ಕರ್ನಾಟಕ

karnataka

ETV Bharat / state

ಕಾನೂನಿನಲ್ಲಿ ಬಂಧಿಸಲು ಅವಕಾಶ ಇದ್ದರೆ ಮಾಡ್ತಾರೆ, ಇದಕ್ಕೆ ನೂರು ಜನರ ಅವಶ್ಯಕತೆ ಇಲ್ಲ; ಪರಮೇಶ್ವರ್ - HDK ARREST ISSUE - HDK ARREST ISSUE

ನನ್ನನ್ನು ಬಂಧಿಸುವುದಕ್ಕೆ ನೂರು ಸಿದ್ದರಾಮಯ್ಯ ಬರಬೇಕು ಎಂದಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಗೆ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಈ ರೀತಿಯಾಗಿ ಟಾಂಗ್ ಕೊಟ್ಟಿದ್ದಾರೆ.

PARAMESHWAR REACT ON HDK STATEMENT
ಗೃಹ ಸಚಿವ ಡಾ.ಜಿ.ಪರಮೇಶ್ವರ್ (ETV Bharat)

By ETV Bharat Karnataka Team

Published : Aug 22, 2024, 1:11 PM IST

Updated : Aug 22, 2024, 1:29 PM IST

ಗೃಹ ಸಚಿವ ಡಾ. ಜಿ.ಪರಮೇಶ್ವರ್ (ETV Bharat)

ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ನಾನು ಕಮೆಂಟ್ ಮಾಡುವುದಿಲ್ಲ. ಆದರೆ, ಕಾನೂನಿನಲ್ಲಿ ಬಂಧಿಸಲು ಅವಕಾಶ ಇದ್ದರೆ ಮಾಡ್ತಾರೆ. ಇದಕ್ಕೆ ನೂರು ಜನರ ಅವಶ್ಯಕತೆ ಇಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಮಾರ್ಮಿಕವಾಗಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಲ್ಲದಕ್ಕೂ ಕಾನೂನಿದೆ. ಕಾನೂನಿನ ಅಡಿಯಲ್ಲಿ ತನಿಖೆ ನಡೆಯಲಿದೆ ಎಂದರು.

ಕುಮಾರಸ್ವಾಮಿ ಅವರು ಕಾನೂನು ಹೋರಾಟ ಮಾಡೋದಕ್ಕೆ ಯಾವುದೇ ತಡೆ ಇಲ್ಲ. ಆರೋಪ ಬಂದಾಗ ಸರ್ಕಾರಿ ತನಿಖಾ ಸಂಸ್ಥೆಗಳು ತನಿಖೆ ಮಾಡಿ ಈ ರೀತಿ ಇದೆ ಅಂತ ಹೇಳಬಹುದು. ಡಾಕ್ಯುಮೆಂಟ್​ನ ಆಧಾರದ ಮೇಲೆ ಸರ್ಕಾರ ಒಂದು ನಿರ್ಧಾರಕ್ಕೆ ಬರಬಹುದು.‌ ಲೋಕಾಯುಕ್ತದವರು ಯಾಕೆ ಪ್ರಾಸಿಕ್ಯೂಷನ್​ಗೆ ಕೇಳಿದ್ದಾರೆ. ಅವರು ತನಿಖೆ ಮಾಡುವಾಗ ಕಾನೂನು ವಿರುದ್ಧವಾಗಿದ್ದಾರಾ ಅಂತ ಪ್ರಾಸಿಕ್ಯೂಷನ್​ಗೆ ಕೇಳಿದ್ದಾರೆ. ಯಾವ ರೀತಿ ಕಾನೂನು ಕ್ರಮ ತೆಗೆದುಕೊಳ್ಳುತ್ತಾರೋ ನೋಡಬೇಕು ಎಂದು ತಿಳಿಸಿದರು.

