ಕರ್ನಾಟಕ

karnataka

ETV Bharat / state

ಜೀವದ ಹಂಗು ತೊರೆದು ಅರ್ಧ ಗಂಟೆ ಚೇಸ್ ಮಾಡಿ ಮೊಬೈಲ್‌ ಸುಲಿಗೆಕೋರರ ಹಿಡಿದ ಹೊಯ್ಸಳ ಸಿಬ್ಬಂದಿ

ಇಂದಿರಾನಗರ ಠಾಣೆ ಪೊಲೀಸರು ಜೀವದ ಹಂಗು ತೊರೆದು ಮೊಬೈಲ್ ಸುಲಿಗೆ ಮಾಡಿ ಪರಾರಿಯಾಗುತ್ತಿದ್ದ ಇಬ್ಬರು ಸುಲಿಗೆಕೋರರನ್ನು ಬಂಧಿಸಿದ್ದಾರೆ.

Etv Bharathoysala-police-chased-and-caught-two-robbers-who-stole-mobile-phone
ಜೀವದ ಹಂಗು ತೊರೆದು ಅರ್ಧ ಗಂಟೆ ಚೇಸ್ ಮಾಡಿ ಮೊಬೈಲ್‌ ಸುಲಿಗೆಕೋರರನ್ನ ಹಿಡಿದ ಹೊಯ್ಸಳ ಸಿಬ್ಬಂದಿ

By ETV Bharat Karnataka Team

Published : Feb 7, 2024, 6:59 PM IST

Updated : Feb 7, 2024, 8:26 PM IST

ಜೀವದ ಹಂಗು ತೊರೆದು ಅರ್ಧ ಗಂಟೆ ಚೇಸ್ ಮಾಡಿ ಮೊಬೈಲ್‌ ಸುಲಿಗೆಕೋರರ ಹಿಡಿದ ಹೊಯ್ಸಳ ಸಿಬ್ಬಂದಿ

ಬೆಂಗಳೂರು: ಆಟೋ ಚಾಲಕನ ಮೊಬೈಲ್ ಸುಲಿಗೆ ಮಾಡಿ ಪರಾರಿಯಾಗುತ್ತಿದ್ದ ಇಬ್ಬರು ಸುಲಿಗೆಕೋರರನ್ನು ಇಂದಿರಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾಕ್ಸ್ ಟೌನ್ ನಿವಾಸಿಗಳಾದ ವಿನೋದ್ ಹಾಗೂ ಪುಲಕೇಶಿನಗರ ಠಾಣೆ ರೌಡಿಶೀಟರ್ ಸ್ಟೀಫನ್ ರಾಜ್ ಬಂಧಿತ ಆರೋಪಿಗಳು. ಇವರು ಒಂದೇ ರಾತ್ರಿ ಏಳು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರು ಎಂಬ ಅಂಶ ಪೊಲೀಸರ ವಿಚಾರಣೆಯಲ್ಲಿ ವೇಳೆ ಬೆಳಕಿಗೆ ಬಂದಿದೆ. ಸದ್ಯ ಆರೋಪಿಗಳಿಂದ ಏಳು ಮೊಬೈಲ್ ಫೋನ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಲಾಗಿದೆ.

ಪೂರ್ವ ವಿಭಾಗದ ಡಿಸಿಪಿ ಡಿ. ದೇವರಾಜ್ ಪ್ರತಿಕ್ರಿಯಿಸಿ, "ಕಳೆದ ಜನವರಿ 31ರಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಆಟೋ ಚಾಲಕ ಸಿದ್ದೇಶ್ ಎಂಬುವರು ಇಂದಿರಾನಗರದ 100ನೇ ಅಡಿರಸ್ತೆ ಬಳಿ ಆಟೋ ನಿಲ್ಲಿಸಿಕೊಂಡು ಮಲಗಿದ್ದರು‌‌. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ದರೋಡೆಕೋರರು ಚಾಲಕನಿಗೆ ಚಾಕು ತೋರಿಸಿ ಬೆದರಿಸಿ ಮೊಬೈಲ್ ಹಾಗೂ 2,300 ರೂಪಾಯಿ ನಗದು ಸುಲಿಗೆ ಮಾಡಿ ಪರಾರಿಯಾಗಿದ್ದರು. ಕೂಡಲೇ ಚಾಲಕ ಸಿದ್ದೇಶ್ ಬೇರೆಯವರ ಫೋನ್​ನಿಂದ ಕಂಟ್ರೋಲ್ ರೂಮ್​ಗೆ ಕರೆ‌ ಮಾಡಿ ನಡೆದ ವಿಷಯವನ್ನ ತಿಳಿಸಿದ್ದರು" ಎಂದರು.

