ಹುಬ್ಬಳ್ಳಿ: ಕಾಂಗ್ರೆಸ್ ಕಾರ್ಪೊರೇಟರ್ ನಿರಂಜನಯ್ಯ ಹಿರೇಮಠ ಅವರ ಮನೆಗೆ ಮುಸ್ಲಿಂ ಮುಖಂಡರ ಭೇಟಿ ನೀಡಿ, ಸಾಂತ್ವನ ಹೇಳಿದರು. ಅಂಜುಮನ್ ಸಂಸ್ಥೆಯಲ್ಲಿ ಮೀಟಿಂಗ್ ಮಾಡಿ, ಆರೋಪಿ ಪರ ಯಾರೂ ವಕಾಲತ್ತು ವಹಿಸದಂತೆ ನಿರ್ಣಯ ಮಾಡಿದ್ದೇವೆ. ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು. ಇಂತಹ ಪ್ರಕರಣಗಳಿಗೆ ಹೊಸ ಕಾನೂನು ತರಬೇಕು. ನಾವೆಲ್ಲ ನಿಮ್ಮ ಜೊತೆ ಇರುತ್ತೇವೆ ಎಂದು ನಿರಂಜನಯ್ಯ ಹಿರೇಮಠ ಅವರಿಗೆ ಮುಖಂಡರು ಧೈರ್ಯ ತುಂಬಿದರು.
ನಗರದ ಬಿಡನಾಳದಲ್ಲಿರುವ ನಿವಾಸಕ್ಕೆ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಪಾಲಿಕೆ ಸದಸ್ಯರಾದ ನಜೀರ್ ಅಹಮ್ಮದ್ ಹೊನ್ಯಾಳ, ಆರೀಪ್ ಭದ್ರಾಪೂರ, ಇಲಿಯಾಸ್ ಮನಿಯಾರ್ ಸೇರಿ ಹಲವು ಮುಖಂಡರು ಭೇಟಿ ನೀಡಿ ಸಾಂತ್ವನ ಹೇಳಿದರು.
ನೇಹಾ ಹಿರೇಮಠ ಕೊಲೆ ಆರೋಪಿ ಫಯಾಜ್ಗೆ ಕಠಿಣ ಶಿಕ್ಷೆ ಕೊಡಬೇಕು. ಆರೋಪಿ ಯಾವುದೇ ಸಮುದಾಯದವನಿರಲಿ ಒಂದು ಜೀವ ತಗೆದುಕೊಂಡವ ಮನುಷ್ಯನೇ ಅಲ್ಲ. ನೇಹಾ ಕುಟುಂಬ ಮಾತ್ರವಲ್ಲ, ಇಡೀ ಹುಬ್ಬಳ್ಳಿ-ಧಾರವಾಡ ಜನ ದುಃಖದಲ್ಲಿದ್ದಾರೆ. ಯಾವುದೇ ಸರ್ಕಾರವಿರಲಿ, ವಿಶೇಷ ಕಾನೂನು ಮಾಡಿ ಗಲ್ಲು ಶಿಕ್ಷೆ ಕೊಡುವ ಕೆಲಸ ಆಗಬೇಕು. ಈ ಸಂಬಂಧ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಿಗೆ ಅಂಜುಮನ್ ಸಂಸ್ಥೆಯಿಂದ ಮನವಿ ಸಲ್ಲಿಸಿ ಕಠಿಣವಾದ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯ ಮಾಡಿದ್ದೇವೆ ಎಂದು ಅಂಜುಮನ್ ಸಂಸ್ಥೆಯ ಮುಖ್ಯಸ್ಥ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ ಶನಿವಾರ ಪ್ರತಿಕ್ರಿಯೆ ನೀಡಿದರು.