ಕರ್ನಾಟಕ

karnataka

ETV Bharat / state

ಮಾಸ್ಕ್​, ಪಿಪಿಇ ಕಿಟ್​ ಖರೀದಿ ಹಗರಣ: ಕಂಪನಿಗಳ ವಿರುದ್ಧ ಆತುರದ ಕ್ರಮಕ್ಕೆ ಮುಂದಾಗದಂತೆ ಹೈಕೋರ್ಟ್ ಸೂಚನೆ - MASK AND PPE KIT PURCHASE SCAM

ಹಗರಣದ ಕುರಿತು ಸಲ್ಲಿಕೆಯಾದ ಅರ್ಜಿ ವಿಚಾರಣೆ ಕೈಗೊಂಡ ನ್ಯಾಯಪೀಠ, ಅರ್ಜಿದಾರರ ವಿರುದ್ಧ ದುರುದ್ದೇಶಪೂರಿತ ಅಥವಾ ಆತುರದ ಕ್ರಮ ಕೈಗೊಳ್ಳಬಾರದು ಎಂದು ತಿಳಿಸಿ ವಿಚಾರಣೆ ಮುಂದೂಡಿತು.

HIGH COURT
ಹೈಕೋರ್ಟ್ (ETV Bharat)

By ETV Bharat Karnataka Team

Published : 23 hours ago

ಬೆಂಗಳೂರು: ಕೊರೊನಾ ಸಂದರ್ಭದಲ್ಲಿ ಎನ್‌-95 ಮಾಸ್ಕ್‌ ಮತ್ತು ಪಿಪಿಇ ಕಿಟ್‌ ಖರೀದಿಯಲ್ಲಿ ಅವ್ಯವಹಾರ ನಡೆಸಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 167 ಕೋಟಿ ನಷ್ಟ ಉಂಟುಮಾಡಿದ ಆರೋಪದಲ್ಲಿ ಬೆಂಗಳೂರಿನ ಲಾಜ್‌ ಎಕ್ಸ್‌ಪೋರ್ಟ್ಸ್‌ ಮತ್ತು ಮುಂಬೈನ ಪ್ರೂಡೆಂಟ್‌ ಮ್ಯಾನೇಜ್‌ಮೆಂಟ್‌ ಸಲ್ಯೂಷನ್ಸ್‌ ವಿರುದ್ಧ ಆತುರದ ಕ್ರಮಕ್ಕೆ ಮುಂದಾಗದಂತೆ ಹೈಕೋರ್ಟ್ ಆದೇಶಿಸಿದೆ.

ಲಾಜ್‌ ಎಕ್ಸ್‌ಪೋರ್ಟ್ಸ್‌ ಲಿಮಿಟೆಡ್‌ನ ನಿರ್ದೇಶಕ ಬಿ.ವಿ.ರೆಡ್ಡಿ ಮತ್ತು ಪ್ರೂಡೆಂಟ್‌ ಮ್ಯಾನೇಜ್‌ಮೆಂಟ್‌ ಸಲ್ಯೂಷನ್ಸ್‌ ನಿರ್ದೇಶಕ ವಿ.ಆನಂದ್‌ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಪ್ರಕರಣದಲ್ಲಿ ವಿಸ್ತೃತ ಆದೇಶ ಮಾಡಬೇಕಾಗಿದ್ದು, ಅರ್ಜಿದಾರರಿಗೆ ಸದ್ಯಕ್ಕೆ ರಕ್ಷಣೆ ಒದಗಿಸಲಾಗುವುದು. ಪ್ರತಿವಾದಿಗಳ ಪರವಾಗಿ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕರು ನೋಟಿಸ್‌ ಪಡೆಯಬೇಕು. ಬಾಕಿ ಪಾವತಿಸುವುದರಿಂದ ಬಚಾವಾಗಲು ಇದೆಲ್ಲವನ್ನೂ ಸರ್ಕಾರ ಮಾಡಿದರೆ, ಖಂಡಿತವಾಗಿಯೂ ಅದನ್ನು ಪರಿಗಣಿಸಲಾಗುವುದು. ಆದರೆ, ಅರ್ಜಿದಾರರ ವಿರುದ್ಧ ದುರುದ್ದೇಶಪೂರಿತ ಅಥವಾ ಆತುರದ ಕ್ರಮಕೈಗೊಳ್ಳಬಾರದು ಎಂದು ತಿಳಿಸಿ ವಿಚಾರಣೆ ಮುಂದೂಡಿತು.

