ಬೆಂಗಳೂರು:ಎಸ್ಐಟಿಯಿಂದ ತಡರಾತ್ರಿ ಪ್ರಜ್ವಲ್ ರೇವಣ್ಣ ಬಂಧನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಮಗ್ರ ಮಾಹಿತಿ ನೀಡಿದ್ದಾರೆ. ಮುನ್ನೆಚ್ಚರಿಕೆ ಕ್ರಮಗಳು ಹಾಗು ಕಾನೂನು ಪ್ರಕ್ರಿಯೆಗಳ ಕುರಿತು ವಿವರ ನೀಡಿದ್ದಾರೆ. ಇದರ ಜತೆ ವಾಲ್ಮೀಕಿ ನಿಗಮದ ಅಕ್ರಮದ ತನಿಖೆ ಕುರಿತೂ ಸಮಾಲೋಚನೆ ನಡೆಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತ ನಿವಾಸ ಕಾವೇರಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭೇಟಿ ನೀಡಿದರು. ಎರಡು ಮಹತ್ವದ ವಿಚಾರಗಳ ಕುರಿತು ಸಿಎಂ ಜೊತೆಗೆ ಅವರು ಚರ್ಚೆ ನಡೆಸಿದರು. ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ ವಿದೇಶದಿಂದ ಮರಳುತ್ತಿದ್ದಂತೆ ತಡ ರಾತ್ರಿ ವಿಮಾನ ನಿಲ್ದಾಣದಲ್ಲೇ ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ಬಂದಿದ್ದು ಮತ್ತು ನಂತರದ ಘಟನಾವಳಿಗಳ ಕುರಿತಾಗಿ ಸಿಎಂಗೆ ವಿಸ್ತೃತ ಮಾಹಿತಿ ನೀಡಿದರು. ಪ್ರಜ್ವಲ್ ರೇವಣ್ಣ ಬಂಧನದ ಬಳಿಕ ಕಾನೂನು ವ್ಯವಸ್ಥೆ ಬಗ್ಗೆ ಚರ್ಚೆ ನಡೆಸಿ ಕೈಗೊಂಡಿರುವ ಎಲ್ಲ ಮುನ್ನೆಚ್ಚರಿಕೆ ಕುರಿತು ವಿವರ ನೀಡಿದರು.
ಇದರ ಜೊತೆಗೆ, ಸಚಿವ ನಾಗೇಂದ್ರ ಮೇಲಿನ ಆರೋಪದ ಬಗ್ಗೆಯೂ ಚರ್ಚೆ ನಡೆಸಿದರು. ಹಗರಣ ಆರೋಪ ಸಂಬಂಧ ಸಿಐಡಿ ವರದಿ ಬಗ್ಗೆ ಸಿಎಂ ಜೊತೆ ಪರಮೇಶ್ವರ್ ಸಮಾಲೋಚನೆ ನಡೆಸಿದರು. ಪ್ರಕರಣದ ತನಿಖೆ ನಡೆಸಿತ್ತಿರುವ ಸಿಐಡಿ ಇಂದು (ಶುಕ್ರವಾರ) ಸಂಜೆಯೊಳಗೆ ಗೃಹ ಇಲಾಖೆಗೆ ವರದಿ ನೀಡಲಿರುವ ಹಿನ್ನೆಲೆಯಲ್ಲಿ ಸಮಾಲೋಚನೆ ನಡೆಸಿದರು. ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ ಕೆಎಸ್ ರಿಪೋರ್ಟ್ ಸಿಐಡಿ ವರದಿಯಲ್ಲಿ ನಾಗೇಂದ್ರ ಭಾಗಿಯಾಗಿದ್ದು, ಖಚಿತವಾದರೆ ಸಚಿವರ ರಾಜೀನಾಮೆ ಪಡೆಯಲು ಚಿಂತನೆ ನಡೆಸಲಾಗಿದೆ. ಸಚಿವರ ಭಾಗಿ ಕುರಿತು ವರದಿಯಲ್ಲಿ ಉಲ್ಲೇಖವಾದರೆ ರಾಜೀನಾಮೆ ಪಡೆಯುವ ನಿಲುವು ಸರ್ಕಾರ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಇಂದು ಬರುವ ವರದಿಯ ಅನುಸಾರ ಯಾವ ರೀತಿ ಕ್ರಮ ವಹಿಸಬೇಕು ಎನ್ನುವ ಕುರಿತು ಸಿಎಂಗೆ ಪರಮೇಶ್ವರ್ ಚರ್ಚಿಸಿದರು.