ಮೈಸೂರು:ನಾಡಹಬ್ಬ ಮೈಸೂರು ದಸರಾ-2024 ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 18 ಆನೆಗಳ ಪಟ್ಟಿ ಸಿದ್ಧಗೊಂಡಿದೆ. ಮೈಸೂರು ಅರಣ್ಯ ಇಲಾಖೆ ಅಧಿಕಾರಿಗಳು ವಿವಿಧ ಆನೆ ಶಿಬಿರಗಳಿಗೆ ಭೇಟಿ ನೀಡಿ, ಪಟ್ಟಿ ರೆಡಿ ಮಾಡಿ, ಬೆಂಗಳೂರಿನ ಮುಖ್ಯ ಅರಣ್ಯಾಧಿಕಾರಿಗಳಿಗೆ ಕಳುಹಿಸಿದ್ದಾರೆ.
ಈ ಬಾರಿಯ ದಸರಾ ಮಹೋತ್ಸವ ಅದ್ಧೂರಿಯಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. 18 ಆನೆಗಳ ಪಟ್ಟಿಯಲ್ಲಿ, ಅಭಿಮನ್ಯು ನೇತೃತ್ವದ 14 ಆನೆಗಳು ಜಂಬೂ ಸವಾರಿಯಲ್ಲಿ ಭಾಗವಹಿಸಲಿವೆ. 4 ಆನೆಗಳನ್ನು ಹೆಚ್ಚುವರಿಯಾಗಿ ಆಯ್ಕೆ ಮಾಡಲಾಗಿದೆ. ಅವು ಬದಲಿ ಆನೆಗಳಾಗಿರಲಿದ್ದು, ಆಗಸ್ಟ್ ಮೊದಲ ಅಥವಾ ಎರಡನೇ ವಾರದಲ್ಲಿ ಗಜಪಯಣ ನಡೆಯಲಿದೆ.
ಶಿಬಿರಗಳಲ್ಲಿ ದಸರಾ ಆನೆಗಳ ಪರಿಶೀಲನೆ:ನವರಾತ್ರಿ ಆರಂಭಕ್ಕೆ ಕೆಲ ತಿಂಗಳುಗಳು ಬಾಕಿಯಿದ್ದು, ಅಕ್ಟೋಬರ್ 12ರಂದು ಜಂಬೂ ಸವಾರಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಎರಡು ತಿಂಗಳಿಗೂ ಮುಂಚೆಯೇ ದಸರಾ ಆನೆಗಳನ್ನು ಎರಡು ಹಂತಗಳಲ್ಲಿ ಮೈಸೂರಿಗೆ ಕರೆತಂದು ತರಬೇತಿ ನೀಡಲಾಗುತ್ತದೆ. ಇದಕ್ಕಾಗಿ ಮೈಸೂರು ಅರಣ್ಯ ವಲಯದ ಡಿಸಿಎಫ್ ಡಿ.ಎಂ.ಶರಣಬಸಪ್ಪ ನೇತೃತ್ವದಲ್ಲಿ ಅರಣ್ಯಾಧಿಕಾರಿಗಳು, ವೈದ್ಯರು ಸೇರಿದಂತೆ ಅರಣ್ಯ ಇಲಾಖೆ ತಂಡ ಆನೆ ಶಿಬಿರಗಳಿಗೆ ಭೇಟಿ ನೀಡಿತ್ತು.
''ನಾಗರಹೊಳೆ ಅರಣ್ಯ ವ್ಯಾಪ್ತಿಯ ಮತ್ತಿಗೋಡು, ಭೀಮನಕಟ್ಟೆ, ದೊಡ್ಡ ಹರವೆ, ಕೊಡಗಿನ ದುಬಾರೆ ಆನೆ ಶಿಬಿರ, ಬಂಡೀಪುರದ ರಾಮಾಪುರ ಆನೆ ಶಿಬಿರಗಳಿಗೆ ಅಧಿಕಾರಿಗಳು ತೆರಳಿದ್ದೆವು. ಶಿಬಿರಗಳಲ್ಲಿರುವ ಒಟ್ಟು 22 ಆನೆಗಳನ್ನು ಪರಿಶೀಲಿಸಿ, ಅಂತಿಮವಾಗಿ 18 ಆನೆಗಳ ಪಟ್ಟಿ ಸಿದ್ಧವಾಗಿದೆ. ಅದರಲ್ಲಿ 14 ಆನೆಗಳು ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಉಳಿದ 4 ಆನೆಗಳನ್ನು ಕಾಯ್ದಿರಿಸುವ ಉದ್ದೇಶದಿಂದ ಆಯ್ಕೆ ಮಾಡಲಾಗಿದೆ. ಆನೆಗಳ ಪಟ್ಟಿಯನ್ನು ಬೆಂಗಳೂರಿನ ಮುಖ್ಯ ಅರಣ್ಯಾಧಿಕಾರಿಗಳ ಕಚೇರಿಗೆ ರವಾನಿಸಲಾಗಿದೆ'' ಎಂದು ಡಿಸಿಎಫ್ ಶರಣಬಸಪ್ಪ ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು.