ಬೆಳಗಾವಿ ಜಿಲ್ಲೆ ವಿಭಜನೆ ವಿಚಾರ: ಪ್ರತಿಕ್ರಿಯೆ ಬೆಳಗಾವಿ: ಬಜೆಟ್ ಮಂಡನೆಗೆ ದಿನಗಣನೆ ಶುರುವಾಗಿರುವ ನಡುವೆಯೇ ಬೆಳಗಾವಿ ಜಿಲ್ಲಾ ವಿಭಜನೆಯ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈ ಸಂಬಂಧ ಸಮಗ್ರ ವರದಿ ನೀಡುವಂತೆ ಪ್ರಾದೇಶಿಕ ಆಯುಕ್ತರಿಗೆ ಸರ್ಕಾರ ಆದೇಶ ನೀಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
15 ತಾಲೂಕುಗಳು, 18 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಬೆಳಗಾವಿ ರಾಜ್ಯದ ಅತೀ ದೊಡ್ಡ ಜಿಲ್ಲೆ. ಭೌಗೋಳಿಕವಾಗಿಯೂ ರಾಜ್ಯದಲ್ಲಿ ಎರಡನೇ ಅತಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯನ್ನು ವಿಭಜಿಸಿ ಚಿಕ್ಕೋಡಿ, ಬೈಲಹೊಂಗಲ, ಗೋಕಾಕ ಮತ್ತು ಅಥಣಿ ಜಿಲ್ಲೆ ರಚಿಸುವಂತೆ ನಿರಂತರ ಹೋರಾಟ ನಡೆಯುತ್ತಿದೆ. ಈ ಸಂಬಂಧ ಸ್ಥಳೀಯ ಜಿಲ್ಲಾ ಹೋರಾಟ ಸಮಿತಿ ಸಲ್ಲಿಸಿದ್ದ ಮನವಿಯನ್ನು ರಾಜ್ಯ ಸರ್ಕಾರ ಪುರಸ್ಕರಿಸಿದ್ದು, ನಿಗದಿತ ಸಮಯದಲ್ಲಿ ವರದಿ ಸಲ್ಲಿಸುವಂತೆ ಪ್ರಾದೇಶಿಕ ಆಯುಕ್ತ ಸಂಜಯ್ ಶೆಟ್ಟೆನ್ನವರ ಅವರಿಗೆ ಆದೇಶಿಸಲಾಗಿದೆ.
ಸದ್ಯ ಅಸ್ತಿತ್ವದಲ್ಲಿರುವ ಉಪವಿಭಾಗ, ತಾಲೂಕು-ಹೋಬಳಿ ಮಧ್ಯೆ ಇರುವ ವ್ಯಾಪ್ತಿಯ ವಿವರ, ಸಾರ್ವಜನಿಕರು ನಿತ್ಯ ಎದುರಿಸುತ್ತಿರುವ ಸಮಸ್ಯೆಗಳು, ಜನಸಂಖ್ಯೆ, ಮೂಲಸೌಕರ್ಯ ಹಾಗೂ ಭೌಗೋಳಿಕ ವಿಸ್ತೀರ್ಣ ಒಳಗೊಂಡ ಮಾಹಿತಿ ಸಂಗ್ರಹಿಸಿ ಸಮಗ್ರ ವರದಿ ನೀಡುವಂತೆ ಪ್ರಾದೇಶಿಕ ಆಯುಕ್ತರಿಗೆ ತಿಳಿಸಲಾಗಿದೆ. ಎರಡೂವರೆ ದಶಕದ ಬಳಿಕ ಸರ್ಕಾರದಿಂದ ಜಿಲ್ಲಾ ವಿಭಜನೆಗೆ ಮತ್ತೊಂದು ಪ್ರಯತ್ನ ನಡೆದಿದ್ದು, ಜೆ.ಹೆಚ್.ಪಟೇಲ್ ಬಳಿಕ ಜಿಲ್ಲೆ ವಿಭಜನೆಗೆ ಸಿದ್ದರಾಮಯ್ಯ ಸರ್ಕಾರ ಕೈ ಹಾಕಿದೆ.
