ಬೆಂಗಳೂರು: ಸೈಬರ್ ವಂಚಕರ ಕುರಿತು ನಿರಂತರವಾಗಿ ಅರಿವು ಮೂಡಿಸುತ್ತಿದ್ದರೂ ಸಹ ಅವುಗಳ ಜಾಲಕ್ಕೆ ಸಿಲುಕಿ ಹಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ನಿತ್ಯ ಒಂದಿಲ್ಲೊಂದು ಹೊಸ ಮಾದರಿಯ ಮೂಲಕ ಸಾರ್ವಜನಿಕರನ್ನ ವಂಚನೆಯ ಜಾಲದಲ್ಲಿ ಬೀಳಿಸುತ್ತಿರುವ ವಂಚಕರು ತನಿಖೆಗೂ ಸಹ ಸವಾಲಾಗಿ ಪರಿಣಮಿಸುತ್ತಿದ್ದಾರೆ.
ನವೆಂಬರ್ 30ರ ವರೆಗಿನ ದಾಖಲೆಗಳ ಪ್ರಕರಣ ಬೆಂಗಳೂರು ಒಂದರಲ್ಲೇ 16,357 ಸೈಬರ್ ವಂಚನೆ ಪ್ರಕರಣಗಳು (ತಿಂಗಳಿಗೆ ಸರಾಸರಿ 1360) ದಾಖಲಾಗಿದ್ದು, ಬರೋಬ್ಬರಿ 1800,57,17,886 (ಸಾವಿರದ ಎಂಟನೂರು ಕೋಟಿ, 57 ಲಕ್ಷದ ಹದಿನೇಳು ಸಾವಿರದ ಎಂಟನೂರಾ ಎಂಬತ್ತಾರು) ಕೋಟಿ ರೂ. ವಂಚಕರ ಪಾಲಾಗಿದೆ. ಆ ಪೈಕಿ 716 ಪ್ರಕರಣಗಳನ್ನ ಪತ್ತೆ ಹಚ್ಚಿರುವ ಬೆಂಗಳೂರು ಪೊಲೀಸರು, 298 ಆರೋಪಿಗಳನ್ನ ಬಂಧಿಸಿದ್ದು, ಅವರ ಬ್ಯಾಂಕ್ ಖಾತೆಗಳಲ್ಲಿದ್ದ 641,96,65,859 ಕೋಟಿ ರೂ. (ಆರನೂರಾ ನಲ್ವತ್ತೊಂದು ಕೋಟಿ, 96 ಲಕ್ಷದ ಎಂಟನೂರಾ ಐವತ್ತೊಂಬತ್ತು) ಫ್ರೀಜ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ದಿನೇ ದಿನೇ ತಂತ್ರಜ್ಞಾನ ಬದಲಾದಂತೆ ಸೈಬರ್ ವಂಚಕರು ವಂಚಿಸುತ್ತಿರುವ ವಿಧಾನಗಳೂ ಸಹ ಬದಲಾಗುತ್ತಿದೆ. ತನಿಖಾ ಸಂಸ್ಥೆಗಳ ಸೋಗಿನಲ್ಲಿ ಡಿಜಿಟಲ್ ಅರೆಸ್ಟ್, ಕ್ರಿಪ್ಟೋ ಕರೆನ್ಸಿ ಮತ್ತಿತರ ಉದ್ಯಮಗಳಲ್ಲಿ ಹಣ ಹೂಡಿಕೆ, ಸುಲಭದ ಟಾಸ್ಕ್ ಪೂರ್ಣಗೊಳಿಸಿ ಲಾಭ ಗಳಿಕೆ, ಕ್ರೆಡಿಟ್ ಕಾರ್ಡ್ ಆಮಿಷ, ಕೆವೈಸಿ ಅಪ್ಡೇಟ್ ಹೆಸರಿನ ವಂಚನೆಗಳು ಹೆಚ್ಚುತ್ತಿವೆ. ವಂಚಕರ ಮಾತು ನಂಬಿ ಅನೇಕ ಜನರು ಹಣ ಕಳೆದುಕೊಳ್ಳುತ್ತಿದ್ದಾರೆ. ಅದರಲ್ಲಿಯೂ ವಿದ್ಯಾವಂತರೇ ಹೆಚ್ಚು ವಂಚಕರ ಜಾಲಕ್ಕೆ ಸಿಲುಕಿಕೊಳ್ಳುತ್ತಿರುವುದು ದುರದೃಷ್ಟಕರ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಗೋಲ್ಡನ್ ಅವರ್‌ನ ಮಹತ್ವ ತಿಳಿದಿರಲಿ: ಅನೇಕ ಸಂದರ್ಭಗಳಲ್ಲಿ ಸೈಬರ್ ವಂಚಕರು ಗಿಫ್ಟ್ ಆಫರ್, ಕ್ರೆಡಿಟ್ ಕಾರ್ಡ್ ಪಾಸ್‌ವರ್ಡ್ ಚೇಂಜ್, ಕೆವೈಸಿ ಅಪ್ಡೇಟ್ ಸೋಗಿನಲ್ಲಿ ಎಸ್ಎಂಎಸ್ ಅಥವಾ ಕರೆಗಳ ಮೂಲಕ ಹಣ ದೋಚುತ್ತಾರೆ. ಅಂಥಹ ಸಂದರ್ಭಗಳಲ್ಲಿ ವಂಚನೆಗೊಳಗಾದ ನಂತರದ ಒಂದು ಗಂಟೆಯ ಅವಧಿಯನ್ನ 'ಗೋಲ್ಡನ್ ಅವರ್' ಎನ್ನಲಾಗುತ್ತದೆ. ಗೋಲ್ಡನ್ ಅವರ್ ಅವಧಿಯಲ್ಲಿ ರಾಷ್ಟ್ರೀಯ ಸೈಬರ್ ಕ್ರೈಮ್ ಸಹಾಯವಾಣಿ 1930ಗೆ ಕರೆ ಮಾಡಿ ಮಾಹಿತಿ ನೀಡುವುದರಿಂದ ಕೆಲವೇ ನಿಮಿಷಗಳಲ್ಲಿ ಆ ಮಾಹಿತಿಯನ್ನು ಆಧರಿಸಿ ಹಣ ವರ್ಗಾವಣೆಯಾದ ಖಾತೆ ಅಥವಾ ವ್ಯಾಲೆಟ್ ಅನ್ನು ಪತ್ತೆಹಚ್ಚಿ ಅದರಲ್ಲಿರುವ ಹಣವನ್ನ ತಡೆಹಿಡಿಯುವ (Freeze) ಅವಕಾಶ ಹೆಚ್ಚಿರುತ್ತದೆ. ಮತ್ತು ತನಿಖಾ ಸಂಸ್ಥೆಗಳು ತ್ವರಿತವಾಗಿ ವಂಚಕರ ಖಾತೆಯನ್ನ ಪತ್ತೆ ಹಚ್ಚಿ, ಸ್ಥಗಿತಗೊಳಿಸಲು ಸಾಧ್ಯವಾಗುತ್ತದೆ.
