ಕರ್ನಾಟಕ

karnataka

ETV Bharat / state

ಕುಮಾರಸ್ವಾಮಿ, ನಿಖಿಲ್, ಸುರೇಶ್ ಬಾಬು ವಿರುದ್ಧ ಪೊಲೀಸರಿಗೆ ದೂರು ನೀಡಿದ ಎಡಿಜಿಪಿ ಚಂದ್ರಶೇಖರ್ - HD KUMARASWAMY CASE

ವೈಯಕ್ತಿಕ ತೇಜೋವಧೆ ಮತ್ತು ಸುಳ್ಳು ಭ್ರಷ್ಟಾಚಾರ ಆರೋಪ ಸಂಬಂಧ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಪೊಲೀಸರಿಗೆ ದೂರು ನೀಡಿದ್ದಾರೆ.

ಹೆಚ್​ಡಿ ಕುಮಾರಸ್ವಾಮಿ, ಐಜಿಪಿ ಚಂದ್ರಶೇಖರ್
ಹೆಚ್.​ಡಿ.ಕುಮಾರಸ್ವಾಮಿ, ಐಜಿಪಿ ಚಂದ್ರಶೇಖರ್ (ETV Bharat)

By ETV Bharat Karnataka Team

Published : Oct 11, 2024, 8:31 PM IST

ಬೆಂಗಳೂರು: ತಮ್ಮ ಮೇಲೆ ಸುಳ್ಳು ಆರೋಪ ಹೊರಿಸಿ, ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಮತ್ತು ಶಾಸಕ ಸುರೇಶ್ ಬಾಬು ವಿರುದ್ಧ ಲೋಕಾಯುಕ್ತ ವಿಶೇಷ ತನಿಖಾ ತಂಡ (ಎಸ್ಐಟಿ)ದ ಎಡಿಜಿಪಿ ಚಂದ್ರಶೇಖರ್ ಅವರು ಇಂದು ಸಂಜಯನಗರ ಠಾಣೆಗೆ ದೂರು ನೀಡಿದ್ದು, ಎನ್​​ಸಿಆರ್ (ಗಂಭೀರ ಸ್ವರೂಪವಲ್ಲದ ಅಪರಾಧ) ದಾಖಲಾಗಿದೆ.

ಕುಮಾರಸ್ವಾಮಿ ಅವರು ಸುದ್ದಿಗೋಷ್ಠಿ ನಡೆಸಿ ತಮ್ಮ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ಜೀವ ಬೆದರಿಕೆ ಹಾಕಿದ್ದಾರೆ. ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಕೂಡಾ ದುರುದ್ದೇಶಪೂರಿತ ಹೇಳಿಕೆ ನೀಡಿದ್ದಾರೆ. ಶಾಸಕ ಸುರೇಶ್ ಬಾಬು ತಮ್ಮ ಮೇಲೆ ಸುಳ್ಳು ಆರೋಪ ಹೊರಿಸಿ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

ಸುಳ್ಳು ದಾಖಲಾತಿ ಸೃಷ್ಟಿಸಿ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸುವ ಮೂಲಕ ಕರ್ನಾಟಕ ಕೇಡರ್ ಆಗಿ ಮುಂದುವರೆದಿದ್ದಾರೆ ಎಂದು ಆರೋಪಿಸಿದ್ದಲ್ಲದೇ, ಬೇರೆ ರಾಜ್ಯಕ್ಕೆ ಕಳುಹಿಸುವುದಾಗಿ ತಮಗೆ ಬೆದರಿಸಿದ್ದಾರೆ. ನಮ್ಮ ಕುಟುಂಬದವರ ವಿರುದ್ಧವೂ ಸುಳ್ಳು ಆರೋಪ ಹೊರಿಸಿ ತೊಂದರೆ ಕೊಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಿರುವುದಾಗಿ ಚಂದ್ರಶೇಖರ್ ತಿಳಿಸಿದ್ದಾರೆ.

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್​​ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಚಂದ್ರಶೇಖರ್ ಪತ್ರ ಬರೆದಿದ್ದರು. ಆ ಬಳಿಕ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ, ಐಜಿಪಿ ಚಂದ್ರಶೇಖರ್ ವಿರುದ್ಧ ಆರೋಪ ಮಾಡಿದ್ದರು.

50 ಕೋಟಿ ರೂಪಾಯಿ ನೀಡುವಂತೆ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪದಡಿ ಕುಮಾರಸ್ವಾಮಿ ವಿರುದ್ಧ ಇತ್ತೀಚೆಗಷ್ಟೇ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಬೆನ್ನಲ್ಲೇ ಕೇಂದ್ರ ಸಚಿವರ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.

ಇದನ್ನೂ ಓದಿ: 'ಆರೋಪ‌ಗಳು ಶುದ್ಧ ಸುಳ್ಳು': ಹೆಚ್​ಡಿಕೆ ಆರೋಪಕ್ಕೆ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಪತ್ರ - ADGP Chandrashekhar Letter

ABOUT THE AUTHOR

...view details