ಬೆಳಗಾವಿ:ಜ.22ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಆಗುತ್ತಿದೆ. ಮೂರ್ತಿಯನ್ನು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತನೆ ಮಾಡಿರುವುದು ವಿಶೇಷವಾದರೇ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಮುಹೂರ್ತ ಕೊಟ್ಟವರಲ್ಲಿ ಬೆಳಗಾವಿ ಮೂಲದವರು ಕೂಡ ಒಬ್ಬರಾಗಿರುವು ಮತ್ತೊಂದು ವಿಶೇಷ.
ಬೆಳಗಾವಿಯ ನವ ಬೃಂದಾವನ ಹಾಗೂ ವಿದ್ಯಾ ವಿಹಾರ ವಿದ್ಯಾಲಯದ ಕುಲಪತಿ ವಿಜಯೇಂದ್ರ ಶರ್ಮಾ ಅವರು ಮೂರ್ತಿ ಪ್ರತಿಷ್ಠಾಪನೆಗೆ ಮುಹೂರ್ತ ನೀಡಿದ ಪಂಡಿತರಲ್ಲಿ ಒಬ್ಬರಾಗಿದ್ದಾರೆ. ಅಗಸ್ಟ್ 5, 2020ರಂದು ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿತ್ತು ಆಗಲು ವಿಜಯೇಂದ್ರ ಶರ್ಮಾ ಅವರು ಮುಹೂರ್ತ ನೀಡಿದ್ದ ಪಂಡಿರ ಗುಂಪಿನಲ್ಲಿದ್ದರು.
ಇದಾದ ಬಳಿಕ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಕೋಶಾಧ್ಯಕ್ಷರಾದ ಸ್ವಾಮಿ ಗೋವಿಂದಗಿರಿ ಮಹಾರಾಜರು ಏಪ್ರಿಲ್ 13, 2023ರಂದು ವಿಜಯೇಂದ್ರ ಶರ್ಮಾ ಅವರನ್ನು ಸಂಪರ್ಕಿಸಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಮೂರು ಮುಹೂರ್ತ ನೀಡುವಂತೆ ಕೋರಿದ್ದರು. ಆಗ ವಿಜಯೇಂದ್ರ ಶರ್ಮಾ ಅವರು ಜ.18, 22, 25 ಹೀಗೆ ಮೂರು ಮೂಹೂರ್ತಗಳನ್ನು ಪತ್ರದ ಮುಖಾಂತರ ಗೋವಿಂದ್ ದೇವ ಗಿರಿಯವರಿಗೆ ರವಾನಿಸಿರುವುದಾಗಿ ಸ್ವತಃ ಶರ್ಮಾ ಹೇಳಿದ್ದಾರೆ.
ಆ ಮುಹೂರ್ತ ನೀಡಿದ ಬಳಿಕ ರಾಮ ಮಂದಿರ ಟ್ರಸ್ಟ್ ಕಮಿಟಿ ಸಭೆಯಲ್ಲಿ ರಾಮ ಮಂದಿರದ ಟ್ರಸ್ಟಿಗಳು, ಪಂಡಿತರು ಸೇರಿಕೊಂಡು ಜ. 22ರ ಮುಹೂರ್ತವನ್ನು ಅಂತಿಮಗೊಳಿಸಿದ್ದು, ಆ ಪ್ರಕಾರ ಬಾಲ ರಾಮನ ಮೂರ್ತಿ ಪ್ರತಿಷ್ಠಾಪನೆಗೆ ಅಯೋಧ್ಯೆ ಸರ್ವ ರೀತಿಯಲ್ಲೂ ಸನ್ನದ್ಧವಾಗಿದೆ.
ಮುಹೂರ್ತ ವಿಶೇಷತೆ:ಜ.22 ರಂದು ಮಧ್ಯಾಹ್ನ 12.28 ರಿಂದ 12.30 ನೀಮಿಷದೊಳಗೆ ಅಭಿಜಿತ್ ಮುಹೂರ್ತ, ಮೇಷ ಲಗ್ನ, ಅಮೃತಸಿದ್ಧಿಯೋಗ, ಮೃಗಶಿರ ನಕ್ಷತ್ರ, ಕುರ್ಮ ದ್ವಾದಶಿ ಯೋಗಗಳಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಆಗುತ್ತಿದ್ದು, 60 ವರ್ಷಗಳಿಗೊಮ್ಮೆ ಬರುವ ಅತ್ಯಂತ ಒಳ್ಳೆಯ ಮುಹೂರ್ತ ಇದಾಗಿದೆ.
