ಹುಬ್ಬಳ್ಳಿ: ಇಲ್ಲಿನ ಉಣಕಲ್‌ನ ಅಚ್ಚವ್ವ ಕಾಲೋನಿಯಲ್ಲಿ ನಡೆದಿದ್ದ ಗ್ಯಾಸ್ ಸಿಲಿಂಡರ್ ಸ್ಪೋಟ ಪ್ರಕರಣದಲ್ಲಿ ಗಾಯಗೊಂಡಿದ್ದ ಒಂಬತ್ತು ಅಯ್ಯಪ್ಪ ಮಾಲಾಧಾರಿಗಳ ಪೈಕಿ ಇಬ್ಬರು ಚಿಕಿತ್ಸೆ ಫಲಿಸದೇ ಇಂದು ಬೆಳಗಿನ ಜಾವ ಮೃತಪಟ್ಟಿದ್ದಾರೆ.
ಮೃತ ಅಯ್ಯಪ್ಪ ಮಾಲಾಧಾರಿಗಳನ್ನು ಅಜ್ಜಾಸ್ವಾಮಿ ಉರ್ಪ್ ನಿಂಗಪ್ಪ ಬೇಪಾರಿ(58), ಹಾಗೂ ಸಂಜಯ ಸವದತ್ತಿ (20) ಎಂದು ಗುರುತಿಸಲಾಗಿದೆ. ಇನ್ನುಳಿದ ಗಾಯಾಳುಗಳಾದ ರಾಜು ಹರ್ಲಾಪುರ (21), ವಿನಾಯಕ ಬಾತಕೇರ (12), ಪ್ರಕಾಶ ಬಾರಕೇರ (42), ಮಂಜು ತೋರದ (22), ಪ್ರವೀಣ ಚಲವಾದಿ (24), ತೇಜಸ್ ರೆಡ್ಡಿ (26) ಮತ್ತು ಶಂಕರ ರಾಯನಗೌಡ್ರ (29) ಇವರುಗಳ ಸ್ಥಿತಿ ಇನ್ನೂ ಗಂಭೀರವಾಗಿದೆ.
ಮಾಲಾಧಿಗಾರಿಗಳ ಜೀವ ಉಳಿಸಿಕೊಳ್ಳಲು ನಾನಾ ರೀತಿಯ ಕಸರತ್ತು ನಡೆಸಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಬೆಂಗಳೂರಿನಿಂದ ಮೂವರು ವೈದ್ಯಾಧಿಕಾರಿಗಳನ್ನು ಕರೆಸಿಕೊಂಡು ಚಿಕಿತ್ಸೆ ಕೊಡಿಸಿದ್ದರು. ಆದರೂ ಚಿಕಿತ್ಸೆ ಫಲಿಸದೇ ಇಬ್ಬರು ಮಾಲಾಧಾರಿಗಳು ಮೃತಪಟ್ಟಿದ್ದಾರೆ.
ಸಿಲಿಂಡರ್ ಸ್ಫೋಟ: ಮೃತ ಅಯ್ಯಪ್ಪ ಮಾಲಾಧಾರಿ ಸಂಜಯ ಸವದತ್ತಿ ದೇಶ ಸೇವೆ ಕನಸು ಕಟ್ಟಿಕೊಂಡಿದ್ದ. ಹುಬ್ಬಳ್ಳಿಯ ಖಾಸಗಿ ಕಾಲೇಜಿನಲ್ಲಿ ಬಿಎ ಓದುತ್ತಿದ್ದ. ಇದೇ ಮೊದಲ ಬಾರಿಗೆ ಅಯ್ಯಪ್ಪ ಸೇವೆ ಮಾಡಲು ಮಾಲೆ ಹಾಕಿಕೊಂಡಿದ್ದ. ಕಳೆದ ಮೂವತ್ತು ದಿನಗಳಿಂದ ಅಯ್ಯಪ್ಪನಿಗಾಗಿ ವೃತ ಮಾಡಿದ್ದ. ತಂದೆ-ತಾಯಿಗೆ ಓರ್ವ ಮಗನಾಗಿದ್ದ ಈತ ಕೋವಿಡ್ ಸಮಯದಲ್ಲಿ ತರಕಾರಿ ಮಾರಿ ಕುಟುಂಬ ಸಾಗಿಸಿದ್ದನು. ಸಣ್ಣ ವಯಸ್ಸಿನಲ್ಲಿ ಕುಟುಂಬದ ಜವಾಬ್ದಾರಿ ಹೊತ್ತಿದ್ದ ಎಂದು ಇದ್ದ ಒಬ್ಬ ಮಗನನ್ನು ಕಳೆದುಕೊಂಡ ಸಂಜಯ ಸವದತ್ತಿ ತಂದೆ ಪ್ರಕಾಶ್ ಕಣ್ಣೀರು ಹಾಕುತ್ತಿದ್ದಾರೆ.
ಅಯ್ಯಪ್ಪ ಮಾಲಾಧಾರಿಗಳು ರಾತ್ರಿ ಊಟ ಮುಗಿಸಿಕೊಂಡು ಸಣ್ಣ ಕೋಣೆಯಲ್ಲಿ ಮಲಗಿದ್ದಾಗ ಸಿಲಿಂಡರ್ ಸ್ಫೋಟಗೊಂಡು 9 ಜನ ಗಾಯಗೊಂಡಿದ್ದರು. ಈ ಕುರಿತಂತೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಹುಬ್ಬಳ್ಳಿ: ಸಿಲಿಂಡರ್ ಸ್ಫೋಟ, 9 ಜನ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಗಂಭೀರ ಗಾಯ