ರಾಯಚೂರು: ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾನೂ ಸಹ ರಾಯಚೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ಮಾಜಿ ಸಂಸದ ಬಿ.ವಿ.ನಾಯಕ ಹೇಳಿದರು. ರಾಯಚೂರು ಪತ್ರಿಕಾ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಯಚೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕು ಎನ್ನುವ ಇಚ್ಛೆಯಿದೆ. ಈ ನಿಟ್ಟಿನಲ್ಲಿ ಪಕ್ಷದ ಕೇಂದ್ರ ವರಿಷ್ಠರು ಹಾಗೂ ರಾಜ್ಯ ಮುಖಂಡರನ್ನು ಭೇಟಿ ಮಾಡಿ ಟಿಕೆಟ್ ನೀಡುವ ಮೂಲಕ ನನಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದ್ದೇನೆ ಎಂದರು.
ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿದ್ದೆ. ಆದರೆ ಸೋಲು ಅನುಭವಿಸುವಂತಾಯಿತು. ಆ ಸಂದರ್ಭದಲ್ಲಿ ನರೇಂದ್ರ ಮೋದಿಯವರ ಅಲೆಯಲ್ಲಿ ರಾಜ್ಯದಲ್ಲಿ ಒಂದು ಕ್ಷೇತ್ರ ಹೊರತುಪಡಿಸಿ ಎಲ್ಲೆಡೆ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಪ್ರಸ್ತುತ ವಿದ್ಯಮಾನಗಳಲ್ಲಿ ದೇಶಕ್ಕೆ ನರೇಂದ್ರ ಮೋದಿಯವರ ನಾಯಕತ್ವ ಅನಿವಾರ್ಯ ಎಂಬ ಪರಿಸ್ಥಿತಿಯಿದೆ.