ಬೆಂಗಳೂರು:ಏಪ್ರಿಲ್ 18 ಮತ್ತು 19 ರಂದು ನಡೆಯಲಿರುವ ಸಿಇಟಿ - 24ರ ಪ್ರವೇಶ ಪತ್ರಗಳನ್ನು ಇನ್ನೂ ಡೌನ್ಲೋಡ್ ಮಾಡಿಕೊಂಡಿರದ ಅಭ್ಯರ್ಥಿಗಳಿಗೆ ಈಗಲೇ ಅದನ್ನು ಡೌನ್ಲೋಡ್ ಮಾಡಿಕೊಳ್ಳಿ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸೂಚಿಸಿದೆ.
ಸಿಇಟಿ ಪರೀಕ್ಷೆಗೆ ಅರ್ಜಿ ಹಾಕಿರುವ ಇನ್ನೂ ಸುಮಾರು 50 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಂಡಿಲ್ಲ. ಮುಂಚಿತವಾಗಿಯೇ ಡೌನ್ಲೋಡ್ ಮಾಡಿಕೊಂಡರೆ ಕೊನೆಯ ಕ್ಷಣದ ತೊಡಕುಗಳು ಹಾಗೂ ಆತಂಕಗಳಿಂದ ಮುಕ್ತವಾಗಿ ಪರೀಕ್ಷೆ ಎದುರಿಸಲು ಸಹಕಾರಿಯಾಗುತ್ತದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಬುಧವಾರ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಸಿಇಟಿ - 24 ಬರೆಯಲು ಒಟ್ಟು 3,27,384 ಅಭ್ಯರ್ಥಿಗಳು ಅರ್ಜಿ ಹಾಕಿದ್ದು, ಇದುವರೆಗೆ 2,76,495 ವಿದ್ಯಾರ್ಥಿಗಳು ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಂಡಿದ್ದಾರೆ. ಉಳಿದ 50,889 ಅಭ್ಯರ್ಥಿಗಳು ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಬೇಕಾಗಿದೆ ಎಂದು ಅವರು ವಿವರಿಸಿದ್ದಾರೆ.
ಶುಲ್ಕ ಪಾವತಿ, ಪರೀಕ್ಷೆ ಆಯ್ಕೆಗೆ ಏಪ್ರಿಲ್ 12ರ ಗಡುವು:ಸಿಇಟಿ ಪರೀಕ್ಷೆಗೆ ಆನ್ಲೈನ್ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಮನವಿ ಮೇರೆಗೆ ಶುಲ್ಕ ಪಾವತಿಸಲು ಮತ್ತು ಸಿಇಟಿ ಪರೀಕ್ಷೆಯ ಆಯ್ಕೆಗೆ ಕೆಲವು ಷರತ್ತುಗಳೊಂದಿಗೆ ಅನುಮತಿ ನೀಡಲಾಗಿದೆ ಎಂದು ಈಗಾಗಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ತಿಳಿಸಿದ್ದರು.