ಬೆಂಗಳೂರು: ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಗುರುವಾರ ರಾತ್ರಿ ಡಿನ್ನರ್ ಮೀಟಿಂಗ್ ನಡೆಯಿತು. ಸಿಎಂ ಸಿದ್ದರಾಮಯ್ಯ, ಹಲವು ಸಚಿವರು, ಶಾಸಕರು ಪಾಲ್ಗೊಂಡಿದ್ದರು.
ಕುಮಾರಕೃಪಾ ಸಮೀಪದ ಕ್ರೆಸೆಂಟ್ ರಸ್ತೆಯಲ್ಲಿರುವ ಜಾರಕಿಹೊಳಿ ಅವರ ಸರ್ಕಾರಿ ನಿವಾಸದಲ್ಲಿ 'ಹಿಂದ' ಸಚಿವರು ಡಿನ್ನರ್ ಸಭೆ ನಡೆಸಿರುವುದು ಹಲವು ಅನುಮಾನ, ಕುತೂಹಲಗಳಿಗೆ ಕಾರಣವಾಗಿದೆ.
ಈ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆಗೆ ಗೃಹ ಸಚಿವ ಜಿ.ಪರಮೇಶ್ವರ್, ಸಹಕಾರ ಸಚಿವ ಕೆ.ಎನ್.ರಾಜಣ್ಣ, ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ.ಮಹದೇವಪ್ಪ ಹಾಗೂ ಹತ್ತಕ್ಕೂ ಹೆಚ್ಚು ಶಾಸಕರು ಭಾಗಿಯಾಗಿದ್ದರು.
ವಿದೇಶ ಪ್ರವಾಸದಲ್ಲಿ ಡಿಕೆಶಿ ಕುಟುಂಬ: ಡಿಸಿಎಂ ಡಿ.ಕೆ.ಶಿವಕುಮಾರ್ ಕುಟುಂಬಸಮೇತರಾಗಿ ವಿದೇಶ ಪ್ರವಾಸಕ್ಕೆ ತೆರಳಿರುವ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ, ಸಚಿವರಾದ ಪರಮೇಶ್ವರ್, ಸತೀಶ್ ಜಾರಕಿಹೊಳಿ, ಹೆಚ್.ಸಿ.ಮಹಾದೇವಪ್ಪ ಹಾಗೂ ಕೆ.ಎನ್.ರಾಜಣ್ಣ ಡಿನ್ನರ್ ಸಭೆ ನಡೆಸಿರುವುದು ಅಚ್ಚರಿ ಮೂಡಿಸಿದೆ.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಸಂಪುಟ ಪುನಾರಚನೆ, ಜಾತಿ ಜನಗಣತಿ ಕುರಿತು ಡಿನ್ನರ್ ಮೀಟಿಂಗ್‌ನಲ್ಲಿ ಚರ್ಚಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.