ಮಂಗಳೂರು:ಇನ್ನು ಮುಂದೆ ದೇಶದ ಎಲ್ಲಾ ಗರ್ಭಿಣಿಯರು ಮತ್ತು ನವಜಾತ ಶಿಶುಗಳ ತಾಯಂದಿರು ಕೇಂದ್ರ ಸರಕಾರದ ಹೊಸ ಯೋಜನೆಯಂತೆ ಪ್ರತೀ ವಾರ ಕರೆಯೊಂದನ್ನು ಸ್ವೀಕರಿಸಲಿದ್ದಾರೆ. ಇದರ ಹೆಸರು ಕಿಲ್ಕಾರೀ.
ಕೇಂದ್ರ ಸರಕಾರ ನಾಲ್ಕು ತಿಂಗಳು ಮೇಲ್ಪಟ್ಟ ಗರ್ಭಿಣಿಯರು ಹಾಗೂ ಒಂದು ವರ್ಷದೊಳಗಿನ ಮಕ್ಕಳಿಗೆ ಕುಟುಂಬದ ಸದಸ್ಯರು ವಹಿಸಬೇಕಾದ ಕಾಳಜಿ, ಲಸಿಕೆ ಒದಗಿಸುವಿಕೆ ಹಾಗೂ ಇತರ ತಪಾಸಣೆ ಕೈಗೊಳ್ಳಲು ಸಹಾಯಕವಾಗುವ ದಿಸೆಯಲ್ಲಿ ದೇಶಾದ್ಯಂತ ಎಲ್ಲಾ ಭಾಷೆಗಳಲ್ಲಿ ವಿನೂತನ ಕಾರ್ಯಕ್ರಮ 'ಕಿಲ್ಕಾರೀ ಮೊಬೈಲ್ ಕರೆ' ಆರಂಭಿಸಿದೆ.
ಆರೋಗ್ಯಕರ ಅಭ್ಯಾಸಗಳನ್ನು ತಾಯಿ ಮಕ್ಕಳ ಆರೋಗ್ಯ ಕಾರ್ಯಕ್ರಮದಡಿ, ಆರ್‌ಸಿಎಚ್ ಪೋರ್ಟಲ್‌ನಲ್ಲಿ ದಾಖಲಾಗಿರುವ ಗರ್ಭಿಣಿಯರಿಗೆ ಕುಟುಂಬಗಳ ಮೊಬೈಲ್ ಫೋನ್ಗಳಿಗೆ ನೇರವಾಗಿ ಸಮಯ-ಸೂಕ್ಷ್ಮ ಆಡಿಯೊ ಮಾಹಿತಿ ತಲುಪಿಸಲು ಕಿಲ್ಕಾರೀ ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್ ತಂತ್ರಜ್ಞಾನ ಬಳಸಲಾಗಿದೆ.
ಗರ್ಭಧಾರಣೆಯಾದ ಎರಡನೇ ತ್ರೈಮಾಸಿಕದಿಂದ ಮಗುವಿಗೆ ಒಂದು ವರ್ಷದವರೆಗೆ (72 ವಾರಗಳು) ತಾಯಿ ಮತ್ತು ಮಗುವಿನ ಸಾವುಗಳು ಸಂಭವಿಸುವುದನ್ನು ತಪ್ಪಿಸಲು ನಿರ್ಣಾಯಕ ಅವಧಿಯನ್ನು ಈ ಕರೆಗಳು ಒಳಗೊಳ್ಳುತ್ತವೆ. ಕಿಲ್ಕಾರೀ ಕಾರ್ಯಕ್ರಮದಡಿ ಆರ್‌ಸಿಎಚ್ ಪೋರ್ಟಲ್‌ನಲ್ಲಿ ನೋಂದಾಯಿಸಿದ ಗರ್ಭಿಣಿ ಅಥವಾ ಕುಟುಂಬ ಸದಸ್ಯರ ಮೊಬೈಲ್ ಸಂಖ್ಯೆಗೆ ಪ್ರತೀ ವಾರ ಕರೆ ಮಾಡುವ ಮೂಲಕ ಕಾಳಜಿ ವಹಿಸಲಾಗುತ್ತದೆ. ಮೊಬೈಲ್ ಸಂಖ್ಯೆ 01244588000ರ ಮೂಲಕ ಸಂಪರ್ಕಿಸಿ ಪಾಲಕರೊಂದಿಗೆ ಮಾತನಾಡಲಾಗುವುದು. ಕುಟುಂಬದ ಸದಸ್ಯರು ತಾಯಿ ಮಗುವಿನ ಸುಸ್ಥಿರ ಆರೋಗ್ಯಕ್ಕಾಗಿ ಸಹಕರಿಸಬೇಕು. ಒಂದು ವೇಳೆ ಕರೆ ಸ್ವೀಕರಿಸಲು ಅಸಾಧ್ಯವಾದಲ್ಲಿ ಪುನಃ ಆರೋಗ್ಯ ಮಾಹಿತಿ ಪಡೆಯಲು ಇನ್‌ಬಾಕ್ಸ್ ಸಂಖ್ಯೆ 14423ಕ್ಕೆ ಕರೆ ಮಾಡಬಹುದಾಗಿದೆ.
ಈ ಕುರಿತು ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ, "ಗರ್ಭಿಣಿ ಎಂದು ತಿಳಿದ ದಿನದಿಂದಲೇ ಆರೋಗ್ಯ ಇಲಾಖೆ ಮೂಲಕ ತಾಯಿ ಕಾರ್ಡ್ ವಿತರಣೆ, ಟಿಡಿ ಚುಚ್ಚುಮದ್ದು ನೀಡುವಿಕೆ, ರಕ್ತ ಹೀನತ ತಡೆಗೆ ಕನಿಷ್ಠ 180 ಕಬ್ಬಿಣಾಂಶ ಮಾತ್ರೆಗಳ ವಿತರಣೆ, ಪ್ರತೀ ತಿಂಗಳು ವೈದ್ಯರಿಂದ ತಪಾಸಣೆ, ರಕ್ತಪರೀಕ್ಷೆ, ಹುಟ್ಟಿನಿಂದ ಒಂದು ವರ್ಷದೊಳಗಿನ ಮಕ್ಕಳಿಗೆ ನೀಡಬೇಕಾದ ಲಸಿಕೆ ಕುರಿತು ಪಾಲಕರಿಗೆ ಮನನ ಮಾಡುವ, ಮಹತ್ವಪೂರ್ಣ ಕಾರ್ಯಕ್ರಮ ಇದಾಗಿದೆ. ಜಿಲ್ಲೆಯಲ್ಲಿ ಪ್ರತೀ ತಿಂಗಳ 9 ಮತ್ತು 24 ತಾರೀಖಿನಂದು ಎಲ್ಲಾ ಗರ್ಭಿಣಿಯರ ತಪಾಸಣೆಯನ್ನು ಮಾಡಲಾಗುತ್ತಿದೆ. ಎಲ್ಲಾ ಮಾಹಿತಿಯನ್ನು ಫೋನ್ ಮೂಲಕ ಪಾಲಕರಿಗೆ ಮಾಹಿತಿ ವಿನಿಮಯ ಮಾಡಿ ಮಗುವಿನ ಆರೋಗ್ಯದ ಕಾಳಜಿ ವಹಿಸಲಾಗುವುದು" ಎಂದು ತಿಳಿಸಿದರು.