ಬೆಂಗಳೂರು:''ದೇಶ ಒಗ್ಗೂಡಿಸುವ ಮಾತನಾಡಬೇಕು. ಅದನ್ನು ಬಿಟ್ಟು ಒಡೆಯೋ ಮಾತು ಸರಿಯಲ್ಲ'' ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಸದಾಶಿವನಗರ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಡಿ.ಕೆ ಸುರೇಶ್ ಪ್ರತ್ಯೇಕ ರಾಷ್ಟ್ರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ''ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಈ ದೇಶ ಒಗ್ಗೂಡಿಸಲು ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಜನ ಜೀವ ಕಳೆದುಕೊಂಡಿದ್ದಾರೆ. ನೂರಾರು ವರ್ಷ ಹೋರಾಟಗಳು ನಡೆದಿವೆ. ಗಾಂಧೀಜಿ ಸೇರಿ ಹಲವರು ಹೋರಾಡಿದ್ದಾರೆ. ಅನೇಕ ಹೋರಾಟಗಾರರು ಪ್ರಾಣ ಕಳೆದುಕೊಂಡಿದ್ದಾರೆ. ನಮ್ಮ ಭಾರತ ಭವ್ಯವಾದ ಭಾರತ. ಪಾಕಿಸ್ತಾನ ವಿಭಜನೆ ಆದಾಗ ನಾವು ಯಾರೂ ಹುಟ್ಟಿರಲಿಲ್ಲ. ಆದರೆ, ಅದರ ಇತಿಹಾಸ ನಮಗೆ ಗೊತ್ತಿದೆ'' ಎಂದು ತಿಳಿಸಿದರು.
ಸಿಎಂ ಮನೆಯಲ್ಲಿ ಡಿನ್ನರ್ ಪಾರ್ಟಿ ವಿಚಾರವಾಗಿ ಮಾತನಾಡಿದ ಅವರು, ''ಸಿಎಂ ಎಲ್ಲ ಸಚಿವರನ್ನ ಊಟಕ್ಕೆ ಕರೆದಿದ್ದರು. ಲೋಕಸಭೆ ಚುನಾವಣೆ ತಯಾರಿ ಬಗ್ಗೆ ಚರ್ಚಿಸಿದ್ದೇವೆ. ಅಭ್ಯರ್ಥಿ ಆಯ್ಕೆ, ಪಕ್ಷದ ಸಂಘಟನೆ ಬಗ್ಗೆ ಸಲಹೆ ನೀಡಿದ್ದಾರೆ. ಸಿಎಂ, ಅಧ್ಯಕ್ಷರು ಸೂಚನೆ ಕೊಟ್ಟಿದ್ದಾರೆ. ಹೆಚ್ಚು ಸೀಟು ಗೆಲ್ಲಬೇಕು ಅಂತ ಚರ್ಚೆ ಆಗಿದೆ. ಆಯಾ ಸಚಿವರು ಜಿಲ್ಲಾ ಉಸ್ತುವಾರಿ ತೆಗೆದುಕೊಳ್ಳಬೇಕು. ಕೆಲಸ ಮಾಡಬೇಕು ಅಂತ ಹೇಳಿದ್ದಾರೆ. ನಿನ್ನೆ ಸಭೆಯಲ್ಲಿ ಸಚಿವರ ಸ್ಪರ್ಧೆ ಬಗ್ಗೆ ಚರ್ಚೆ ಆಗಿಲ್ಲ. ಅಭ್ಯರ್ಥಿಗಳ ಆಯ್ಕೆ ಹೈಕಮಾಂಡ್ ಮಾಡುತ್ತೆ. ಈಗಾಗಲೇ ಹೈಕಮಾಂಡ್ಗೆ ಪಟ್ಟಿ ರವಾನೆ ಆಗಿದೆ. ಮುಂದಿನ ವಾರ ಅಭ್ಯರ್ಥಿ ಆಯ್ಕೆ ಆಗಬಹುದು'' ಎಂದರು.
ಮುದ್ದ ಹನುಮೇಗೌಡ ಗೆ ಟಿಕೆಟ್ ವಿಚಾರವಾಗಿ ಪ್ರತಿಕ್ರಿಯಿಸಿ, ''ಟಿಕೆಟ್ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಯಾರಿಗೆ ಟಿಕೆಟ್ ಕೊಡುತ್ತೆ ನೋಡೋಣ. ಟಿಕೆಟ್ ಕೊಟ್ಟವರ ಪರ ನಾವು ಕೆಲಸ ಮಾಡ್ತೇವೆ. ನಮ್ಮ ಅಭಿಪ್ರಾಯ ಪಕ್ಷಕ್ಕೆ ಹೇಳಿದ್ದೇವೆ. ಪಕ್ಷ ಯಾರಿಗೆ ಕೊಡುತ್ತೋ ಅವರಿಗೆ ಕೆಲಸ ಮಾಡ್ತೇವೆ'' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.