ಲೋಕಸಭಾ ಚುನಾವಣೆ ಬಹಿಷ್ಕರಿಸಲು ಮಹದಾಯಿ ಹೋರಾಟಗಾರರ ತೀರ್ಮಾನ ಧಾರವಾಡ:ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಮತ್ತೆ ಮಹದಾಯಿ ಹೋರಾಟದ ಕಿಚ್ಚು ಮುಂಚೂಣಿಗೆ ಬಂದಿದೆ. ಎರಡು ರಾಷ್ಟ್ರೀಯ ಪಕ್ಷಗಳ ರಾಜಕಾರಣಿಗಳಿಗೆ ಅನ್ನದಾತರು ಹಾಗೂ ಹೋರಾಟಗಾರರು ಕೊನೆಯ ಎಚ್ಚರಿಕೆ ನೀಡಿದ್ದಾರೆ. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಶಾಕ್ ನೀಡಲು ರೈತರು ಸಜ್ಜಾಗಿದ್ದಾರೆ.
ಧಾರವಾಡ ವಿದ್ಯಾವರ್ಧಕ ಸಂಘದಲ್ಲಿ ಚಿಂತನ-ಮಂಥನ ಸಭೆ ನಡೆಸಿ ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ. ಇದಕ್ಕಾಗಿ ಮಹದಾಯಿ ಹೋರಾಟಗಾರರು ಸಭೆಯಲ್ಲಿ ಒಕ್ಕೊರಲಿನ ನಿರ್ಧಾರ ಕೈಗೊಂಡಿದ್ದಾರೆ. ಅನ್ನದಾತರು ಮಹದಾಯಿಗಾಗಿ ಕಳೆದ ನಾಲ್ಕು ದಶಕಗಳಿಂದ ಕಾದು ಸುಸ್ತಾಗಿದ್ದಾರೆ. ಚುನಾವಣೆ ಘೋಷಣೆಗೂ ಮೊದಲೇ ಮಹದಾಯಿಗಿರುವ ಅಡೆತಡೆಗಳನ್ನು ನಿವಾರಿಸಲು ಆಗ್ರಹಿಸಿದ್ದಾರೆ.
ಮಲಪ್ರಭಾ ನದಿ ನೀರಿನ ಜಾಕ್ವೆಲ್ ಬಂದ್ ಎಚ್ಚರಿಕೆ:ಅವಳಿ ನಗರದ ಜನರು ಚುನಾವಣೆ ಬಹಿಷ್ಕಾರ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದು, ನೀರು ಸರಬರಾಜು ಮಾಡುವ ಮಲಪ್ರಭಾ ನದಿಯ ನೀರಿನ ಜಾಕ್ವೆಲ್ ಬಂದ್ ಮಾಡುವ ಎಚ್ಚರಿಕೆ ನೀಡಿದ್ದಾರೆ. ಎರಡು ರಾಷ್ಟ್ರೀಯ ಪಕ್ಷದ ನಾಯಕರುಗಳು ಚುನಾವಣೆಯೊಳಗೆ ಮಹದಾಯಿ ಕಾಮಗಾರಿ ಆರಂಭಿಸಿ, ಇಲ್ಲದಿದ್ದರೆ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡುವುದಾಗಿ ಹೇಳಿದ್ದಾರೆ.
ಹೋರಾಟಗಾರರು ಚುನಾವಣೆ ಘೋಷಣೆ ಆಗುವವರೆಗೂ ಗಡುವು ಕೊಟ್ಟಿದ್ದು, ಒಂದು ವೇಳೆ ಕಾಮಗಾರಿ ಆರಂಭ ಮಾಡದೆ ಹೋದರೆ ಹೋರಾಟ ನಿಶ್ಚಿತ. ವನ್ಯಜೀವಿ ಇಲಾಖೆಯಿಂದ ಅನುಮತಿ ಪಡೆದು ಕಾಮಗಾರಿ ಆರಂಭಿಸಿ ಅದನ್ನು ಪಡೆಯುವವರೆಗೂ ಚುನಾವಣೆಯಲ್ಲಿ ಮತದಾನ ಮಾಡದಂತೆ ರೈತರು ಒತ್ತಾಯಿಸಿದ್ದಾರೆ. ರಾಜಕಾರಣಿಗಳು ಕೇವಲ ರಾಜಕೀಯ ಹಿತಾಶಕ್ತಿಗೆ ನಮ್ಮನ್ನು ಬಳಸಿಕೊಳ್ಳುತ್ತಿದ್ದಾರೆ. ಹುಬ್ಬಳ್ಳಿ ಧಾರವಾಡ ನಗರದ ಜನತೆ ಚುನಾವಣೆಯನ್ನು ಬಹಿಷ್ಕರಿಸಿ, ಇದು ನಮ್ಮ ಕೊನೆಯ ಹೋರಾಟ. ನಾವು ಯಾರ ಮನೆಗೂ ಹೋಗಲ್ಲ. ರಾಜಕಾರಣಿಗಳು ನಮ್ಮ ಬಳಿ ಬಂದು ಮಾತನಾಡಿ ನೀರು ಹರಿಸುವ ಕೆಲಸ ಮಾಡಬೇಕು. ಇಲ್ಲದಿದ್ರೆ, ಅಂತಿಮ ಹೋರಾಟಕ್ಕೆ ನಾವು ಸಿದ್ಧರಾಗಿದ್ದೇವೆ ಎಂದು ರೈತರ ಎಚ್ಚರಿಕೆ ಕೊಟ್ಟಿದ್ದಾರೆ.
ಇದನ್ನೂ ಓದಿ:ಸೈಬರ್ ಅಪರಾಧಗಳ ತನಿಖಾ ಶೃಂಗಸಭೆ 2024: ಭವಿಷ್ಯದ ಸವಾಲುಗಳು, ಪರಿಹಾರೋಪಾಯಗಳ ಚರ್ಚೆ