ಕರ್ನಾಟಕ

karnataka

ETV Bharat / state

ಅಕ್ರಮ ಆಸ್ತಿ ಗಳಿಕೆ ಪ್ರಕರಣ; ಡಿಕೆ ಶಿವಕುಮಾರ್‌ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡ ಲೋಕಾಯುಕ್ತ - Lokayukta Police

ಸಿಬಿಐನಲ್ಲಿದ್ದ ಪ್ರಕರಣದ ಮರುತನಿಖೆಗೆ ಲೋಕಾಯುಕ್ತ ಮುಂದಾಗಿದ್ದು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರಿಗೆ ಮತ್ತೊಂದು ಸಂಕಷ್ಟ ಶುರುವಾಗಿದೆ.

ಡಿಕೆ ಶಿವಕುಮಾರ್‌
ಡಿಕೆ ಶಿವಕುಮಾರ್‌

By ETV Bharat Karnataka Team

Published : Feb 13, 2024, 5:31 PM IST

Updated : Feb 13, 2024, 7:14 PM IST

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆಯ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. 2020ರ ಅಕ್ಟೋಬರ್ 03ರಂದು ಸಿಬಿಐ ದಾಖಲಿಸಿಕೊಂಡಿದ್ದ ಪ್ರಕರಣದ ಮರು ತನಿಖೆಗೆ ಲೋಕಾಯುಕ್ತ ಮುಂದಾಗಿದ್ದು, ಡಿಸಿಎಂ ಡಿಕೆ ಶಿವಕುಮಾರ್‌ಗೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ.

ಡಿಕೆ ಶಿವಕುಮಾರ್‌ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಸಿಬಿಐ ತನಿಖೆಗೆ ಆದೇಶಿಸಿದ್ದ ಈ ಹಿಂದಿನ ಸರ್ಕಾರ ಕಾನೂನು ಕ್ರಮಗಳನ್ನ ಅನುಸರಿಸಿಲ್ಲ ಎಂಬ ಕಾರಣ ನೀಡಿ ರಾಜ್ಯ ಸರ್ಕಾರ ವಾಪಸ್‌ ತೆಗೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನ ಡಿಸೆಂಬರ್ 22ರಂದು ಲೋಕಾಯುಕ್ತಕ್ಕೆ ವರ್ಗಾಯಿಸಲಾಗಿತ್ತು. ಒಂದು ತಿಂಗಳ ಬಳಿಕ ಸದ್ಯ ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.

ಡಿಕೆ ಶಿವಕುಮಾರ್‌ ವಿರುದ್ಧ ಸಿಬಿಐ 2020ರಲ್ಲಿ ಪ್ರಕರಣ ದಾಖಲಿಸಿತ್ತು. 2019ರಲ್ಲಿ‌ ಬಿಜೆಪಿ ಸರ್ಕಾರ ಸಿಬಿಐ ತನಿಖೆಗೆ ಅನುಮತಿ ನೀಡಿತ್ತು. ಆದರೆ, ನವೆಂಬರ್ 23, 2023ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸಿಬಿಐಗೆ ನೀಡಿದ್ದ ಅನುಮತಿಯನ್ನ ಸರ್ಕಾರ ವಾಪಸ್‌ ಪಡೆದುಕೊಂಡಿತ್ತು. ಆಗಿನ ವಿಧಾನಸಭೆಯ ಸ್ಪೀಕರ್ ಅನುಮತಿಯನ್ನು ಪಡೆಯದೇ ಸಿಬಿಐ ತನಿಖೆಗೆ ಅನುಮತಿ ನೀಡಿರುವುದು, ಕಾನೂನಾತ್ಮಕ ಕ್ರಮವಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದರು.

ಮತ್ತೊಂದೆಡೆ ಲೋಕಾಯುಕ್ತ ಅಧಿಕಾರಿಗಳು ಪ್ರಕರಣದ ಇದುವರೆಗಿನ ತನಿಖಾ ದಾಖಲೆಗಳನ್ನು ಒದಗಿಸುವಂತೆ ಸಿಬಿಐಗೆ ಪತ್ರ ಬರೆದಿದ್ದಾರೆ. ಆದರೆ, ಸಿಬಿಐ ಅಧಿಕಾರಿಗಳು ಇದುವರೆಗೂ ಯಾವುದೇ ದಾಖಲೆಗಳನ್ನು ಲೋಕಾಯುಕ್ತಕ್ಕೆ ನೀಡಿಲ್ಲ. ಅದಲ್ಲದೇ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಸಿಬಿಐ ಹೈಕೋರ್ಟ್‌ ಮೊರೆ ಹೋಗಿದ್ದು, ಸಿಬಿಐನಲ್ಲಿ ಪ್ರಕರಣದ ತನಿಖೆ ಮುಗಿಯುವ ಹಂತದಲ್ಲಿರುವಾಗ ತನಿಖೆಗೆ ನೀಡಿರುವ ಅನುಮತಿ ಆದೇಶ ವಾಪಸ್‌ ಪಡೆಯುವುದು ಸೂಕ್ತವಲ್ಲ ಎಂದು ವಾದ ಮಂಡಿಸಿತ್ತು. ಸದ್ಯ ಆ ಪ್ರಕರಣದ ವಿಚಾರಣೆ ನಡೆಯುತ್ತಿದೆ.

ಇದನ್ನೂ ಓದಿ: ಡಿಕೆಶಿ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಸಿಬಿಐ ತನಿಖೆಗೆ ನೀಡಿದ್ದ ಆದೇಶ ವಾಪಸ್​ ಪಡೆದ ಸರ್ಕಾರ

Last Updated : Feb 13, 2024, 7:14 PM IST

ABOUT THE AUTHOR

...view details