ಕರ್ನಾಟಕ

karnataka

ETV Bharat / state

ಚನ್ನಪಟ್ಟಣದಲ್ಲಿ NDA ಅಭ್ಯರ್ಥಿ ಗೆಲುವಿಗೆ ಯಾವುದೇ ಸಮಸ್ಯೆ ಇಲ್ಲ: ಹೆಚ್​ಡಿಕೆ ವಿಶ್ವಾಸ - HD KUMARASWAMY

ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಚನ್ನಪಟ್ಟಣದಲ್ಲಿ ತಮ್ಮ ಮಗ ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ಮಾತನಾಡಿದ್ದಾರೆ.

ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದ ಕೇಂದ್ರ ಸಚಿವ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದ ಕೇಂದ್ರ ಸಚಿವ ಕುಮಾರಸ್ವಾಮಿ (ETV Bharat)

By ETV Bharat Karnataka Team

Published : Nov 2, 2024, 2:03 PM IST

ಮೈಸೂರು:ಚಾಮುಂಡೇಶ್ವರಿ ಆರ್ಶೀವಾದದಿಂದ ಈ ಬಾರಿ ಚನ್ನಪಟ್ಟಣದಲ್ಲಿ NDA ಅಭ್ಯರ್ಥಿ ಗೆಲುವಿಗೆ ಯಾವುದೇ ಸಮಸ್ಯೆಯಿಲ್ಲವೆಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಚಾಮುಂಡಿ ಬೆಟ್ಟದಲ್ಲಿ ಹೇಳಿದರು.

ದೀಪಾವಳಿ ಹಿನ್ನೆಲೆ ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದ ಸಚಿವರು, ಮಾಧ್ಯಮಗಳ ಜತೆ ಮಾತನಾಡಿದರು. "ಚನ್ನಪಟ್ಟಣದಲ್ಲಿ ಚುನಾವಣಾ ಪ್ರಚಾರ ಬಿರುಸಿನಿಂದ ಸಾಗಿದೆ. ಚಾಮುಂಡೇಶ್ವರಿ ತಾಯಿಯ ಆರ್ಶೀವಾದದಿಂದ ಈ ಬಾರಿ ಚನ್ನಪಟ್ಟಣದಲ್ಲಿ ಎನ್​​​ಡಿಎ ಅಭ್ಯರ್ಥಿ ಗೆಲುವಿಗೆ ಯಾವುದೇ ಸಮಸ್ಯೆ ಇಲ್ಲ. ಈ ಬಾರಿಯು ಚನ್ನಪಟ್ಟಣದಲ್ಲಿ ನಿಖಿಲ್‌ ವಿರುದ್ಧ ಚಕ್ರವ್ಯೂಹ ರಚಿಸಲು ಆರಂಭದಲ್ಲಿ ಪ್ರಯತ್ನಗಳು ನಡೆದವು. ಆದರೆ, ಅದು ಸಾಧ್ಯವಾಗಲಿಲ್ಲ. ಪಕ್ಷದ ಹಿತದ ದೃಷ್ಟಿಯಿಂದ ನಿಖಿಲ್‌ ಸ್ವರ್ಧೆ ಅನಿವಾರ್ಯವಾಯಿತು" ಎಂದು ಚನ್ನಪಟ್ಟಣದಲ್ಲಿ ನಿಖಿಲ್​ ಸ್ಪರ್ಧೆಯನ್ನು ಸಮರ್ಥಿಸಿಕೊಂಡರು.

ಚನ್ನಪಟ್ಟಣದಲ್ಲಿ ಎನ್.ಡಿ.ಎ. ಅಭ್ಯರ್ಥಿ ಗೆಲ್ಲುವಿಗೆ ಯಾವುದೇ ಸಮಸ್ಯೆ ಇಲ್ಲ: ಹೆಚ್​ಡಿಕೆ (ETV Bharat)

ಶಾಸಕ ಜಿ.ಟಿ. ದೇವೇಗೌಡರಿಗೆ ಕ್ಷೇತ್ರದಲ್ಲಿ ಬಹಳ ಕೆಲಸ ಇದೆ:ದಸರಾ ಉದ್ಘಾಟನಾ ವೇದಿಕೆಯಲ್ಲಿ ಪಕ್ಷಕ್ಕೆ ಮುಜುಗರ ಆಗುವ ರೀತಿ ಮಾತನಾಡಿರುವ ಜೆಡಿಎಸ್​​ ಶಾಸಕ ಜಿ.ಟಿ. ದೇವೇಗೌಡ ಅವರನ್ನು ಚನ್ನಪಟ್ಟಣ ಚುನಾವಣೆ ಪ್ರಚಾರದ ಸ್ಟಾರ್‌ ಕ್ಯಾಂಪೇನರ್‌ ಪಟ್ಟಿಯಿಂದ ಬಿಟ್ಟಿರುವ ವಿಚಾರಕ್ಕೆ ಸಚಿವರು, "ಜಿ.ಟಿ. ದೇವೇಗೌಡರಿಗೆ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳಿವೆ. ಹೀಗಾಗಿ ಅವರು ಉಪಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದೇವೇಗೌಡರು ಸಹ ನಿಖಿಲ್‌ ಗೆಲುವಿಗೆ ಶ್ರಮಿಸುತ್ತಾರೆ" ಎಂದರು.

