ಬೆಂಗಳೂರು: ಮನೆಕಳ್ಳತನವನ್ನೇ ಕಾಯಕ ಮಾಡಿಕೊಂಡಿದ್ದ ಖತರ್ನಾಕ್ ಖದೀಮ ಸೇರಿ ಮೂವರು ಚೋರರನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಆಡುಗೋಡಿಯ ರಾಜೇಂದ್ರ ನಗರದ ಅಪ್ಪು ಆಲಿಯಾಸ್ ಕೊಳಾಯಿ, ತಮಿಳುನಾಡಿನ ಮೂಲದ ಧರ್ಮಪುರಿಯ ಪೆರಿಸ್ವಾಮಿ ಹಾಗೂ ತಾಂಬ್ರೆ ಸೆಲ್ವನ್ ಎಂಬುವರನ್ನು ಬಂಧಿಸಿ 674 ಗ್ರಾಂ ಚಿನ್ನಾಭರಣ, 240 ಗ್ರಾಂ ಬೆಳ್ಳಿ ಹಾಗೂ 50 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ ವಶಕ್ಕೆ ಪಡೆಯಲಾಗಿದೆ.
ಪ್ರಕರಣದ ಪ್ರಮುಖ ಆರೋಪಿಯಾಗಿರುವ 32 ವರ್ಷದ ಅಪ್ಪು, ಮನೆಗಳ್ಳತನ ಮಾಡುವುದನ್ನೇ ವೃತ್ತಿಯಾಗಿಸಿಕೊಂಡಿದ್ದ. ಸುಮಾರು 10 ವರ್ಷಗಳಿಂದ ಮನೆಯ ಬೀಗ ಹೊಡೆದು ಕನ್ನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಇದೇ ತಿಂಗಳು 16ರಂದು ಬೊಮ್ಮನಹಳ್ಳಿಯ ಕೋಡಿಚಿಕ್ಕನಹಳ್ಳಿ ಮನೆಯೊಂದರ ಬೀಗ ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ಅಪಾರ ಪ್ರಮಾಣದ ವಿದೇಶಿ ಹಣವನ್ನ ಕಳ್ಳತನ ಮಾಡಿದ್ದ. ಈ ದೂರು ಸಂಬಂಧ ತನಿಖೆ ಕೈಗೊಂಡ ಇನ್ಸ್ಪೆಕ್ಟರ್ ಪ್ರೀತಮ್ ಎಂ.ಡಿ.ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿ ಅಪ್ಪುನನ್ನು ಬಂಧಿಸಿದೆ. ವಿಚಾರಣೆ ನಡೆಸಿದಾಗ ಈತ ನೀಡಿದ ಮಾಹಿತಿ ಮೇರೆಗೆ ಇನ್ನಿಬ್ಬರನ್ನ ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ ತಿಳಿಸಿದ್ದಾರೆ.