ಕುಮಾರಸ್ವಾಮಿ ಹಾಗೂ ನಾಲ್ಕೈದು ಜನರ ಬಗ್ಗೆ ಕೇಳಿದೆ. ಅದನ್ನ ಕಾನೂನು ಬಾಹಿರ ಅಂದ್ರೆ ಹೇಗೆ?. ಯಾವುದಕ್ಕೆ ಮುಖ್ಯಮಂತ್ರಿಯನ್ನು ಸೇಫ್ ಮಾಡಬೇಕು?. ಸಿಎಂ ವೆರಿ ಸೇಫ್, ನಾವು ಮೀಟಿಂಗ್ ಮಾಡಿದ್ರೆ ಸಿಎಂ ಸೇಫ್ ಮಾಡೋಕೆ ಹೊರಟಿದ್ದಾರೆ ಅಂತಾರೆ.‌ ಅದರಲ್ಲಿ ಏನು ತಪ್ಪಿದೆ? ನಾವು ಅವರ ಜೊತೆ ಇದ್ದೇವೆ ಎಂದು ಪರಮೇಶ್ವರ್​ ಸ್ಪಷ್ಟಪಡಿಸಿದರು.

ರಾಜ್ಯಪಾಲರು ಮುಂದಿರುವ ಫೈಲ್​ಗಳ ಬಗ್ಗೆ ಕ್ಯಾಬಿನೆಟ್​ನಲ್ಲಿ ನಿರ್ಣಯ ತೆಗೆದುಕೊಳ್ಳುವ ವಿಚಾರಕ್ಕೆ, ಇವತ್ತು ಕ್ಯಾಬಿನೆಟ್​ನಲ್ಲಿ ಏನಾಗುತ್ತದೆ ಎಂಬುದು ನೋಡೊಣ ಎಂದ ಅವರು, ಹೈಕಮಾಂಡ್ ನನ್ನನ್ನು ದೆಹಲಿಗೆ ಬರುವಂತೆ ಕರೆದಿಲ್ಲ. ಮುಖ್ಯಮಂತ್ರಿಗಳು ಕರೆದರೆ ಹೋಗುತ್ತೇನೆ ಎಂದರು.

ಮುಡಾ ನಿವೇಶನ ಹಂಚಿಕೆ ಪ್ರಕರಣದ ಬಗ್ಗೆ ಕೇಳಿದ ಪ್ರಶ್ನೆಗೆ, ಸಿಎಂ‌ ಸಿದ್ದರಾಮಯ್ಯ ಅವರ ಪತ್ನಿ ಸಹಿ ಇರುವ ದಾಖಲೆ ಪತ್ರವನ್ನು ಸಚಿವ ಭೈರತಿ ಸುರೇಶ್ ಅವರು ಹೆಲಿಕಾಪ್ಟರ್ ನಲ್ಲೇ ತಿದ್ದಿದ್ದಾರೆ, ವೈಟ್ನರ್ ಹಾಕಿರುವ ವಿಚಾರದ ಬಗ್ಗೆ ನಾನು ಅದನ್ನು ನೋಡಿಲ್ಲ, ನೋಡಿದ ಮೇಲೆ ಹೇಳುತ್ತೇನೆ. ಆ ರೀತಿ ಆಗಿದ್ರೇ ಈಗಾಗಲೇ ಎಸ್​​ಐಟಿ ತನಿಖೆ ಮಾಡ್ತಿದೆ. ಅದನ್ನು ಅವರು ನೋಡ್ತಾರೆ ಎಂದು ಹೇಳಿದರು.

