇಲೆ ತಗೊಳೋದಾ ಎಂದು ಯೋಚನೆ ಮಾಡುತ್ತಿದ್ದೇವೆ. ಕೆಲವು ಹೆಸರು ಹೇಳಿದರೆ ವಿರೋಧ ಪಕ್ಷದ ನಾಯಕರಿಗೆ ಶಾಕ್ ಆಗುತ್ತದೆ. ಜೆಡಿಎಸ್ ಮತ್ತು ಬಿಜೆಪಿಯಿಂದ ಕನಿಷ್ಠ 30 ಜನ ಕಾಂಗ್ರೆಸ್‌ಗೆ ಬರಲು ತಯಾರಿದ್ದಾರೆ. ನಾವು ಆಪರೇಷನ್ ಮಾಡುತ್ತಿಲ್ಲ. ನಮ್ಮ ಸರ್ಕಾರದ ಅಭಿವೃದ್ಧಿ ಕೆಲಸ ಮೆಚ್ಚಿ ಬರುತ್ತಿದ್ದಾರೆ" ಎಂದರು.
ಜಗದೀಶ್ ಶೆಟ್ಟರ್ ಅವರಿಂದ ನಮಗೆ ಲಾಭ ಇಲ್ಲ: ಜಗದೀಶ್ ಶೆಟ್ಟರ್ ಬಿಜೆಪಿಗೆ ವಾಪಸ್ ಹೋಗಿರುವ ಬಗ್ಗೆ ಪ್ರತಿಕ್ರಿಯಿಸಿ, "ಜಗದೀಶ್ ಶೆಟ್ಟರ್ ಅವರಿಂದ ನಮಗೆ ಲಾಭನೂ ಇಲ್ಲ, ನಷ್ಟನೂ ಇಲ್ಲ. ಅವತ್ತು ಬಿಜೆಪಿಯಲ್ಲಿ ನೋವಾಗಿ ಕಾಂಗ್ರೆಸ್‌ಗೆ ಬಂದರು. ನಮ್ಮಲ್ಲಿ ಅವರು ಹಿರಿಯ ನಾಯಕರು, ಮಾಜಿ ಸಿಎಂ ಎಂದು ಚುನಾವಣೆ ಅಭ್ಯರ್ಥಿಯಾಗಿ ಮಾಡಿದರು. ಸೋತ ಮೇಲೆ ಎಂಎಲ್‌ಸಿ ಮಾಡಲಾಗಿತ್ತು. ಅದಕ್ಕಿಂತ ಇನ್ನೇನು ಹೆಚ್ಚು ಬಯಸುವುದು ಅಲ್ಲ. ನಾವೇನು ಅವರನ್ನು ಬಾಪ್ಪ ಎಂದು ಕರೆದಿರಲಿಲ್ಲ. ಅಲ್ಲಿ ನೋವಾಗಿ ಕಾಂಗ್ರೆಸ್‌ಗೆ ಬಂದಿದ್ದರು. ಈಗ ವಾಪಸ್ ಅಲ್ಲಿಗೆ ಹೋಗಿದ್ದಾರೆ. ಇದನ್ನು ಜನತೆಯ ಆದೇಶಕ್ಕೆ ಬಿಡೋಣಾ. ನಮ್ಮ ಲೀಡರ್‌ಗಳಿಂದ ಯಾವುದೇ ನೋವಿನ ಸಂಗತಿಯಾಗಿಲ್ಲ. ಆದರೂ ಏಕೆ ಬಿಜೆಪಿಗೆ ಹೋದರೂ ಎಂದು ಗೊತ್ತಿಲ್ಲ. ಲಕ್ಷ್ಮಣ್ ಸವದಿ ಬಿಜೆಪಿಗೆ ಹೋಗಲ್ಲ. ಬಿಜೆಪಿ ಅವರು ಎಲ್ಲರ ಮೇಲು ಒತ್ತಡ ಹಾಕುತ್ತಾರೆ" ಎಂದು ಆರೋಪಿಸಿದರು.
ಇದನ್ನೂ ಓದಿ:ಜಗದೀಶ್ ಶೆಟ್ಟರ್ ಅವರನ್ನ ನಾವು ಅದ್ಧೂರಿಯಾಗಿ ಸ್ವಾಗತ ಮಾಡಿಕೊಂಡಿದ್ವಿ: ಡಾ ಜಿ ಪರಮೇಶ್ವರ್
ಧ್ವಜಾರೋಹಣ ನೆರವೇರಿಸಿದ ಎನ್ ಚಲುವರಾಯಸ್ವಾಮಿ: ಮತ್ತೊಂದೆಡೆ, ಮಂಡ್ಯದ ಪೊಲೀಸ್ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು 75ನೇ ಗಣರಾಜ್ಯೋತ್ಸವದ ಹಿನ್ನೆಲೆ ಧ್ವಜಾರೋಹಣ ನೆರವೇರಿಸಿದರು. ಧ್ವಜಾರೋಹಣ ಮಾಡಿ ತೆರೆದ ವಾಹನದಲ್ಲಿ ತುಕಡಿಗಳ ಪರಿವೀಕ್ಷಣೆ ನಡೆಸಿ ಗೌರವ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಶಾಸಕ ಗಣಿಗ ರವಿಕುಮಾರ್, ಡಿಸಿ ಡಾ.ಕುಮಾರ, ಎಡಿಸಿ ನಾಗರಾಜು, ಎಸ್ಪಿ ಎನ್.ಯತೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.