ಈ ಬಗ್ಗೆ ಮಾತನಾಡಿದ ವಿಜಯೇಂದ್ರ ಶರ್ಮಾ ಅವರು, 550 ವರ್ಷಗಳ ನಂತರ ಅಯೋಧ್ಯೆಯಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪನೆ ಆಗುತ್ತಿದೆ. ಇದಕ್ಕೆ ಹತ್ತಾರು ಲಕ್ಷ ಜನ ಪ್ರಾಣತ್ಯಾಗ ಮಾಡಿದ್ದಾರೆ. ಮಹಾರಾಣಾ ಪ್ರತಾಪ, ಛತ್ರಪತಿ ಶಿವಾಜಿ ಮಹಾರಾಜ, ಗುರುನಾನಕರು ಸೇರಿ ಸಾಕಷ್ಟು ಜನರ ತ್ಯಾಗವಿದೆ. ಅವರೆಲ್ಲರ ಆತ್ಮಕ್ಕೆ ಶಾಂತಿ ಸಿಗಬೇಕು. ಆ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯ ಶ್ಲಾಘನೀಯ. ಇನ್ನು ಮೂರ್ತಿ ನಿರ್ಮಾಣ ಮತ್ತು ಪ್ರಾಣ ಪ್ರತಿಷ್ಠಾಪನೆ ಎರಡಕ್ಕೂ ಮುಹೂರ್ತ ನೀಡಿದ್ದು ನನ್ನ ಸೌಭಾಗ್ಯ. ಆ ಮುಹೂರ್ತದಿಂದ ಇಡೀ ಜಗತ್ತಿಗೆ ಒಳ್ಳೆಯದಾಗಲಿದೆ ಎಂದರು.
ಈ ಮುಹೂರ್ತದ ವೈಶಿಷ್ಟ್ಯೆವೆಂದರೆ 18ನೇ ತಾರೀಕಿನಂದು ಮೂರ್ತಿಯನ್ನು ಸ್ಥಾಪನೆ ಮಾಡುತ್ತಿರುವ ಸ್ಥಳದಲ್ಲಿ ಇಡಲಾಗಿದೆ. ಮೂರ್ತಿಯಲ್ಲಿ ವಿಶೇಷ ಶಕ್ತಿ ಆವರಿಸುತ್ತದೆ. ಅಲ್ಲದೇ ಜನರಿಗೆ ಒಳ್ಳೆಯದಾಗಲಿದೆ ಮತ್ತು ರಾಮ ರಾಜ್ಯವಾಗಲಿದೆ. ದೇಶದ ಸಂಸ್ಕೃತಿ ಉಳಿದರೆ ದೇಶ ಉಳಿಯಲು ಸಾಧ್ಯವಾಗುತ್ತದೆ. ಭಾರತ ದೇಶ ಉಳಿದರೆ ಮಾತ್ರ ಜಗತ್ತು ಉಳಿಯಲು ಸಾಧ್ಯವಾಗುತ್ತದೆ ಎಂದ ವಿಜಯೇಂದ್ರ ಶರ್ಮಾ ಅವರು, 22ಕ್ಕೆ ನನಗೂ ಆಹ್ವಾನಿಸಿದ್ದಾರೆ. ಆದರೆ, ಆರೋಗ್ಯ ಸಮಸ್ಯೆಯಿಂದಾಗಿ ವೈದ್ಯರ ಸಲಹೆ ಅಂತೆ ನಾನು ಅಯೋಧ್ಯೆಗೆ ಹೋಗುತ್ತಿಲ್ಲ. ರಾಮ ಮಂದಿರ ನಿರ್ಮಾಣದಿಂದ ಎಲ್ಲರಿಗೂ ಒಳ್ಳೆಯದಾಗಲಿ, ಎಂದು ಹಾರೈಸಿದರು.
ಇದನ್ನೂ ಓದಿ:ಅಯೋಧ್ಯಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ: ಶ್ರೀ ಸಿದ್ದಲಿಂಗ ಸ್ವಾಮೀಜಿ