ಕರ್ನಾಟಕ

karnataka

ETV Bharat / state

ಲೋಕಸಭಾ ಚುನಾವಣೆ: ರಾಜ್ಯದ 6 ಸಚಿವರ ಮಕ್ಕಳಲ್ಲಿ ಮೂವರಿಗೆ ಸಿಹಿ, ಮೂವರಿಗೆ ಕಹಿ - Children Of Ministers

ಲೋಕಸಭೆ ಚುನಾವಣೆಗೆ ರಾಜ್ಯದ 6 ಸಚಿವರ ಮಕ್ಕಳು ಸ್ಪರ್ಧಿಸಿದ್ದು, ಇವರ ಪೈಕಿ ಸಚಿವ ಹೆಚ್​ ಸಿ ಮಹದೇವಪ್ಪ ಪುತ್ರ ಸುನಿಲ್​ ಬೋಸ್​, ಸಚಿವ ಸತೀಶ್​ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಗೆಲುವು ಸಾಧಿಸಿದ್ದಾರೆ. ಬೀದರ್​ನಲ್ಲಿ ಸಚಿವ ಈಶ್ವರ್​ ಖಂಡ್ರೆ ಪುತ್ರ ಸಾಗರ್​ ಖಂಡ್ರೆ ಗೆಲುವಿನ ನಗೆ ಬೀರಿದ್ದಾರೆ.

Children Of Ministers
ಸಂಗ್ರಹ ಚಿತ್ರ (MINISTERS CHILDREN IN LOK SABHA ELECTION)

By ETV Bharat Karnataka Team

Published : Jun 4, 2024, 10:42 AM IST

Updated : Jun 4, 2024, 4:16 PM IST

ಬೆಂಗಳೂರು​: ಈ ಬಾರಿಯ ಲೋಕಸಭಾ ಚುನಾವಣೆಯು ಆರು ಸಚಿವರ ಮಕ್ಕಳು ಅಭ್ಯರ್ಥಿಗಳಾಗಿ ಅಖಾಡಕ್ಕಿಳಿದಿದ್ದರಿಂದ ಕುತೂಹಲ ಮೂಡಿಸಿದೆ. ಸೋಲು-ಗೆಲುವು, ರಾಜಕೀಯ ಭವಿಷ್ಯ ಇವತ್ತಿನ ಫಲಿತಾಂಶದ ಮೂಲಕ ನಿರ್ಧಾರವಾಗಲಿದೆ.

ಚಿಕ್ಕೋಡಿ ಕ್ಷೇತ್ರ; ರಾಜ್ಯ ರಾಜಕಾರಣದಲ್ಲಿ ಬೆಳಗಾವಿ ರಾಜಕಾರಣವೇ ಒಂದು ಪವರ್ ಸೆಂಟರ್ ಇದ್ದಂತೆ. ಬೆಳಗಾವಿಯಿಂದಲೇ ಸರ್ಕಾರ ಉರುಳಿಸುವುದು ಬೆಳಗಾವಿಯಿಂದಲೇ ಸರ್ಕಾರ ರಚಿಸುವುದರ ಮಟ್ಟಿಗೆ ಜಿಲ್ಲೆಯ ರಾಜಕಾರಣಿಗಳು ಮತ್ತು ಅವರ ರಾಜಕೀಯ ವರ್ಚಸ್ಸು ಇದೆ. ಈ ಚುನಾವಣೆಯಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಪ್ರತಿಷ್ಠಿತ ಎರಡು ಮನೆತನಗಳ ನಡುವೆ ರಾಜಕೀಯ ಜಿದ್ದಾಜಿದ್ದಿ ಪ್ರಾರಂಭವಾಗಿತ್ತು. ಅಂತಿಮವಾಗಿ ಕಾಂಗ್ರೆಸ್​ನ ಪ್ರಿಯಾಂಕಾ ಜಾರಕಿಹೊಳಿ ಗೆಲುವು ಸಾಧಿಸಿದ್ದಾರೆ. ಜಯ ಗಳಿಸುವ ಉತ್ಸಾಹದಲ್ಲಿದ್ದ ಬಿಜೆಪಿ ಭಾರೀ ಸೋಲು ಅನುಭವಿಸಿದೆ. ಅಣ್ಣಾಸಾಹೆಬ್​ ಜೊಲ್ಲೆ ಹೀನಾಯ ಸೋಲು ಕಂಡಿದ್ದಾರೆ.

ಜಾರಕಿಹೊಳಿ ಕುಟುಂಬದ ಕುಡಿ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್​ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಇದೇ ಮೊದಲ ಬಾರಿಗೆ ಲೋಕಸಭೆ ಅಖಾಡಕ್ಕೆ ಧುಮುಕಿದ್ದರು. ಈ ಚುನಾವಣೆಯನ್ನು ಜಾರಕಿಹೊಳಿ ಕುಟುಂಬ ಪ್ರತಿಷ್ಠೆಯಾಗಿ ಪರಿಗಣಿಸಿತ್ತು. ಪ್ರಿಯಾಂಕಾ ಜಾರಕಿಹೊಳಿ ಚಿಕ್ಕೋಡಿ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಬೆಳಗಾವಿ ಕ್ಷೇತ್ರ: ಮತ್ತೊಂದೆಡೆ ಬೆಳಗಾವಿ ಕ್ಷೇತ್ರದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಪುತ್ರ ಮೃಣಾಲ್​ ಹೆಬ್ಬಾಳ್ಕರ್​ ಸೋಲನುಭವಿಸಿದ್ದಾರೆ. ಬಿಜೆಪಿಯಿಂದ ಕಣದಲ್ಲಿದ್ದ ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಗೆದ್ದು ಬೀಗಿದ್ದಾರೆ. ಪುತ್ರ ಮೃಣಾಲ್ ಸೋಲಿನಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ಗೆ ತೀವ್ರ ಮುಖಭಂಗವಾಗಿದೆ​.

ಚಾಮರಾಜನಗರ ಕ್ಷೇತ್ರದಲ್ಲಿ ಬಿಜೆಪಿಗೆ ಆಘಾತ;ಮತ್ತೊಂದೆಡೆ ಜಿದ್ದಾಜಿದ್ದಿಯಿಂದ ಗಮನ ಸೆಳೆದಿದ್ದ ಚಾಮರಾಜನಗರ ಕ್ಷೇತ್ರದಲ್ಲಿ ಸಚಿವ ಹೆಚ್​ ಸಿ ಮಹದೇವಪ್ಪ ಅವರ ಪುತ್ರ ಸುನಿಲ್​ ಬೋಸ್ ಸಾಧಿಸಿದ್ದಾರೆ. ಮತ ಎಣಿಕೆಯ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಸುನಿಲ್​ ಬೋಸ್​ ಗೆದ್ದು ಬೀಗಿದ್ದಾರೆ. ಎಸ್​ಸಿ ಮೀಸಲು ಕ್ಷೇತ್ರವಾದ ಇಲ್ಲಿ ಬಿಜೆಪಿಯ ಅಭ್ಯರ್ಥಿ ಬಾಲರಾಜ್​ ಸೋಲನುಭವಿಸಿದ್ದಾರೆ.

ಬೆಂಗಳೂರು ದಕ್ಷಿಣ ಕ್ಷೇತ್ರ; ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ, ಮಾಜಿ ಶಾಸಕಿ ಸೌಮ್ಯರೆಡ್ಡಿ ಸ್ಪರ್ಧಿಸಿದ್ದು, ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರಿಗೆ ಸವಾಲು ಹಾಕಿದ್ದಾರೆ. ಸೂರ್ಯ ಮತ್ತೊಂದು ಭಾರಿ ಅದೃಷ್ಟ ಪರೀಕ್ಷೆಗಿಳಿದಿದ್ದು, ಫಲಿತಾಂಶದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಬೀದರ್​ ಕ್ಷೇತ್ರ; ಬೀದರ್ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಭರ್ಜರಿ ಗೆಲುವು ಸಾಧಿಸಿದ್ದಾರೆ. ಮೊದಲ ಸ್ಪರ್ಧೆಯಲ್ಲೇ 1,29,396 ಮತಗಳ ಅಂತರದಿಂದ ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಸೋಲಿನ ರುಚಿ ತೋರಿಸಿದ್ದಾರೆ.

ಕೇಂದ್ರ ಸಚಿವ ಭಗವಂತ ಖೂಬಾ ಭಾರಿ ಮುಖಭಂಗ ಅನುಭವಿಸಿದ್ದಾರೆ. ಕಳೆದ ಬಾರಿ ಕೂಬಾಗೆ ಎದುರಾಳಿಯಾಗಿದ್ದ ಈಶ್ವರ್​ ಖಂಡ್ರೆ ಸೋಲು ಕಂಡಿದ್ದರು. ಈ ಬಾರಿ ಅವರ ಮಗ ಸಾಗರ್​ ಖಂಡ್ರೆ ಸೇಡು ತೀರಿಸಿಕೊಂಡಿದ್ದಾರೆ.

ಹೀಗಿದೆ ಫಲಿತಾಂಶ;

  • ಕಾಂಗ್ರೆಸ್ ಸಾಗರ ಖಂಡ್ರೆ ಪಡೆದ ಮತಗಳು- 6,65,162
  • ಬಿಜೆಪಿ ಅಭ್ಯರ್ಥಿ ಭಗವಂತ್ ಖೂಬಾ ಪಡೆದ ಮತಗಳು- 5,35,766
  • ಗೆಲುವಿನ ಅಂತರ- 1,29,396

ಯುವ ಅಭ್ಯರ್ಥಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ 26ರ ವಯಸ್ಸಿನ ಸಾಗರ್​ ಖಂಡ್ರೆ ಕೇಂದ್ರ ಸಚಿವರೊಬ್ಬರಿಗೆ ಸೋಲುಣಿಸುವ ಮೂಲಕ ದಾಖಲೆ ಬರೆದಿದ್ದಾರೆ. ​

ಬಾಗಲಕೋಟೆ ಕ್ಷೇತ್ರ; ಸಚಿವ ಶಿವಾನಂದ ಪಾಟೀಲ್​ ಅವರ ಪುತ್ರಿ ಸಂಯುಕ್ತಾ ಪಾಟೀಲ್​ ಅವರು ಬಾಗಲಕೋಟೆ ಕ್ಷೇತ್ರದಿಂದ ಅಖಾಡಕ್ಕಿಳಿದಿದ್ದರು. ಅವರು ಬಿಜೆಪಿ ಹಿರಿಯ ನಾಯಕ ಪಿಸಿ ಗದ್ದಿಗೌಡರ ವಿರುದ್ಧ ಸೋಲನುಭವಿಸಿದ್ದಾರೆ.

ಇದನ್ನೂ ಓದಿ:ಲೋಕಸಭೆ ಚುನಾವಣೆ 2024: ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಕ್ಷಣ ಕ್ಷಣದ ಅಪ್ಡೇಟ್​​ - ಕಣದಲ್ಲಿರುವ ಪ್ರಮುಖರಿವರು! - Lok Sabha election results 2024

Last Updated : Jun 4, 2024, 4:16 PM IST

ABOUT THE AUTHOR

...view details