ಮೈಸೂರು: ರಾಜ್ಯಾದ್ಯಂತ ನಂದಿನಿ ಹಾಲಿನ ಬೆಲೆಯನ್ನು ಪ್ರತಿ ಲೀಟರ್ಗೆ 2 ರೂಪಾಯಿ ಹೆಚ್ಚಿಸಲಾಗಿದೆ. ಸಾಂಸ್ಕೃತಿಕ ನಗರಿ ಮೈಸೂರಿನ ಮಂದಿ ರಾಜ್ಯ ಸರ್ಕಾರದ ಈ ನಿರ್ಧಾರವನ್ನು ವಿರೋಧಿಸಿದ್ದು, ಕೂಡಲೇ ದರವನ್ನು ಪುನರ್‌ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರ ಪ್ರತಿಕ್ರಿಯೆ:''ಈಗಾಗಲೇ ಡೀಸೆಲ್, ಪೆಟ್ರೋಲ್ ದರ ಹೆಚ್ಚಳವಾಗಿದೆ. ಈ ಬೆನ್ನಲ್ಲೇ ನೂರಕ್ಕೂ ಹೆಚ್ಚು ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುತ್ತದೆ ಎಂದು ಭಾವಿಸಿದ್ದೆವು. ಅದು ಈಗ ಸತ್ಯವಾಯಿತು. ಈಗಾಗಲೇ ಹೋಟೆಲ್ ಉದ್ಯಮ ಕಷ್ಟದಲ್ಲಿದೆ. ಅದರ ನಡುವೆ ಹಾಲಿನ ದರ ಹೆಚ್ಚಾಗಿದೆ. ಇದರ ಪರಿಣಾಮ ಹೋಟೆಲ್ ತಿಂಡಿ ತಿನಿಸುಗಳು, ಕಾಫಿ-ಟೀ ಬೆಲೆಯನ್ನೂ ಹೆಚ್ಚಿಸುವ ಅನಿವಾರ್ಯತೆ ಉಂಟಾಗುತ್ತದೆ. ಕೋವಿಡ್ ನಂತರ ಹೋಟೆಲ್ ಉದ್ಯಮ ಕಷ್ಟದಲ್ಲಿದೆ. ಈಗಲಾದರೂ ಹೆಚ್ಚಾಗಿರುವ ಪೆಟ್ರೋಲ್, ಡೀಸೆಲ್ ಬೆಲೆ ಹಾಗೂ ಹಾಲಿನ ದರವನ್ನು ಮುಖ್ಯಮಂತ್ರಿಗಳು ಪುನರ್‌ಪರಿಶೀಲನೆ ಮಾಡಲಿ" ಎಂದು ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ಮನವಿ ಮಾಡಿದರು.
ಟೀ ಅಂಗಡಿಯ ಶಿವು ಮಾತನಾಡಿ, "ಹೀಗೆ ಎರಡು ತಿಂಗಳು, ಮೂರು ತಿಂಗಳಿಗೆ ಹಾಲಿನ ದರ ಹೆಚ್ಚಿಸಿದರೆ ಜನಸಾಮಾನ್ಯರಿಗೆ ಕಷ್ಟವಾಗುತ್ತದೆ. ಮೊದಲೇ ಕೆಲಸ ಇಲ್ಲ. ಇಂತಹ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಹಾಲಿನ ದರ ಹೆಚ್ಚಿಸಿದ್ದು ಸರಿಯಲ್ಲ" ಎಂದರು.