ತುಮಕೂರು: ಸ್ಫೋಟಕ ವಸ್ತುವನ್ನು ನೀರಿಗೆಸೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ರನ್ನರ್ ಅಪ್ ಡ್ರೋನ್ ಪ್ರತಾಪ್ ಅವರನ್ನು ಘಟನೆ ನಡೆದ ಸ್ಥಳಕ್ಕೆ ಕರೆತಂದ ಪೊಲೀಸರು, ಇಂದು ಸ್ಥಳ ಮಹಜರು ನಡೆಸಿದರು. ಮಧುಗಿರಿ ತಾಲೂಕಿನ ಚಿನಕಲೋಟಿ ಗ್ರಾಮದ ರಾಯರ ಬೃಂದಾವನ ಫಾರ್ಮ್ ಬಳಿ ಡ್ರೋನ್ ಪ್ರತಾಪ್ ಅವರನ್ನು ಕರೆತಂದ ಪೊಲೀಸರು, ಕೆಲವು ಹೊತ್ತು ಪರಿಶೀಲನೆ ನಡೆಸಿದರು.
ಸೋಡಿಯಂ ಬಳಸಿ ಕೃಷಿ ಹೊಂಡಾದಲ್ಲಿ ಡ್ರೋನ್ ಪ್ರತಾಪ್ ಸ್ಫೋಟಿಸಿದ್ದರು. ಅಷ್ಟೇ ಅಲ್ಲದೇ ಸ್ಫೋಟಗೊಂಡ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಈ ಸಂಬಂಧ ಯೂಟ್ಯೂಬ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, ಈ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ಆಧಾರವಾಗಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಪೊಲೀಸರು, ಪ್ರತಾಪ್ ಮತ್ತು ಇತರ ಇಬ್ಬರನ್ನು ಗುರುವಾರ ಬಂಧಿಸಿದ್ದಾರೆ. ಬಂಧನದ ಬಳಿಕ ಇಂದು ಸ್ಥಳಕ್ಕೆ ಕರೆತಂದು ಮಹಜರು ನಡೆಸಿದರು.