ಕರ್ನಾಟಕ

karnataka

ETV Bharat / state

ಮೂಲಭೂತ ಅಭಿವೃದ್ಧಿ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಈವರೆಗೆ ಮಾಡಿದ ಖರ್ಚು 38%! - GOVT DEVELOPMENT EXPENDITURE

ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿವೆ ಎಂಬ ಅಸಮಾಧಾನದ ಮಧ್ಯೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​​ ಸರ್ಕಾರ ಈವರೆಗೆ ಬಂಡವಾಳ ವೆಚ್ಚದ ರೂಪದಲ್ಲಿ ಮಾಡಿದ ಖರ್ಚು-ವೆಚ್ಚದ ಪ್ರಗತಿಯ ವರದಿ.

Vidhana Soudha
ವಿಧಾನಸೌಧ (IANS)

By ETV Bharat Karnataka Team

Published : Jan 3, 2025, 11:28 AM IST

Updated : Jan 3, 2025, 11:51 AM IST

ಬೆಂಗಳೂರು:ರಾಜ್ಯ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಕೇಂದ್ರಿತ ಆಡಳಿತ ನಡೆಸುತ್ತಿದೆ. ಈ ಗ್ಯಾರಂಟಿಗಳಿಗೆ ಬಹುಪಾಲು ಸಂಪನ್ಮೂಲ ವ್ಯಯಿಸಲಾಗುತ್ತಿದೆ. ಈ ಮಧ್ಯೆ ರಾಜ್ಯದ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳಿಗೆ ಅತ್ಯಲ್ಪ ಖರ್ಚು ಮಾಡುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.‌

ಗ್ಯಾರಂಟಿಗಳಿಗೆ ರಾಜಸ್ವ ಆದಾಯವನ್ನು ಹೊಂದಿಸಿ ಅನುಷ್ಠಾನ ಮಾಡಲಾಗುತ್ತಿದ್ದು, ಆದಾಯದ ಬಹುಪಾಲು ಹಣ ಇದಕ್ಕೇ ನೀಡಲಾಗುತ್ತಿದೆ. ಆ ಮೂಲಕ ವೇತನ, ಪಿಂಚಣಿ ಸೇರಿದಂತೆ ಬದ್ಧ ವೆಚ್ಚಕ್ಕೆ ಅತಿ ಹೆಚ್ಚು ಹಣವನ್ನು ಬಳಕೆ ಮಾಡಲಾಗುತ್ತಿದೆ. 2023ರಿಂದ ಅಧಿಕಾರ ಚುಕ್ಕಾಣಿ ಹಿಡಿದಾಗಿನಿಂದ ಈವರೆಗೆ ಪಂಚ ಗ್ಯಾರಂಟಿಗಳಿಗಾಗಿ ಸುಮಾರು 63,400 ಕೋಟಿ ರೂ‌. ಹಣ ಖರ್ಚು ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಸದನದಲ್ಲೇ ಮಾಹಿತಿ ನೀಡಿದ್ದರು.‌

ಪ್ರಸಕ್ತ ಆರ್ಥಿಕ ವರ್ಷದ ಬಜೆಟ್​ನಲ್ಲಿ ಪಂಚ ಗ್ಯಾರಂಟಿಗಳಿಗಾಗಿ ಸುಮಾರು 52,000 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ. ಈ ಪೈಕಿ ಈವರೆಗೆ ಸುಮಾರು 30,000 ಕೋಟಿ ಗೂ. ಅಧಿಕ ಹಣ ವ್ಯಯಿಸಲಾಗಿದೆ. 2024-25 ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕ ಪ್ರಗತಿಯಲ್ಲಿದೆ. ರಾಜ್ಯ ಸರ್ಕಾರ ಪಂಚ ಗ್ಯಾರಂಟಿಕೇಂದ್ರಿತ ಆಡಳಿತದ ಹೊರೆಯ ಮಧ್ಯೆ ಅಭಿವೃದ್ಧಿ ಕಾರ್ಯಗಳನ್ನು ಮರೆತಿದೆ ಎಂಬುದು ವಿಪಕ್ಷಗಳ ಆರೋಪ.‌ ಅಷ್ಟಕ್ಕೂ ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಹೊರೆ ಮಧ್ಯೆ ಈವರೆಗೆ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳಿಗೆ ಮಾಡಿದ ಖರ್ಚು ವೆಚ್ಚದ ವಿವರ ಹೀಗಿದೆ.