ರಾಜ್ಯಪಾಲರಿಗೆ ಬುಲೆಟ್ ಪ್ರೂಫ್ ಕಾರ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಅವರಿಗೆ ರಕ್ಷಣೆ ಬೇಕು ಅಂತಾ ಕೇಳಿದ್ದಾರೆ. ಅದಕ್ಕೆ ರಕ್ಷಣೆ ನೀಡಿದ್ದಾರೆ. ಯಾವ ಭಯವಿದೆ ಅನ್ನೋದರ ಕುರಿತು ರಾಜ್ಯಪಾಲರಿಗೆ ಕೇಳಬೇಕು. ಅವರಿಗೆ ಈ ರೀತಿ ರಕ್ಷಣೆ ಬೇಕು ಅಂತಾ ಕೇಳಿದ್ದಾರೆ. ಇದಕ್ಕೆ ಬಿಜೆಪಿಯವರ ಇತ್ತೀಚಿನ ಬೆಳವಣಿಗೆಗಳೇ ಕಾರಣ ಎಂದು ಬೇಸರ ವ್ಯಕ್ತಪಡಿಸಿದರು.

ಬಿಜೆಪಿ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವರಿಗೆ ಪ್ರತಿಭಟನೆ ಮಾಡುವ ಹಕ್ಕಿದೆ ಮಾಡ್ತಾರೆ. ಅದಕ್ಕೆಲ್ಲಾ ನಾವ್ಯಾರೂ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಅವರು ಪ್ರತಿಭಟನೆ ಮಾಡಲಿ ಎಂದು ಹೇಳಿದರು.

ಇಂದು ಶಾಸಕಾಂಗ ಪಕ್ಷದ ಸಭೆ ಇದ್ದು, ಹಿಂದಿನ ಸರ್ಕಾರದ ಹಗರಣದ ಬಗ್ಗೆ ಚರ್ಚೆ ಮಾಡಲು ಸಭೆ ಮಾಡುತ್ತಿಲ್ಲ. ಹಿಂದಿನ ಸರ್ಕಾರದ ಹಗರಣಗಳ ವರದಿ ಬರೋವರಗೆ ಯಾವುದನ್ನೂ ಹೇಳೋಕೆ ಆಗುವುದಿಲ್ಲ. ವರದಿ ಬಂದ ಬಳಿಕವೇ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ವರದಿಯಲ್ಲಿ ಯಾವುದನ್ನ ಶಿಪಾರಸ್ಸು ಮಾಡುತ್ತಾರೋ ಅದನ್ನು ಮಾಡುತ್ತೇವೆ. ಒಂದು ವೇಳೆ ಕ್ರಿಮಿನಲ್ ಪ್ರೋಸಿಡಿಂಗ್ಸ್ ಮಾಡಬೇಕು ಅಂದ್ರೇ ಅದನ್ನ ಮಾಡುತ್ತಾರೆ ಎಂದು ಗೃಹ ಸಚಿವರು ಹೇಳಿದರು.

ಎಂಎಲ್​ಸಿ ಐವಾನ್ ಡಿಸೋಜಾ ಹೇಳಿಕೆ ವಿಚಾರಕ್ಕೆ, ಆ ರೀತಿಯ ಅರ್ಥದಲ್ಲಿ ಹೇಳಿಲ್ಲ ಅನ್ನೋದನ್ನ ಅವರೇ ಸ್ಪಷ್ಟಪಡಿಸಿದ್ದಾರೆ. ಆ ಬಗ್ಗೆ ಹೆಚ್ಚು ಚರ್ಚೆ ಮಾಡುವ ಅಗತ್ಯವಿಲ್ಲ ಎಂದು ಹೇಳಿದರು.

ಇದನ್ನೂ ಓದಿ:'ಕುಮಾರಸ್ವಾಮಿ ಅವರನ್ನು ಅಗತ್ಯಬಿದ್ದರೆ ಮುಲಾಜಿಲ್ಲದೆ ಅರೆಸ್ಟ್ ಮಾಡ್ತೀವಿ, ಆದರೆ..': ಸಿಎಂ ಸಿದ್ದರಾಮಯ್ಯ - CM Siddaramaiah

Last Updated : Aug 22, 2024, 1:29 PM IST

ABOUT THE AUTHOR

...view details