ಮೈಸೂರು: ಸಿಎಂ ಹಾಗೂ ಪತ್ನಿ ಸೇರಿದಂತೆ ಇತರರ ವಿರುದ್ಧ ಲೋಕಾಯುಕ್ತದಲ್ಲಿ ದಾಖಲಾಗಿರುವ ಪ್ರಕರಣದ ಮುಂದುವರೆದಿದ್ದು, ಮೂಲ ಜಮೀನು ಸ್ಥಳಕ್ಕೆ ದೂರುದಾರ ಸ್ನೇಹಮಯಿ ಕೃಷ್ಣ ಅವರನ್ನು ಲೋಕಾಯುಕ್ತ ಪೊಲೀಸರು ಕರೆದೊಯ್ದು ಮಹಜರು ನಡೆಸಿದರು. ಈ ವೇಳೆ ಕಂದಾಯ, ಸರ್ವೇ ಇಲಾಖೆಯ ಅಧಿಕಾರಿಗಳು ಹಾಜರಿದ್ದರು. ಈ ವೇಳೆ ಲೋಕಾಯುಕ್ತ ಪೊಲೀಸರು ಟೇಪ್ ಹಿಡಿದು ಅಳತೆ ಮಾಡಿ ತನಿಖೆ ಮಾಡಿದರು.
ಮುಡಾ ಪ್ರಕರಣ ಸಂಬಂಧ ವಿಚಾರಣೆಗೆ ಬರುವಂತೆ ಮೈಸೂರು ಲೋಕಾಯುಕ್ತ ಕರೆದ ಹಿನ್ನೆಲೆ ಬೆಳ್ಳಂಬೆಳಗ್ಗೆ 7.30ಕ್ಕೆ ದೂರುದಾರ ಸ್ನೇಹಮಯಿ ಕೃಷ್ಣ ಮೈಸೂರಿನ ಲೋಕಾಯುಕ್ತ ಕಚೇರಿಗೆ ಆಗಮಿಸಿದ್ದರು. ಬಳಿಕ ಲೋಕಾ ಪೊಲೀಸರು, ಸ್ನೇಹಮಯಿ ಕೃಷ್ಣ ಅವರನ್ನು ಮಹಜರು ಮಾಡಲು ಸ್ಥಳಕ್ಕೆ ಕರೆದೊಯ್ದರು.
ಈ ಬಗ್ಗೆ ದೂರವಾಣಿಯಲ್ಲಿ ಮಾಹಿತಿ ನೀಡಿದ ದೂರದಾರ ಸ್ನೇಹಮಯಿ ಕೃಷ್ಣ, ಲೋಕಾಯುಕ್ತ ಪೋಲೀಸರು ದೂರು ನೀಡಿರುವ ಸ್ಥಳದ ಮಾಹಿತಿ ನೀಡುವಂತೆ ಕರೆ ಮಾಡಿದ್ದರು. ಅದರಂತೆ ಇಂದು ಬೆಳಗ್ಗೆ ಲೋಕಾಯುಕ್ತ ಕಚೇರಿಗೆ ಆಗಮಿಸಿ, ಕೆಲವು ಮಾಹಿತಿಗಳನ್ನ ಲೋಕಾಯುಕ್ತರಿಗೆ ನೀಡಿದ್ದೇನೆ. ನಂತರ ಕೆಸರೆ ಗ್ರಾಮದ ಸರ್ವೆ ನಂಬರ್ 464 ರಲ್ಲಿ ಇರುವ 3 ಎಕರೆ 16 ಗುಂಟೆ ಜಮೀನಿನ ಮಹಜರಿಗೆ ಕರೆದೊಯ್ದರು. ಬಳಿಕ ಮಧ್ಯಾಹ್ನ ವಿಜಯನಗರದಲ್ಲಿ 14 ಬದಲಿ ನಿವೇಶನ ಪಡೆದ ಸ್ಥಳದ ಮಹಜರು ಮಾಡಲಿದ್ದಾರೆ. ಲೋಕಾಯುಕ್ತರಿಗೆ ತನಿಖೆಗೆ ಬೇಕಾದ ಎಲ್ಲಾ ರೀತಿಯ ಮಾಹಿತಿಯನ್ನ ನಾನು ನೀಡಲು ಸಿದ್ಧನಿದ್ದೇನೆ ಎಂದು ದೂರವಾಣಿಯಲ್ಲಿ ಈಟಿವಿ ಭಾರತಕ್ಕೆ ಸ್ನೇಹಮಯಿ ಕೃಷ್ಣ ಮಾಹಿತಿ ನೀಡಿದರು.