21,493 ಕೋಟಿ ರೂ‌. ಅಭಿವೃದ್ಧಿಗೆ ಖರ್ಚು:ಅಭಿವೃದ್ಧಿ ಕಾಮಗಾರಿಗಳಿಗಾಗಿನ ಬಂಡವಾಳ ವೆಚ್ಚಕ್ಕೆ ಬಜೆಟ್​ನಲ್ಲಿ ಅನುದಾನ ಮೀಸಲಿಡಲಾಗುತ್ತದೆ. 2024-25 ಸಾಲಿನಲ್ಲಿ ಅಭಿವೃದ್ಧಿಗಾಗಿ ಬಂಡವಾಳ ವೆಚ್ಚಕ್ಕಾಗಿ 55,877 ಕೋಟಿ ರೂ.‌ ಅನುದಾನ ಹಂಚಿಕೆ ಮಾಡಲಾಗಿದೆ.‌ ರಾಜ್ಯ ಸರ್ಕಾರ ನವೆಂಬರ್‌ವರೆಗೆ ಮೂಲಸೌಕರ್ಯ ಅಭಿವೃದ್ಧಿ ಸೇರಿ ಅಭಿವೃದ್ಧಿ ಕಾರ್ಯಗಳಿಗೆ ಒಟ್ಟು 21,493 ಕೋಟಿ ರೂ. ಖರ್ಚು ಮಾಡಿದೆ ಎಂದು ಆರ್ಥಿಕ ಇಲಾಖೆ ಅಂಕಿಅಂಶ ನೀಡಿದೆ.‌ ಅಂದರೆ ಒಟ್ಟು ಹಂಚಲಾದ ಬಂಡವಾಳ ವೆಚ್ಚದ ಅನುದಾನದ ಪೈಕಿ ನವೆಂಬರ್‌ವರೆಗೆ ಸುಮಾರು 38%ದಷ್ಟು ಹಣ ಖರ್ಚು ಮಾಡಿರುವುದಾಗಿ ಆರ್ಥಿಕ ಇಲಾಖೆ ಮಾಹಿತಿ ನೀಡಿದೆ.

ಆರ್ಥಿಕ ವರ್ಷದ ಎಂಟು ತಿಂಗಳ ಬಳಿಕ ಕಾಂಗ್ರೆಸ್ ಸರ್ಕಾರ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಬಂಡವಾಳ ವೆಚ್ಚದ ರೂಪದಲ್ಲಿ ಕೇವಲ 38% ಮಾತ್ರ ಖರ್ಚು ಮಾಡಿದೆ. ಕಳೆದ ಬಜೆಟ್ ವರ್ಷದಲ್ಲಿ ಇದೇ ಅವಧಿಗೆ ಸುಮಾರು 37% ಅನುದಾನ ಖರ್ಚು ಮಾಡಲಾಗಿತ್ತು. ಕಳೆದ 2023-24ರಲ್ಲಿ ಬಂಡವಾಳ ವೆಚ್ಚವಾಗಿ 54,373 ಕೋಟಿ ರೂ. ಅನುದಾನ ಹಂಚಲಾಗಿತ್ತು. ಆ ಪೈಕಿ ನವೆಂಬರ್ ವರೆಗೆ 20,313 ಕೋಟಿ ರೂ. ಅನುದಾನ ವ್ಯಯಿಸಲಾಗಿತ್ತು. ಅಂದರೆ ಕಳೆದ ಬಾರಿಗೆ ಹೋಲಿಸಿದರೆ ಈ ಆರ್ಥಿಕ ವರ್ಷದಲ್ಲಿ ಕೇವಲ 6% ಮಾತ್ರ ವೃದ್ಧಿ ಕಂಡಿದೆ.

ಸ್ವಂತ ರಾಜಸ್ವ ಆದಾಯದ ಬಹುಪಾಲು ಸಂಪನ್ಮೂಲ ಪಂಚ ಗ್ಯಾರಂಟಿ ಹಾಗೂ ಬದ್ಧ ವೆಚ್ಚಕ್ಕೆ ಬಳಕೆ ಮಾಡಲಾಗುತ್ತಿದೆ. ಹೀಗಾಗಿ ಬಂಡವಾಳ ವೆಚ್ಚಕ್ಕೆ ರಾಜ್ಯ ಸರ್ಕಾರ ನೆಚ್ಚಿಕೊಂಡಿರುವುದು ಸಾಲ. ಬಹುವಾಗಿ ಸಾಲದ ಮೊತ್ತವನ್ನೇ ಬಂಡವಾಳ ವೆಚ್ಚಕ್ಕಾಗಿ ಬಳಸಲಾಗುತ್ತಿದೆ ಎಂದು ಆರ್ಥಿಕ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನವೆಂಬರ್‌ವರೆಗೆ ಒಟ್ಟು 1,63,232 ಕೋಟಿ ಆದಾಯ ಸಂಗ್ರಹವಾಗಿದೆ. ಆದರೆ, ಇತ್ತ ಪಂಚ ಗ್ಯಾರಂಟಿ, ಬದ್ಧ ವೆಚ್ಚಗಳು ಸೇರಿ ಒಟ್ಟು 1,64,953 ಕೋಟಿ ರೂ.‌ ರಾಜಸ್ವ ವೆಚ್ಚವಾಗಿದೆ. ಹೀಗಾಗಿ ಬಂಡವಾಳ ವೆಚ್ಚ ಮಾಡಲು ಸಾಲದ ಮೊತ್ತವನ್ನೇ ನೆಚ್ಚಿಕೊಂಡಿದೆ.