ಗ್ಯಾರಂಟಿ ಬಗ್ಗೆ ಕಾಂಗ್ರೆಸ್‌ ನಾಯಕರಲ್ಲಿ ಗೊಂದಲ:ಗ್ಯಾರಂಟಿ ಯೋಜನೆಗಳ ಸ್ಥಗಿತ ವಿಚಾರದಲ್ಲಿ ನಾನು ಕಾಂಗ್ರೆಸ್​ ನಾಯಕರ ಹೇಳಿಕೆಗಳನ್ನು ಗಮನಿಸಿದ್ದೇನೆ. ಗೊಂದಲದ ಹೇಳಿಕೆ ಕೊಟ್ಟಿರುವ ಬಗ್ಗೆ, ಮಲ್ಲಿಕಾರ್ಜುನ್​ ಖರ್ಗೆ ಕೂಡ ಹೇಳಿದ್ದಾರೆ. ರಾಜ್ಯದ ಜನರನ್ನು ಆರ್ಥಿಕವಾಗಿ, ದಿವಾಳಿಯಾಗಲು ನಾನು ಬಿಡುವುದಿಲ್ಲ. ಗ್ಯಾರಂಟಿ ಜತೆಗೆ ಅಭಿವೃದ್ಧಿ ಮಾಡುವುದು ಕಾಂಗ್ರೆಸ್​ನವರಿಗೆ ಬೇಕಿಲ್ಲ. ಅದಕ್ಕಾಗಿ ಗ್ಯಾರಂಟಿ ಯೋಜನೆಗಳು ಸ್ಥಗಿತವಾಗುತ್ತವೆ ಎಂಬ ಗೊಂದಲದ ಹೇಳಿಕೆಗಳನ್ನು ಕೊಡುತ್ತಿದ್ದಾರೆ" ಎಂದು ಕಾಂಗ್ರೆಸ್‌ ನಾಯಕರಿಗೆ ಹೆಚ್​ಡಿಕೆ ಟಾಂಗ್‌ ನೀಡಿದರು.

ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದ ಕೇಂದ್ರ ಸಚಿವ ಕುಮಾರಸ್ವಾಮಿ (ETV Bharat)

ಕಟುಕರಿಗೆ ಕಣ್ಣೀರು ಬರುವುದಿಲ್ಲ:ಚನ್ನಪಟ್ಟಣದಲ್ಲಿ ನಿಖಿಲ್​ ಕುಮಾರಸ್ವಾಮಿ ಕಣ್ಣೀರಿನ ಬಗ್ಗೆ ಕಾಂಗ್ರೆಸ್​ ನಾಯಕರು ಲೇವಡಿ ಮಾಡಿದ್ದಾರೆ. ನಾನು ಕೂಡ ಜನರ ಕಷ್ಟಗಳಿಗೆ ಕಣ್ಣೀರು ಹಾಕಿದ್ದೇನೆ. ಜನರ ಕಷ್ಟ ನೋಡಿದಾಗ ಕಣ್ಣೀರು ಬರುವುದು ಸಹಜ. ಆದರೆ, ಕೆಲವು ಕಟುಕ ರಾಜಕಾರಣಿಗಳಿಗೆ ಕಣ್ಣೀರು ಬರುವುದಿಲ್ಲ. ಅವರಿಗೆ ಭಯ ಭಕ್ತಿ ಇರುವುದಿಲ್ಲ. ಜನರ ಕಷ್ಟ ಅರ್ಥವಾಗುವುದಿಲ್ಲ" ಎಂದು ನಯವಾಗಿಯೇ ಕುಮಾರಸ್ವಾಮಿ ಅವರು ಕಾಂಗ್ರೆಸ್​ ನಾಯಕರ ಹೇಳಿಕೆಗೆ ತಿರುಗೇಟು ನೀಡಿದರು.

ಇದನ್ನೂ ಓದಿ:ಬಿಜೆಪಿ - ಜೆಡಿಎಸ್​ನಲ್ಲಿ ಭವಿಷ್ಯವಿಲ್ಲವೆಂದು ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್​ ಸೇರುತ್ತಿದ್ದಾರೆ: ಡಿ.ಕೆ.ಶಿವಕುಮಾರ್​

ABOUT THE AUTHOR

...view details