1997ರಲ್ಲಿ ಜೆ.ಹೆಚ್.ಪಟೇಲ್ ಸಿಎಂ ಆಗಿದ್ದಾಗ ಬೆಳಗಾವಿ ವಿಭಜನೆಗೆ ನಿರ್ಧರಿಸಿದ್ದರು. ಬೆಳಗಾವಿ ವಿಭಜಿಸಿ ಚಿಕ್ಕೋಡಿ, ಗೋಕಾಕ ಜಿಲ್ಲೆ ಮಾಡುವ ನಿರ್ಧಾರಕ್ಕೆ ಅಂದು ಸಂಪುಟ ಸಭೆ ಅಸ್ತು ಎಂದಿತ್ತು. ಆಗ ಜಿಲ್ಲೆ ವಿಭಜನೆ ವಿರೋಧಿಸಿ ಕನ್ನಡ ಪರ ಸಂಘಟನೆಗಳಿಂದ ಒಂದು ತಿಂಗಳ ಕಾಲ ನಿರಂತರ ಹೋರಾಟ ಧರಣಿ ನಡೆದಿತ್ತು. ಅಲ್ಲದೇ ಮಾಜಿ ಮುಖ್ಯಮಂತ್ರಿಗಳಾದ ಎಸ್.ನಿಜಲಿಂಗಪ್ಪ, ರಾಮಕೃಷ್ಣ ಹೆಗಡೆ ಹಾಗೂ ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಬಲವಾಗಿ ವಿರೋಧಿಸಿದ್ದ ಪರಿಣಾಮ ಜಿಲ್ಲಾ ವಿಭಜನೆ ನಿರ್ಧಾರವನ್ನು ಅಂದಿನ ಸರ್ಕಾರ ಕೈ ಬಿಟ್ಟಿತ್ತು. ಇನ್ನು ಗಡಿ-ವಿವಾದ ಸುಪ್ರೀಂ ಕೋರ್ಟ್‌ನಲ್ಲಿರುವ ಕಾರಣಕ್ಕೆ ವಿಭಜನೆಗೆ ವಿರೋಧ ವ್ಯಕ್ತವಾಗಿದ್ದು, ವಿವಾದ ಬಗೆಹರಿಸಿದ ಬಳಿಕ ಜಿಲ್ಲೆ ವಿಭಜಿಸುವಂತೆ ಒತ್ತಾಯ ಕೇಳಿ ಬಂದಿದೆ.
ಜಿಲ್ಲೆ ವಿಭಜಿಸಿದರೆ ಲಾಭವೇನು?:ಬೆಳಗಾವಿ ಜಿಲ್ಲಾ ವಿಭಜನೆಯಿಂದ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣ ಆಗುತ್ತದೆ. ಆಡಳಿತ ವ್ಯವಸ್ಥೆಯನ್ನು ಜನರ ಮನೆ ಬಾಗಿಲಿಗೆ ತಲುಪಿಸಿ, ಸರ್ಕಾರಿ ಸೌಲಭ್ಯಗಳು ಸುಲಭವಾಗಿ ಜನರಿಗೆ ಸಿಗುವಂತಾಗುತ್ತದೆ. ಉದಾಹರಣೆಗೆ, ಅಥಣಿಯಿಂದ ಬೆಳಗಾವಿಗೆ ಬರಲು ಸುಮಾರು 250 ಕಿ.ಮೀ. ಪ್ರಯಾಣಿಸಬೇಕು. ತಮ್ಮ ಕೆಲಸಕ್ಕೆ ಇಡೀ ದಿನ ವ್ಯಯಿಸಬೇಕಾಗುತ್ತದೆ. ಹಾಗಾಗಿ, ಸಾಕಷ್ಟು ಸಮಸ್ಯೆ ಆಗುತ್ತದೆ. ಅಲ್ಲದೇ ಸೌಲಭ್ಯಗಳಿಂದಲೂ ಜನ ವಂಚಿತರಾಗುತ್ತಿದ್ದಾರೆ. ಮತ್ತೊಂದೆಡೆ ಚಿಕ್ಕೋಡಿ ಉಪ ವಿಭಾಗದ ಜನ ವ್ಯಾಪಾರ-ವಹಿವಾಟು, ಆರೋಗ್ಯ, ಉದ್ಯೋಗ ಸೇರಿ ಇನ್ನಿತರ ಕೆಲಸಗಳಿಗೆ ಮಹಾರಾಷ್ಟ್ರದ ಕೊಲ್ಲಾಪುರ, ಮಿರಜ್, ಪುಣೆ ನಗರಗಳನ್ನು ನೆಚ್ಚಿಕೊಂಡಿದ್ದಾರೆ. ಇದರಿಂದ ರಾಜ್ಯದ ಆದಾಯ ಪಕ್ಕದ ರಾಜ್ಯದ ಬೊಕ್ಕಸ ಸೇರುತ್ತದೆ. ಜಿಲ್ಲೆ ವಿಭಜನೆ ಮಾಡುವುದರ ಜೊತೆಗೆ ಗಡಿಯಲ್ಲಿ ಶಿಕ್ಷಣ, ಕೈಗಾರಿಕೆ, ಉದ್ಯೋಗ, ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಕೆಲಸ ಮಾಡಬೇಕು ಎಂಬುದು ಗಡಿಭಾಗದ ಜನರ ಆಗ್ರಹ.