ಆರ್ಥಿಕ ಇಲಾಖೆಯ ಅಂಕಿಅಂಶ (ETV Bharat)

ಯಾವ ತಿಂಗಳು, ಎಷ್ಟು ಬಂಡವಾಳ ವೆಚ್ಚ?:ರಾಜ್ಯ ಸರ್ಕಾರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದ ಮೊದಲ ತಿಂಗಳು ಏಪ್ರಿಲ್​ನಲ್ಲಿ 2,027 ಕೋಟಿ ರೂ. ಬಂಡವಾಳ ವೆಚ್ಚದ ರೂಪದಲ್ಲಿ ಖರ್ಚು ಮಾಡಿತ್ತು‌. ಮೇ ತಿಂಗಳಲ್ಲಿ 585 ಕೋಟಿ ರೂ. ಮಾತ್ರ ಬಂಡವಾಳ ವೆಚ್ಚದ ರೂಪದಲ್ಲಿ ಖರ್ಚು ಮಾಡಿದೆ. ಜೂನ್ ತಿಂಗಳಲ್ಲಿ 1,993 ಕೋಟಿ ರೂ. ಬಂಡವಾಳ ವೆಚ್ಚ ಮಾಡಿದೆ. ಆ ಮೂಲಕ ಮೊದಲ ತ್ರೈಮಾಸಿಕದಲ್ಲಿ ರಾಜ್ಯ ಸರ್ಕಾರ ಬಂಡವಾಳ ವೆಚ್ಚವಾಗಿ ಕೇವಲ 4,605 ಕೋಟಿ ರೂ. ಖರ್ಚು ಮಾಡಿದೆ ಎಂದು ಆರ್ಥಿಕ ಇಲಾಖೆ ಅಂಕಿಅಂಶ ನೀಡಿದೆ.

ಎರಡನೇ ತ್ರೈಮಾಸಿಕದ ಜುಲೈ ತಿಂಗಳಲ್ಲಿ 3,413 ಕೋಟಿ ರೂ. ಬಂಡವಾಳ ವೆಚ್ಚ ಮಾಡಲಾಗಿದೆ.‌ ಆಗಸ್ಟ್ ತಿಂಗಳಲ್ಲಿ 2,185 ಕೋಟಿ ರೂ. ವ್ಯಯಿಸಲಾಗಿದೆ. ಸೆಪ್ಟೆಂಬರ್​ನಲ್ಲಿ ಬಂಡವಾಳ ವೆಚ್ಚವಾಗಿ 2,999 ಕೋಟಿ ರೂ. ವ್ಯಯಿಸಲಾಗಿದೆ. ಆ ಮೂಲಕ ಎರಡನೇ ತ್ರೈಮಾಸಿಕದಲ್ಲಿ 8,597 ಕೋಟಿ ರೂ‌. ಬಂಡವಾಳ ವೆಚ್ಚದ ಅನುದಾನ ಖರ್ಚು ಮಾಡಿದೆ.

ಅದೇ ರೀತಿ, ಮೂರನೇ ತ್ರೈಮಾಸಿಕದ ಅಕ್ಟೋಬರ್​ನಲ್ಲಿ ರಾಜ್ಯ ಸರ್ಕಾರ 3,316 ಕೋಟಿ ರೂ‌. ಬಂಡವಾಳ ವೆಚ್ಚ ಮಾಡಿದೆ. ನವೆಂಬರ್ ತಿಂಗಳಲ್ಲಿ 4,974 ಕೋಟಿ ರೂ. ಬಂಡವಾಳ ವೆಚ್ಚವಾಗಿ ವ್ಯಯಿಸಲಾಗಿದೆ ಎಂದು ಆರ್ಥಿಕ ಇಲಾಖೆ ಅಂಕಿಅಂಶ ಮಾಹಿತಿ ನೀಡಿದೆ.

ತ್ರೈಮಾಸಿಕವಾರು ಬಂಡವಾಳ ವೆಚ್ಚದ ಪ್ರಗತಿ ಏರಿಕೆಯಾಗಿದ್ದರೂ, ಸೀಮಿತ ಸಂಪನ್ಮೂಲದ ಹಿನ್ನೆಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಬಂಡವಾಳ ವೆಚ್ಚ ಮಾಡುವುದು ಕಷ್ಟವಾಗುತ್ತಿದೆ.

Last Updated : Jan 3, 2025, 11:51 AM IST

ABOUT THE AUTHOR

...view details