ಇತ್ತೀಚಿಗೆ ಮಹಿಳೆಯೊಬ್ಬರು ಕಳೆದುಕೊಂಡಿದ್ದ 3.6 ಕೋಟಿ ರೂ.ಗಳನ್ನು ಗೋಲ್ಡನ್ ಅವರ್ ಅವಧಿಯ ಸದುಪಯೋಗದಿಂದ ಮುಂಬೈ ಕ್ರೈಮ್ ಬ್ರ್ಯಾಂಚ್ ಪೊಲೀಸರು ಹಿಂತಿರುಗಿಸುವಲ್ಲಿ ಯಶಸ್ವಿಯಾಗಿದ್ದರು. ಸಾಮಾಜಿಕ ಜಾಲತಾಣದ ಜಾಹೀರಾತು ನಂಬಿದ್ದ ಮಹಿಳೆ ಆನ್‌ಲೈನ್‌ನಲ್ಲಿ 4.56 ಕೋಟಿ ಹೂಡಿಕೆ ಮಾಡಿದ್ದರು. ಆದರೆ, ಲಾಭಾಂಶ ಹಿಂಪಡೆಯಲು ಸಾಧ್ಯವಾಗದಿದ್ದಾಗ ಅನುಮಾನಗೊಂಡ ಮಹಿಳೆ, ರಾಷ್ಟ್ರೀಯ ಸೈಬರ್ ಕ್ರೈಮ್ ಸಹಾಯವಾಣಿಗೆ ದೂರು ನೀಡಿದ್ದರು. ತ್ವರಿತವಾಗಿ ತನಿಖೆ ಕೈಗೊಂಡ ಪೊಲೀಸರು, ವಂಚಕರ ಖಾತೆಗಳ ಪಾಲಾಗಿದ್ದ ಹಣದಲ್ಲಿ 3.6 ಕೋಟಿ ರೂ.ಗಳನ್ನು ಹಿಂಪಡೆದು ಮಹಿಳೆಗೆ ಹಿಂತಿರುಗಿಸಿದ್ದರು.
ಸೈಬರ್ ವಂಚನೆಗೊಳಗಾಗದಿರಲು ಸಾಮಾನ್ಯ ಸೂಚನೆಗಳು:
- ಅನುಮಾನಾಸ್ಪದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡದಿರಿ
- ನಿಮ್ಮ ಖಾತೆಗಳಿಗೆ ಕ್ಲಿಷ್ಟಕರವಾದ ಪಾಸ್‌ವರ್ಡ್, 2 - ಫ್ಯಾಕ್ಟರ್ ಅಥೆಂಟಿಕೇಷನ್ ಇರಿಸಿ
- ನಿಗದಿತವಾಗಿ ಸಾಫ್ಟ್‌ವೇರ್/ಆ್ಯಪ್ ಅಪ್ಡೇಟ್‌ಗೊಳಿಸಿ
- ಖಾತೆಯಲ್ಲಿನ ಹಣಕಾಸು ವ್ಯವಹಾರದ ಬಗ್ಗೆ ಪರಾಮರ್ಶಿಸುತ್ತಿರಿ
- ಮೊಬೈಲ್ ಹಾಗೂ ಆನ್‌ಲೈನ್ ಹಣಕಾಸು ವ್ಯವಹಾರದ ಬಗ್ಗೆ ಎಚ್ಚರವಿರಲಿ
- ಸಾರ್ವಜನಿಕ ವೈ-ಫೈ ಬಳಸುವಾಗ ಎಚ್ಚರವಿರಲಿ
- ವೈಯಕ್ತಿಕ ಮಾಹಿತಿ, ದಾಖಲೆಗಳನ್ನು ಗೌಪ್ಯವಾಗಿರಿಸಿಕೊಳ್ಳಿ
- ಉತ್ತಮ ಆ್ಯಂಟಿ ವೈರಸ್ ಸಾಫ್ಟ್‌ವೇರ್‌ಗಳನ್ನು ಬಳಸಿ ಹಾಗೂ ನಿಗದಿತವಾಗಿ ಅಪ್ಡೇಟ್ ಮಾಡಿ
- ಯಾವುದೇ ವಂಚನೆಗಳಾದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ಅಥವಾ ರಾಷ್ಟ್ರೀಯ ಸೈಬರ್ ಕ್ರೈಂ ಸಹಾಯವಾಣಿ (1930) ಸಂಪರ್ಕಿಸಿ.
ಇದನ್ನೂ ಓದಿ: |