ಬೆಂಗಳೂರು:ಸರಿಸುಮಾರು 22 ವರ್ಷ ಸಹ ಜೀವನ ನಡೆಸಿದ ನಂತರ ಪ್ರಿಯತಮನ ವಿರುದ್ಧ ಮಹಿಳೆಯೊಬ್ಬರು ದಾಖಲಿಸಿದ್ದ ಅತ್ಯಾಚಾರ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.
ಅತ್ಯಾಚಾರ, ಜೀವ ಬೆದರಿಕೆ ಮತ್ತು ವಂಚನೆ ಸೇರಿ ಇತರ ಆರೋಪಗಳ ಸಂಬಂಧ ತನ್ನ ವಿರುದ್ಧ ಮಾಜಿ ಗೆಳತಿಯು ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದಾಖಲಿಸಿರುವ ದೂರು ರದ್ದುಪಡಿಸುವಂತೆ ಕೋರಿ ನೆಲಮಂಗಲದ ನಿವಾಸಿ ಸತೀಶ್ ಎಂಬವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿದೆ. ಆದೇಶದ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ.
ನಗರದ ಅಂದ್ರಹಳ್ಳಿಯಲ್ಲಿ ನೆಲೆಸಿರುವ ಮಹಿಳೆ ಮೊದಲಿಗೆ ಮಲ್ಲಯ್ಯ ಎಂಬವರನ್ನು ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳು ಜನಿಸಿದ್ದರು. ಮಾರಣಾಂತಿಕ ರೋಗದಿಂದ ಪತಿ ಬಳಲುತ್ತಿದ್ದ ಹಿನ್ನೆಲೆಯಲ್ಲಿ 2004ರಲ್ಲಿ ಬೆಂಗಳೂರಿಗೆ ಬಂದಿದ್ದ ಮಹಿಳೆ ಹೋಟೆಲ್ ಕೆಲಸಕ್ಕೆ ಸೇರಿದ್ದರು.
ಮಹಿಳೆಯ ಆರೋಪವೇನು?:ಇದಾದ ಬಳಿಕ ಪರಿಚಯವಾದ ಸತೀಶ್ ಜೊತೆಗೆ ಸಲುಗೆ ಬೆಳೆದಿತ್ತು. ಮಹಿಳೆಯನ್ನು ಮದುವೆಯಾಗಿ ಉತ್ತಮ ಜೀವನ ನೀಡುವುದಾಗಿ ಸತೀಶ್ ಸಹ ಭರವಸೆ ನೀಡಿದ್ದ. ಇದರಿಂದ ಸತೀಶ್ ಮನೆಯಲ್ಲಿಯೇ ಆಕೆ ವಾಸ ಮಾಡತೊಡಗಿದ್ದು, ಇಬ್ಬರ ನಡುವೆ ದೈಹಿಕ ಸಂಬಂಧ ಬೆಳೆದಿತ್ತು. ನಂತರ ಸತೀಶ್ ತನ್ನ ಹುಟ್ಟೂರಿಗೆ ಹೋಗಿ ಹಿರಿಯರು ನಿಶ್ವಯಿಸಿದ್ದ ಹುಡುಗಿಯನ್ನು ವಿವಾಹವಾಗಿದ್ದರು. ಈ ವಿಚಾರ ತಿಳಿದ ಮಹಿಳೆ ತನ್ನನ್ನು ಮದುವೆಯಾಗುವಂತೆ ಸತೀಶ್ಗೆ ಬಲವಂತ ಮಾಡಿದ್ದರು. ಅದಕ್ಕೆ ನಿರಾಕರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ಮಾಡಿದ ಆರೋಪ ಸತೀಶ್ ಮೇಲಿದೆ.
ಇದನ್ನೂ ಓದಿ:ಮುಸ್ಲಿಂ ದಂಪತಿಗೆ ವಕ್ಫ್ ಬೋರ್ಡ್ನಿಂದ ವಿವಾಹ ನೋಂದಣಿ ಪತ್ರ: ಉತ್ತರಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ಮಹಿಳೆ ಸತೀಶ್ ವಿರುದ್ಧ ಅತ್ಯಾಚಾರ, ವಂಚನೆ, ಜೀವ ಬೆದರಿಕೆ, ಉದ್ದೇಶಪೂರ್ವಕವಾಗಿ ಅವಮಾನ ಮಾಡಿರುವುದು ಸೇರಿದಂತೆ ಇನ್ನಿತರ ಆರೋಪ ಹೊರಿಸಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ್ದ ಬ್ಯಾಡರಹಳ್ಳಿ ಠಾಣಾ ಪೊಲೀಸರು, ಸತೀಶ್ ವಿರುದ್ಧ ಅಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ತನ್ನ ವಿರುದ್ಧದ ಪ್ರಕರಣ ರದ್ದು ಕೋರಿ ಸತೀಶ್ ಹೈಕೋರ್ಟ್ ಮೊರೆ ಹೋಗಿದ್ದರು.
ಇದನ್ನೂ ಓದಿ:ನಟ ದರ್ಶನ್ ಜಾಮೀನು ತೆರವಿಗೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಪೊಲೀಸರ ಸಿದ್ಧತೆ