"ವಿಷಯ ತಿಳಿದು ಗಸ್ತಿನಲ್ಲಿದ್ದ ಎಎಸ್ಐ ಎಸ್.ವಿಲಿಯಂ ಜಾರ್ಜ್ ಹಾಗೂ ಕಾನ್​ಸ್ಟೇಬಲ್ ಬೀರಪ್ಪ ಪೂಜಾರಿ ಕೂಡಲೇ ಕಾರ್ಯೋನ್ಮುಖರಾಗಿದ್ದಾರೆ.‌ ಸಿದ್ದೇಶ್ ನೀಡಿದ ಮಾಹಿತಿ ಆಧಾರದ ಮೇಲೆ ಆರೋಪಿಗಳು ತೆರಳಿದ‌ ಮಾರ್ಗವನ್ನು ಹಿಂಬಾಲಿಸಿದ್ದಾರೆ. ಆರೋಪಿಗಳು ಬೈಕ್​​ನಲ್ಲಿ ಹೋಗುತ್ತಿರುವುದನ್ನ ಗಮನಿಸಿದ್ದ ಎಎಸ್ಐ ವಿಲಿಯಂ ಜಾರ್ಜ್, ಚಾಲಕ ಬೀರಪ್ಪ ತಮ್ಮ ಹೊಯ್ಸಳದಿಂದ ಚೇಸ್ ಮಾಡಿದ್ದಾರೆ. ಆರೋಪಿಗಳನ್ನ ಹಿಡಿಯುವ ಭರದಲ್ಲಿ ಹೊಯ್ಸಳಗೆ ಗಾಡಿ ತಗುಲಿ ಆಗಿ ಡ್ಯಾಮೇಜ್ ಆಗಿತ್ತು. ನಂತರ ಹೊಯ್ಸಳದಿಂದ ಇಳಿದು ಆರೋಪಿಗಳನ್ನ ಬೆನ್ನಟ್ಟಿ ಇಬ್ಬರನ್ನು ಬಂಧಿಸಿದ್ದಾರೆ" ಎಂದು ತಿಳಿಸಿದರು.

"ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಇಬ್ಬರೂ ಒಂದೇ ಏರಿಯಾದವರಾಗಿದ್ದು, ಅಪರಾಧ ಹಿನ್ನೆಲೆ ಉಳ್ಳವರಾಗಿದ್ದಾರೆ. ವಿನೋದ್ ವಿರುದ್ಧ ಸುಲಿಗೆ, ದರೋಡೆ ಹಾಗೂ ಮಾದಕವಸ್ತು ಸೇವನೆ ಪ್ರಕರಣಗಳಲ್ಲಿ ಇಂದಿರಾನಗರ, ಹಲಸೂರು ಸೇರಿದಂತೆ ವಿವಿಧ‌ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಇನ್ನು ಸ್ಟೀಫನ್ ರಾಜ್, ಪುಲಕೇಶಿನಗರ ಠಾಣೆ ರೌಡಿಶೀಟರ್ ಆಗಿದ್ದಾನೆ. ಈತ ಕೊಲೆ, ರಾಬರಿ ಹಾಗೂ ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ಇಬ್ಬರ ಬಂಧನದಿಂದ‌ ಹೆಣ್ಣೂರು, ಇಂದಿರಾನಗರ ಹಾಗೂ ಹಲಸೂರು ಗೇಟ್​ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಐದು ಪ್ರಕರಣಗಳನ್ನು ಭೇದಿಸಲಾಗಿದೆ" ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:ಬೆಂಗಳೂರಲ್ಲಿ ಬಿಐಎಸ್ ಅಧಿಕಾರಿಗಳ ಸೋಗಿನಲ್ಲಿ ನಕಲಿ ದಾಳಿ: ಸಿನಿಮೀಯ ಮಾದರಿಯಲ್ಲಿ ಆರೋಪಿಗಳ ಬಂಧನ

Last Updated : Feb 7, 2024, 8:26 PM IST

ABOUT THE AUTHOR

...view details