ಬೆಂಗಳೂರು :ಪಕ್ಷದ ಪದಾಧಿಕಾರಿಯಾಗಿಲ್ಲದೇ ಇದ್ದರೂ ಕೆಆರ್ಪಿಪಿ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿ, ಸ್ವತಃ ಶಾಸಕ ಜನಾರ್ದನ ರೆಡ್ಡಿಯೂ ಬಿಜೆಪಿ ಸೇರ್ಪಡೆಯಾಗಿರುವುದು ಪಕ್ಷಾಂತರ ನಿಷೇಧ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಜನಾರ್ದನ ರೆಡ್ಡಿ ಅವರನ್ನು ಶಾಸಕತ್ವದಿಂದ ಅನರ್ಹಗೊಳಿಸಬೇಕು ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಅವರು ಒತ್ತಾಯಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜನಾರ್ದನ ರೆಡ್ಡಿ 1999ರಲ್ಲಿ ಸುಷ್ಮಾ ಸ್ವರಾಜ್ ಅವರ ಮೂಲಕ ಬಿಜೆಪಿ ಸೇರ್ಪಡೆಯಾಗಿ, ನಂತರ ಅನೇಕ ಅಕ್ರಮ ಎಸಗಿದ್ದರು. ಲೋಕಾಯುಕ್ತ ವರದಿ ಮೇರೆಗೆ ಅವರು ಜೈಲು ಸೇರಿದ್ದರು. 2011ರಲ್ಲಿ ಸಿಬಿಐ ಇವರನ್ನು ಬಂಧಿಸಿ ಜೈಲಿಗೆ ಹಾಕಿತ್ತು . ಇದಕ್ಕಿಂತ ಪ್ರಮುಖವಾಗಿ ಸುಪ್ರೀಂಕೋರ್ಟ್ ಇವರಿಗೆ ಬಳ್ಳಾರಿ ಪ್ರವೇಶಿಸದಂತೆ ನಿರ್ದೇಶನ ನೀಡಿತ್ತು. ಇಂತಹ ಆರೋಪ ಹೊತ್ತಿರುವ ಜನಾರ್ದನ ರೆಡ್ಡಿ ಅವರು 25ರಂದು ಬಿಜೆಪಿ ಸೇರಿ ತಮ್ಮ ಪಕ್ಷವನ್ನು ಬಿಜೆಪಿ ಜತೆ ವಿಲೀನ ಮಾಡಿರುವುದಾಗಿ ಹೇಳಿದ್ದಾರೆ ಎಂದರು.
ಒಂದು ಪಕ್ಷ ಮತ್ತೊಂದು ಪಕ್ಷದ ಜತೆ ವಿಲೀನವಾಗಲು ಅದರದೇ ಆದ ಪ್ರಕ್ರಿಯೆಗಳಿವೆ. ಚುನಾವಣಾ ಆಯೋಗಕ್ಕೆ ಕೊಟ್ಟಿರುವ ಮಾಹಿತಿ ಪ್ರಕಾರ, ಜನಾರ್ದನ ರೆಡ್ಡಿ ಅವರು ಕರ್ನಾಟಕ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಪದಾಧಿಕಾರಿಯಲ್ಲ. ಇದು ನೊಂದಾಯಿತ ರಾಜಕೀಯ ಪಕ್ಷ. ಇದರ ರಾಷ್ಟ್ರೀಯ ಅಧ್ಯಕ್ಷರು ಜೆ. ರಾಮಣ್ಣ. ಇದರಲ್ಲಿ ಅನೇಕ ಪದಾಧಿಕಾರಿಗಳಿದ್ದಾರೆ ಎಂದು ತಿಳಿಸಿದರು.
ಆದರೆ, ಇವರು ಏಕಾಏಕಿ ಬಿಜೆಪಿಗೆ ಸೇರಿ ಬೇರೆ ಪಕ್ಷವನ್ನು ಬಿಜೆಪಿ ಜತೆ ವಿಲೀನ ಮಾಡಿರುವುದಾಗಿ ಹೇಳಿರುವುದು ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘನೆಯಾಗಿದೆ. ಬಿಜೆಪಿ ಪಕ್ಷ ಸೇರಿ ತಮ್ಮ ಪಕ್ಷದ ಸದಸ್ಯತ್ವ ತ್ಯಜಿಸಿರುವ ಕಾರಣ, ಜನಾರ್ದನ ರೆಡ್ಡಿ ಅವರ ಮೇಲೆ ಸ್ಪೀಕರ್ ಅವರು ಸಂವಿಧಾನದ 10ನೇ ಶೆಡ್ಯೂಲ್ ಅನ್ವಯ ರೆಡ್ಡಿ ಅವರ ಸದಸ್ಯತ್ವವನ್ನು ಅಸಿಂಧುಗೊಳಿಸಿ ಶೋಕಾಸ್ ನೊಟೀಸ್ ಜಾರಿ ಮಾಡಬೇಕು ಎಂದು ಸ್ಪೀಕರ್ ಅವರಿಗೆ ದೂರು ಸಲ್ಲಿಸಿದ್ದೇವೆ ಎಂದರು.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷ 30-03-2023 ರಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಡಿಟ್ ವರದಿ ಪ್ರಕಾರ, ಆ ಪಕ್ಷದಲ್ಲಿರುವ ಮೊತ್ತ 1320 ರೂ. ಮಾತ್ರ. ಗಣಿ ಖ್ಯಾತಿ ಜನಾರ್ದನ ರೆಡ್ಡಿ ಅವರು ಬೇನಾಮಿ ಹೆಸರಲ್ಲಿ ಪಕ್ಷ ಹುಟ್ಟು ಹಾಕಿ, ಈಗ ಬಿಜೆಪಿ ಜತೆ ಪಕ್ಷವನ್ನು ವಿಲೀನಗೊಳಿಸಿದ್ದಾರೆ. ಈ ವಿಚಾರದಲ್ಲೂ ರೆಡ್ಡಿ ಅವರು ಬೇನಾಮಿ ವ್ಯವಹಾರ ನಡೆಸಿರುವುದು ಸ್ಪಷ್ಟವಾಗಿದೆ.