ಬೆಂಗಳೂರು: ಒಂದೇ ದಿನ ಅಂತರದಲ್ಲಿ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಯುವತಿ ಸೇರಿ ಮೂವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಈ ಸಂಬಂಧ ಪ್ರತ್ಯೇಕ ಎರಡು ಪ್ರಕರಣಗಳನ್ನು ದಾಖಲಿಸಿಕೊಂಡು ನಗರ ರೈಲ್ವೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬಿನ್ನಿಪೇಟೆ ಗೇಟ್ ಬಳಿ ಹಳಿ ದಾಟುತ್ತಿದ್ದ ಇಬ್ಬರು ಯುವಕರು ಚಲಿಸುತ್ತಿದ್ದ ರೈಲಿಗೆ ಬಲಿಯಾದರೆ, ಮತ್ತೊಂದು ಘಟನೆಯು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ರೈಲು ಹತ್ತುವ ಭರದಲ್ಲಿ ಕಾಲು ಜಾರಿ ಯುವತಿ ಸಾವನ್ನಪ್ಪಿದ್ದಾಳೆ.
ಬುಧವಾರ ರಾತ್ರಿ 10.30ರ ಸುಮಾರಿಗೆ ಮೈಸೂರಿನಿಂದ ಬೆಂಗಳೂರಿಗೆ ರೈಲು ಬರುವಾಗ ಬಿನ್ನಿಪೇಟೆ ಗೇಟ್ ಬಳಿ ರೈಲ್ವೆ ಟ್ರ್ಯಾಕ್ ದಾಟುತ್ತಿದ್ದ ಇಬ್ಬರು ಯುವಕರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೆ.ಪಿ. ಅಗ್ರಹಾರ ನಿವಾಸಿಗಳಾದ ಸೂರಜ್ ಹಾಗೂ ಕೇತನ್ ಸಾವನ್ನಪ್ಪಿದ ದುದೈರ್ವಿಗಳು.
ಸೂರಜ್ ಫ್ಲಿಪ್ಕಾರ್ಟ್ನಲ್ಲಿ ಡೆಲಿವರಿ ಕೆಲಸ ಮಾಡುತ್ತಿದ್ದರೆ, ಕೇತನ್ ಕೂಲಿ ಕೆಲಸ ಮಾಡುತ್ತಿದ್ದ. ಬಿನ್ನಿಗೇಟ್ ಸುತ್ತಮುತ್ತ ಸ್ಲಂ ಪ್ರದೇಶವಾಗಿದ್ದರಿಂದ ಸುಲಭವಾಗಿ ರೈಲ್ವೆ ಹಳಿ ದಾಟಬಹುದಾಗಿದೆ. ನಿನ್ನೆ ರಾತ್ರಿ ಈ ಯುವಕರಿಬ್ಬರು ಇದೇ ರೀತಿ ದಾಟುವಾಗ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ರೈಲ್ವೆ ಎಸ್ಪಿ ಡಾ. ಎಸ್.ಕೆ. ಸೌಮ್ಯಲತಾ ತಿಳಿಸಿದರು.
ಹಣ್ಣು ಖರೀದಿಸಲು ಹೋಗಿ ಜೀವ ಕಳೆದುಕೊಂಡ ಯುವತಿ: ಮತ್ತೊಂದೆಡೆ ಚಲಿಸುತ್ತಿದ್ದ ರೈಲು ಹತ್ತುವಾಗ ಕಾಲು ಜಾರಿದ ಪರಿಣಾಮ ಯುವತಿ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ನಿನ್ನೆ ಸಂಜೆ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ನಡೆದಿದೆ. 19 ವರ್ಷದ ಶ್ರೇಯಾ ಸಾವನ್ನಪ್ಪಿದ ಯುವತಿ.
ಮೈಸೂರು ಮೂಲದ ಈಕೆ ಅಮೃತಾನಂದ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದ ಸಲುವಾಗಿ ನಿನ್ನೆ 15 ಮಂದಿ ಸ್ನೇಹಿತೆಯರೊಂದಿಗೆ ಶ್ರೇಯಾ ಪ್ರಯಾಣ ಬೆಳೆಸಿದ್ದರು. ಮೈಸೂರಿನಿಂದ ನಿನ್ನೆ ಸಂಜೆ ನಗರದ ರೈಲು ನಿಲ್ದಾಣದ ಪ್ಲಾಟ್ ಫಾರ್ಮ್ 7ರಲ್ಲಿ ರೈಲು ಬಂದು ನಿಂತಿತ್ತು. ಈ ವೇಳೆ ಹಣ್ಣು ಖರೀದಿಸಲು ರೈಲಿನಿಂದ ಶ್ರೇಯ ಕೆಳಗಿಳಿದಿದ್ದರು. ಈ ವೇಳೆ ರೈಲು ಚಲಿಸುತ್ತಿರುವುದನ್ನ ತಡವಾಗಿ ಗಮನಿಸಿದ ಯುವತಿ ಕೂಡಲೇ ಓಡಿ ಹೋಗಿ ರೈಲು ಹತ್ತುವಾಗ ಕಾಲು ಜಾರಿ ಕೆಳಗೆ ಬಿದ್ದಿದ್ದರು. ಕೂಡಲೇ ಸ್ನೇಹಿತೆಯರು ರೈಲಿನಿಂದ ಇಳಿದು ಖಾಸಗಿ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ರೈಲ್ವೆ ಎಸ್ಪಿ ತಿಳಿಸಿದರು.
ಇದನ್ನೂ ಓದಿ: ಸಿಲಿಂಡರ್ ಸ್ಫೋಟ ಪ್ರಕರಣ: ಮೃತಪಟ್ಟ ಅಯ್ಯಪ್ಪ ಮಾಲಾಧಾರಿಗಳ ಕುಟುಂಬಕ್ಕೆ 5 ಲಕ್ಷ ಪರಿಹಾರ - HUBLI CYLINDER BLAST CASE