ಅಲ್ಲದೆ, ಪ್ರಕರಣ ಸಂಬಂಧ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಪ್ರಧಾನ ಲೆಕ್ಕಾಧಿಕಾರಿ ಮತ್ತು ಹಣಕಾಸು ಸಲಹೆಗಾರ ಡಾ.ವಿಷ್ಣು ಪ್ರಸಾದ್‌, ವೈದ್ಯಕೀಯ ಶಿಕ್ಷಣದ ನಿರ್ದೇಶಕರಿಗೆ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

ಪ್ರಕರಣದ ಹಿನ್ನೆಲೆ: ಕೊರೊನಾ ಸಂದರ್ಭದಲ್ಲಿ ಸಾಂಕ್ರಾಮಿಕ ಹರಡುವಿಕೆ ತಡೆಯಲು ಬೇಕಾದ ಎನ್‌-95 ಮಾಸ್ಕ್‌, ಪಿಪಿಇ ಕಿಟ್‌ ಮತ್ತಿತರರ ಸಾಮಗ್ರಿಗಳನ್ನು ಸಂಗ್ರಹಿಸುವ ಸನ್ನಿವೇಶವನ್ನು ದುರ್ಬಳಕೆ ಮಾಡಿಕೊಂಡು, ಕಾನೂನು ಪ್ರಕ್ರಿಯೆಯನ್ನು ಗಾಳಿಗೆ ತೂರಿ, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯಿದೆ (ಕೆಟಿಪಿಪಿ) ಮತ್ತು ಇತರೆ ಕಾನೂನನ್ನು ಉಲ್ಲಂಘಿಸಿ, ಅಂದು ಕರ್ತವ್ಯದಲ್ಲಿದ್ದ ಅಧಿಕಾರಿಗಳು, ಖಾಸಗಿ ವ್ಯಕ್ತಿಗಳು ಹಾಗೂ ಇತರರು ನೂರಾರು ಕೋಟಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಮುಖ್ಯ ಲೆಕ್ಕ ಪತ್ರಾಧಿಕಾರಿಯಾದ ಡಾ. ಎಂ ವಿಷ್ಣು ಪ್ರಸಾದ್‌ ಅವರು ವಿಧಾನಸೌಧ ಠಾಣೆಯಲ್ಲಿ ಡಿಸೆಂಬರ್‌ 13ರಂದು ಕೊರೊನಾ ಸಂದರ್ಭದಲ್ಲಿ ನಡೆದಿದ್ದ ಹಗರಣಗಳ ಕುರಿತು ದೂರು ದಾಖಲಿಸಿದ್ದರು.

ಮಾಸ್ಕ್​ ಮತ್ತು ಪಿಪಿಇ ಕಿಟ್​ ಖರೀದಿ ಸಂಬಂಧ ಆರೋಗ್ಯ ಇಲಾಖೆ ಟೆಂಡರ್‌ ಆಹ್ವಾನಿಸಿದ್ದು, ಮೂರು ಸಂಸ್ಥೆಗಳು ಈ ಬಿಡ್‌ನಲ್ಲಿ ಭಾಗವಹಿಸಿದ್ದವು. ಲಾಜ್‌ ಎಕ್ಸ್‌ಪೋರ್ಟ್ಸ್‌ ಸಂಸ್ಥೆಯು ಒಂದು ಪಿಪಿಇ ಕಿಟ್‌ಗೆ 1,312.50 ರೂ. ಯಂತೆ ಕನಿಷ್ಠ ಬಿಡ್‌ದಾರರಾಗಿರುವುದರಿಂದ ಅವರ ಬಿಡ್‌ ಸ್ವೀಕರಿಸಿ, ಅವರಿಂದ ಖರೀದಿಗೆ ಆದೇಶವನ್ನು 2020ರ ಸೆಪ್ಟಂಬರ್​ 7 ರಂದು ಹೊರಡಿಸಲಾಗಿತ್ತು. ಬಳಿಕ 2,59,263 ಪಿಪಿಇ ಕಿಟ್‌ಗಳನ್ನು 15 ದಿನಗಳ ಒಳಗೆ ಸರಬರಾಜು ಮಾಡಲು ಆದೇಶಿಸಲಾಗಿತ್ತು.

ಇದರ ನಂತರ ದಾಖಲೆಗಳಲ್ಲಿ ಪಿಪಿಇ ಕಿಟ್‌ ಅನ್ನು 15 ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಒಂದು ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆಗೆ ನೀಡಿರುವ ಬಗ್ಗೆ ಯಾವುದೇ ದಾಖಲೆಗಳು ಲಭ್ಯವಿಲ್ಲ. ಆದರೂ, 41,34,99,172 ರೂ. ಅನ್ನು ಮುಂಬೈನ ಪ್ರೂಡೆಂಟ್‌ ಮ್ಯಾನೇಜ್‌ಮೆಂಟ್‌ ಸಲ್ಯೂಷನ್ಸ್‌ಗೆ ವರ್ಗಾಯಿಸಲಾಗಿದೆ.

ಅಲ್ಲದೆ, 41,34,99,187 ರೂ.ಗಳನ್ನು 2,59,263 ಪಿಪಿಇ ಕಿಟ್‌ಗಳಿಗೆ ಮಾತ್ರವಲ್ಲದೇ ಅದಕ್ಕಿಂತ ಹೆಚ್ಚುವರಿಯಾಗಿ, 55,784 ಪಿಪಿಇ ಕಿಟ್‌ಗಳಿಗೆ ನೀಡಲಾಗಿದೆ. ಈ ಹೆಚ್ಚುವರಿ ಪಿಪಿಇ ಕಿಟ್‌ಗಳನ್ನು ಯಾವುದೇ ಟೆಂಡರ್‌ ಪ್ರಕ್ರಿಯೆ ಪಾಲಿಸದೇ ಖರೀದಿಸಿಲಾಗಿದೆ. 41.35 ಕೋಟಿ ರೂ. ಅನುದಾನವನ್ನು ಪಿಪಿಇ ಕಿಟ್‌ ಮತ್ತು ಎನ್‌-95 ಮಾಸ್ಕ್‌ಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದರೂ ಸಂಪೂರ್ಣ ಮೊತ್ತವನ್ನು ಪಿಪಿಇ ಕಿಟ್‌ಗಳಿಗೆ ಮಾತ್ರ ವೆಚ್ಚ ಮಾಡಿರುವುದು ಕಾನೂನುಬಾಹಿರ ಕ್ರಮ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಅಲ್ಲದೆ, ಕೊಟ್ಯಂತರ ರೂ.ಗಳ ವಹಿವಾಟು ನಡೆಸಿರುವ ಸಂಬಂಧ ಎರಡೂ ಕಂಪೆನಿಗಳ ವಿರುದ್ದ ತನಿಖೆಗೆ ಆದೇಶಿಬೇಕು ಎಂದು ದೂರಿನಲ್ಲಿ ಕೋರಲಾಗಿತ್ತು.

ಇದನ್ನೂ ಓದಿ:ಕೋವಿಡ್​​ ಅಕ್ರಮ ಆರೋಪ: ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಸೇರಿ ಐವರ ವಿರುದ್ಧ ಎಫ್ಐಆರ್ - COVID KIT SCAM

ABOUT THE AUTHOR

...view details