ಮಂಗಳೂರು:ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿ ಅಧಿಕ ಲಾಭಾಂಶ ನೀಡುವುದಾಗಿ ಹೇಳಿ ವ್ಯಕ್ತಿಯೊಬ್ಬರಿಗೆ 10 ಲಕ್ಷ ರೂ. ವಂಚಿಸಿರುವ ಪ್ರಕರಣ ನಡೆದಿದೆ.
ದೂರಿನಲ್ಲಿ ಏನಿದೆ?:ದೂರುದಾರರು 2023ರ ನವೆಂಬರ್‌ನಲ್ಲಿ ಓಶಿಯನ್ ಫೈನಾನ್ಸ್ ಅಕಾಡೆಮಿ ಎಂಬ ಕಂಪನಿಯ ವೆಬ್‌ಸೈಟ್‌ನಲ್ಲಿ ಕ್ರಿಪ್ಟೋ ಕರೆನ್ಸಿಯ ಬಗ್ಗೆ ಆನ್‌ಲೈನ್‌ನಲ್ಲಿ ತರಬೇತಿ ಪಡೆದಿದ್ದರು. ಆಗ ಕಂಪನಿಯವರು ದೂರುದಾರರ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಸಂಖ್ಯೆ ಪಡೆದುಕೊಂಡು Viyako.com ಎಂಬ ಕ್ರಿಪ್ಟೋ ಕರೆನ್ಸಿಯ ವೆಬ್‌ಸೈಟ್ ಎಕ್ಸ್ಚೇಂಜ್ ಸೆಂಟರ್ ಅನ್ನು ಪರಿಚಯಿಸಿದ್ದಾರೆ. ಆನಂತರ ಅಡ್ಡಿರ್ ಕಾದಿರ್ ಎಂದು ಪರಿಚಯಿಸಿಕೊಂಡ ವ್ಯಕ್ತಿ ಆನ್‌ಲೈನ್ ಮೂಲಕ ಮೆಸೇಜ್ ಮಾಡಿ ಹಣ ಹೂಡುವಂತೆ ತಿಳಿಸಿದ್ದ. ಅದರಂತೆ, ದೂರುದಾರರು 12,500 ರೂ.ಗಳನ್ನು ಹೂಡಿಕೆ ಮಾಡಿದ್ದರು. ಅದರ ಲಾಭಾಂಶವೆಂದು 46,000 ರೂ.ಗಳನ್ನು ದೂರುದಾರರ ಖಾತೆಗೆ ಕಳುಹಿಸಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ತದನಂತರ ಆರೋಪಿಗಳು 2024ರ ಮೇ ತಿಂಗಳಲ್ಲಿ ಮೆಸೇಜ್ ಮಾಡಿ ಕ್ರಿಪ್ಟೋ ಕರೆನ್ಸಿಯಲ್ಲಿ ಒಳ್ಳೆಯ ಲಾಭವಿದೆ ಎಂದು ನಂಬಿಸಿ ಕಾಯಿನ್ ಖರೀದಿಸುವಂತೆ ತಿಳಿಸಿದ್ದಾರೆ. ಮೇ 13ರಂದು ಎರಡು ಕಾಯಿನ್‌ಗಳಿಗೆ ತಲಾ 5 ಲಕ್ಷ ರೂ.ಗಳಂತೆ ಒಟ್ಟು 10 ಲಕ್ಷ ರೂ.ಗಳನ್ನು ವರ್ಗಾಯಿಸಿಕೊಂಡಿದ್ದರು. ಅನಂತರ ಯಾವುದೇ ಹಣ ವಾಪಸ್ ನೀಡದೇ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.