ಗ್ರಾಮದ ಹೊಲಕ್ಕೆ ನುಗ್ಗಿದ ಚಿರತೆ ಬೆನ್ನಟ್ಟಿ ಹಿಡಿದ ಗ್ರಾಮಸ್ಥರು ದಾವಣಗೆರೆ: ಗ್ರಾಮದಲ್ಲಿ ಕಾಣಿಸಿಕೊಂಡ ಚಿರತೆಯನ್ನು ಗ್ರಾಮಸ್ಥರು ಬೆನ್ನಟ್ಟಿ ಸೆರೆಹಿಡಿದ ಘಟನೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕೋಟೆ ಮಲ್ಲೂರು ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಕೆಲವರು ಚಿರತೆಯನ್ನು ಓಡಿಸುವ ಭರದಲ್ಲಿ ಅದಕ್ಕೆ ಕಲ್ಲು, ದೊಣ್ಣೆಗಳಿಂದ ಹೊಡೆದಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಗ್ರಾಮದಲ್ಲಿ ಕಾಣಿಸಿಕೊಂಡ ಚಿರತೆ ಜನರಲ್ಲಿ ಭಯ ಹುಟ್ಟಿಸಿತ್ತು. ಇತ್ತೀಚಿಗೆ ನಾಲ್ವರ ಮೇಲೆ ದಾಳಿ ಕೂಡ ಮಾಡಿತ್ತು. ಇದರಿಂದ ಜನ ಬೇಸತ್ತಿದ್ದರು.
ಇಂದು ಮತ್ತೆ ಮೆಕ್ಕೆಜೋಳದ ಹೊಲ ಹೊಕ್ಕಿದ್ದನ್ನು ಕೋಟೆ ಮಲ್ಲೂರು ಗ್ರಾಮದ ಕೆಲವರು ನೋಡಿದ್ದಾರೆ. ತಕ್ಷಣ ಬೆನ್ನಟ್ಟಿದ್ದಲ್ಲದೇ ಕೆಲವರು ದೊಣ್ಣೆ, ಕಲ್ಲುಗಳಿಂದ ಹೊಡೆದು ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಹೊನ್ನಾಳಿ ವಲಯದ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ, ಕಾಡುಪ್ರಾಣಿಯ ರಕ್ಷಣೆ ಮಾಡಿದ್ದಾರೆ. ನಿತ್ರಾಣಗೊಂಡು ಸುಸ್ತಾಗಿದ್ದ ಚಿರತೆಗೆ ಗ್ಲೂಕೋಸ್ ನೀಡಿ ಉಪಚರಿಸಲಾಗಿದೆ.
ಡಿಎಫ್ಓ ಶಶಿಧರ್ ಹೇಳಿಕೆ:ಜಿಲ್ಲಾ ಅರಣ್ಯಧಿಕಾರಿ ಶಶಿಧರ್ ಪ್ರತಿಕ್ರಿಯಿಸಿ, "ಇಂದು ಬೆಳಗ್ಗೆ ಕೋಟೆ ಮಲ್ಲೂರು ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಅದನ್ನು ಓಡಿಸಲು ಜನರು ದೊಣ್ಣೆ, ಕಲ್ಲುಗಳಿಂದ ಹಲ್ಲೆ ಮಾಡಿದ್ದಾರೆ. ಚಿರತೆ ಪ್ರಾಣಕ್ಕೆ ಏನೂ ತೊಂದರೆಯಾಗಿಲ್ಲ. ನಿತ್ರಾಣಗೊಂಡು ಸುಸ್ತಾದ ಬಳಿಕ ಗ್ರಾಮಸ್ಥರು ಸೆರೆ ಹಿಡಿದಿದ್ದಾರೆ. ಅದಕ್ಕೆ ಇನ್ಫೆಕ್ಷನ್ ಆಗಿದ್ದು, ಸ್ಥಳೀಯ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದಿಂದ ವೈದ್ಯರು ಬರುತ್ತಿದ್ದಾರೆ'' ಎಂದು ತಿಳಿಸಿದರು.
ಆಹಾರ ಅರಸಿ ಬಂದು ಬಾವಿಗೆ ಬಿದ್ದ ಕರಿಚಿರತೆ:ಮಂಗಳೂರುನಗರದ ಹೊರವಲಯದ ಎಡಪದವು ಬಳಿಯ ಗೊಸ್ಪೆಲ್ ಸನಿಲ ಎಂಬಲ್ಲಿ ಕರಿಚಿರತೆ ಬಾವಿಗೆ ಬಿದ್ದ ಘಟನೆ (ಮಾರ್ಚ್- 31-2024) ನಡೆದಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯರ ಸಹಕಾರದಿಂದ ಹರಸಾಹಸಪಟ್ಟು ಕರಿಚಿರತೆಯನ್ನು ಬೋನಿಗೆ ಬೀಳಿಸಿ, ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದರು.
ಇದನ್ನೂ ಓದಿ:ಮಂಗಳೂರು: ಆಹಾರ ಅರಸಿ ಬಂದು ಬಾವಿಗೆ ಬಿದ್ದ ಅಪರೂಪದ ಕರಿಚಿರತೆ ಸೆರೆ - Black Panther