ಜಿಲ್ಲೆ ವಿಭಜಿಸಿದರೆ ಹಾನಿ ಏನು?:ಭೌಗೋಳಿಕವಾಗಿ ರಾಜ್ಯದ ಎರಡನೇ ಅತೀ ದೊಡ್ಡ ಜಿಲ್ಲೆ ಬೆಳಗಾವಿಯನ್ನು ವಿಭಜನೆ ಮಾಡುವುದರಿಂದ ಮರಾಠಿ ಪ್ರಭಾವ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಗಡಿ ವಿವಾದಕ್ಕೆ ಹಿನ್ನಡೆಯಾಗುವ ಭೀತಿಯಿದೆ. ಎರಡು ದಶಕಗಳಿಂದ ಸುಪ್ರೀಂ ಕೋರ್ಟ್‌ನಲ್ಲಿ ಗಡಿ ವಿವಾದ ಪ್ರಕರಣ ಬಾಕಿಯಿದೆ. ಜಿಲ್ಲೆ ವಿಭಜನೆ ಮಾಡುವುದರಿಂದ ಮರಾಠಿ ಭಾಷಿಕರ ಸಂಖ್ಯೆ ಹೆಚ್ಚಾಗಿ ಸಂಘ ಸಂಸ್ಥೆಗಳು ಮರಾಠಿಗರ ಪಾಲಾಗುತ್ತದೆ. ಅಲ್ಲದೇ ಬೆಳಗಾವಿ ಮಹಾರಾಷ್ಟ್ರದ ಪಾಲಾದರೂ ಅಚ್ಚರಿ ಇಲ್ಲ. ಹಾಗಾಗಿ, ಗಡಿ ವಿವಾದ ಬಗೆಹರಿದ ಬಳಿಕವೇ ಜಿಲ್ಲೆ ವಿಭಜನೆ ಎಂಬ ಜೇನುಗೂಡಿಗೆ ಸರ್ಕಾರ ಕೈ ಹಾಕಲಿ ಎನ್ನುವುದು ಕನ್ನಡ ಹೋರಾಟಗಾರರ ವಾದ.
ಕನ್ನಡ ಸಂಘಟನೆಗಳ ಒಕ್ಕೂಟದ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷ ಅಶೋಕ ಚಂದರಗಿ ಮಾತನಾಡಿ, "ಮೊದಲು ಸರ್ಕಾರ ಬೆಳಗಾವಿಯನ್ನು ಎರಡನೇ ರಾಜಧಾನಿ ಎಂದು ಅಧಿಕೃತವಾಗಿ ಘೋಷಿಸಲಿ. ಸುವರ್ಣ ವಿಧಾನಸೌಧಕ್ಕೆ ಕಚೇರಿಗಳನ್ನು ಸ್ಥಳಾಂತರಿಸಲಿ. ಅಲ್ಲದೇ ಸುಪ್ರೀಂ ಕೋರ್ಟ್‌ನಲ್ಲಿ ಗಡಿ ವಿವಾದ ಸಮಸ್ಯೆ ಬಗೆಹರಿಸಿ ಆಮೇಲೆ ಜಿಲ್ಲೆ ವಿಭಜಿಸಲಿ. ಅಖಂಡ ಜಿಲ್ಲೆ ಇದ್ದಾಗಲೇ ಮಹಾರಾಷ್ಟ್ರದವರು ನಮ್ಮ ಮೇಲೆ ಸವಾರಿ ಮಾಡುತ್ತಿದ್ದಾರೆ. ಇನ್ನು ಸಣ್ಣ ಜಿಲ್ಲೆ ರಚಿಸಿದಾಗ ಅದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ, ಜಿಲ್ಲೆ ವಿಭಜನೆಯ ದುಸ್ಸಾಹಸಕ್ಕೆ ಸರ್ಕಾರ ಕೈ ಹಾಕಬಾರದು. ಅಖಂಡ ಜಿಲ್ಲೆಯಾಗಿಯೇ ಮುಂದುವರಿಯಬೇಕು" ಎಂದು ಎಚ್ಚರಿಸಿದರು.
ಇದನ್ನೂ ಓದಿ:ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನಿವಾಸದ ಎದುರು ಅನುದಾನದ ಲೆಕ್ಕ ಕೊಡುವಂತೆ ಬಿಜೆಪಿ ಕಾರ್ಯಕರ್ತರ ಮನವಿ