ಬೆಂಗಳೂರು:ಹನಿಟ್ರ್ಯಾಪ್ ಮಾಡಿ 2 ಕೋಟಿಗೂ ಅಧಿಕ ಹಣ ವಸೂಲಿ ಮಾಡಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
46 ವರ್ಷ ವಯಸ್ಸಿನ ಸಂತ್ರಸ್ತ ವ್ಯಕ್ತಿಯೊಬ್ಬರು ನೀಡಿದ ದೂರಿನನ್ವಯ ತನಿಖೆ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳಾದ ತಬಸ್ಸುಮ್ ಬೇಗಂ (38), ಅಜೀಂ ಉದ್ದೀನ್ (41), ಹಾಗೂ ಅಭಿಷೇಕ್ (33) ಎಂಬುವವರನ್ನು ಬಂಧಿಸಿದ್ದಾರೆ.
ದೂರಿನ ವಿವರ: ''ತಾನು2018ರಲ್ಲಿ ಆರ್.ಟಿ.ನಗರದ ಜಿಮ್‌ಗೆ ಹೋಗುವಾಗ ಅದರ ಮಾಲಿಕ ಅಜೀಂ ಉದ್ದೀನ್‌ನ ಸಹೋದರಿ ತಬಸ್ಸುಮ್ ಬೇಗಂ ಎಂಬ ಮಹಿಳೆಯ ಪರಿಚಯವಾಗಿತ್ತು. ಮನೆಗೆ ಹೋಗುವಾಗ ಭದ್ರತೆಯ ದೃಷ್ಟಿಯಿಂದ ನಿಮ್ಮೊಂದಿಗೆ ಫೋನ್‌ನಲ್ಲಿ ಮಾತನಾಡಿಕೊಂಡು ಹೋಗುತ್ತೇನೆಂದು ಆರೋಪಿ ತಬಸ್ಸುಮ್ ತನ್ನ ನಂಬರ್ ಪಡೆದುಕೊಂಡಿದ್ದರು. ನಂತರ ಇಬ್ಬರ ನಡುವೆ ಆತ್ಮೀಯತೆ ಬೆಳೆದು ಸಂಬಂಧ ಏರ್ಪಟ್ಟಿತ್ತು. ಆ ಸಂದರ್ಭದಲ್ಲಿ ಉನ್ನತ ಶಿಕ್ಷಣದ ಹೆಸರಿನಲ್ಲಿ ಹಾಗೂ ತಾನು ಮನೆಯವರಿಂದ ಮದುವೆಯ ಒತ್ತಾಯ ತಪ್ಪಿಸಿಕೊಳ್ಳಲು ಮಗುವೊಂದನ್ನು ದತ್ತು ಪಡೆದಿರುವುದಾಗಿ ಹೇಳಿ ತಬಸ್ಸುಮ್ ನನ್ನೊಂದಿಗೆ ಹಣ ಪಡೆದುಕೊಂಡಿದ್ದಳು. ಆದರೆ, ನಂತರ ಕೆಲ ದಿನಗಳ ಬಳಿಕ ತಬಸ್ಸುಮ್ ಜಿಮ್‌ಗೆ ಬರುವುದನ್ನು ನಿಲ್ಲಿಸಿದ್ದನ್ನು ಪ್ರಶ್ನಿಸಿದಾಗ ಆಕೆಯೊಂದಿಗಿದ್ದ ಖಾಸಗಿ ಫೋಟೋಗಳನ್ನು ಕಳಿಸಿ, ಅವುಗಳನ್ನು ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ನನಗೆ ಬೆದರಿಸಲಾರಂಭಿಸಿದ್ದಳು. ಅಲ್ಲದೇ 2018ರಿಂದ ಇದುವರೆಗೂ ಆರೋಪಿ ತಬಸ್ಸುಮ್, ಆಕೆಯ ಸಹೋದರ ಅಜೀಮ್ ಉದ್ದೀನ್ ಹಾಗೂ ಪೊಲೀಸ್ ಮತ್ತು ವಕೀಲರೆಂದು ಕರೆ ಮಾಡುತ್ತಿದ್ದ ಆನಂದ್ ಹಾಗೂ ಅಭಿಷೇಕ್ ಸೇರಿ ಒಟ್ಟು 2.25 ಕೋಟಿ ರೂ. ವಸೂಲಿ ಮಾಡಿದ್ದಾರೆ. ಆರೋಪಿಗಳಿಗೆ ಹಣ ನೀಡಲು ಸಾಲ ಮಾಡಿರುವ ತಾನು ಶೋಚನೀಯ ಸ್ಥಿತಿ ತಲುಪಿರುವುದಾಗಿ'' ಸಂತ್ರಸ್ತ ವ್ಯಕ್ತಿ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಸಿಸಿಬಿ ಪೊಲೀಸರು, ಸದ್ಯ ಮೂವರು ಆರೋಪಿಗಳನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ಜೀವ ಕಳೆದುಕೊಳ್ಳಬೇಡಿ, ನಾನಿದ್ದೇನೆ: ಹನಿಟ್ರ್ಯಾಪ್, ಬ್ಲ್ಯಾಕ್‌ಮೇಲ್ ವಿರುದ್ಧ ಪ್ರತಿಭಾ ಕುಳಾಯಿ ಅಭಿಯಾನ