ಕಾರವಾರ (ಉತ್ತರ ಕನ್ನಡ):ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೀಗ ಮುರಿದು ಸುಮಾರು 18 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಕದ್ದು ಪರಾರಿಯಾಗಿರುವ ಘಟನೆ ನಗರದ ಖುರ್ಸಾವಾಡದ ವಿಜಯನಗರದಲ್ಲಿ ನಡೆದಿದೆ. ನಗರದ ಸ್ಮಿತಾ ಗೋಪಾಲ ಪಾವಸ್ಕರ್ ಎಂಬುವರ ಮನೆಯಲ್ಲಿ ಈ ಕಳ್ಳತನ ನಡೆದಿದೆ.
ಕಳೆದ ಶನಿವಾರ ಬೆಳಗ್ಗೆ 7:30 ರಿಂದ ಭಾನುವಾರ ಸಂಜೆ 7:20ರ ಅವಧಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಲಾಕ್ ಮುರಿದು ಕಳ್ಳ ಒಳ ನುಗ್ಗಿದ್ದಾನೆ. ಈ ವೇಳೆ ಮನೆಯ ಬೆಡ್‌ರೂಂ ಲಾಕರ್‌ನಲ್ಲಿದ್ದ 18.85 ಲಕ್ಷ ಮೌಲ್ಯದ 357 ಗ್ರಾಂ ಬಂಗಾರದ ಆಭರಣ, 72 ಗ್ರಾಂ ತೂಕದ ಬೆಳ್ಳಿ ಸಾಮಗ್ರಿ ಹಾಗೂ 10 ಸಾವಿರ ರೂಪಾಯಿ ನಗದು ಕದ್ದೊಯ್ದಿದ್ದಾನೆ ಎಂದು ಸ್ಮಿತಾ ಅವರು ಕಾರವಾರ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸೆಕ್ಷನ್ 331(3), 331(4), 305 ಬಿಎನ್ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ನಡೆಸಿದ್ದಾರೆ. ಕಳ್ಳತನ ನಡೆದ ಮನೆಯ ವ್ಯಾಪ್ತಿಯಲ್ಲಿ ವ್ಯಕ್ತಿಯೋರ್ವ ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ.