ಬೆಂಗಳೂರು: ಈ ಬಾರಿಯ ಕೃಷಿ ಮೇಳದಲ್ಲಿ ವಿಶೇಷ ರೀತಿಯ ಕಡಲೆಕಾಯಿ ಬಿತ್ತನೆ ಯಂತ್ರವನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿ ಪ್ರದರ್ಶನಕ್ಕೆ ಇರಿಸಿದ್ದು, ಇದು ಜನರನ್ನು ಆಕರ್ಷಿಸುತ್ತಿದೆ. ಈ ಬ್ಯಾಟರಿ ಚಾಲಿತ ಯಂತ್ರಕ್ಕೆ 'ಕೃಷಿಬಾಟ್' ಎಂದು ಹೆಸರಿಡಲಾಗಿದ್ದು, ಇದನ್ನು ರಿಮೋಟ್ ಸಿಸ್ಟಂ ಮೂಲಕ ನಿಯಂತ್ರಿಸಬಹುದಾಗಿದೆ. ಈ ಯಂತ್ರ ಸಣ್ಣ ಹಾಗೂ ಮಧ್ಯಮ ವರ್ಗದ ರೈತರಿಗೆ ಅನುಕೂಲವಾಗಲಿದ್ದು, ಹಳ್ಳಿಗಾಡಿನ ಕೃಷಿ ಕಾರ್ಮಿಕರ ಸಮಸ್ಯೆಯನ್ನು ನೀಗಿಸುವ ಕೆಲಸ ಮಾಡಲಿದೆ.
ನೆಲಗಡಲೆ ಸುಲಭವಾಗಿ ಬಿತ್ತನೆ ಮಾಡಲು ಅನುಕೂಲವಾಗುವಂತೆ ತಯಾರಾಗಿರುವ ಬ್ಯಾಟರಿ ಚಾಲಿತ ಕೃಷಿಬಾಟ್ ಕೂಲಿಕಾರರ ಅಗತ್ಯವಿಲ್ಲದೇ ಕಾರ್ಯಾಚರಣೆ ನಡೆಸುತ್ತದೆ. ಇದರಿಂದ ಬೀಜ ಬಿತ್ತನೆ ಮಾಡುವುದರ ಜೊತೆಗೆ ರಸಗೊಬ್ಬರವನ್ನು ಕೂಡ ಸಮಾನವಾಗಿ ಸಿಂಪಡಿಸಬಹುದಾಗಿದೆ. ಕೆಲವೊಮ್ಮೆ ಮಳೆ ಬಿದ್ದಾಗ ಬಿತ್ತನೆ ಮಾಡಲು ಸಕಾಲದಲ್ಲಿ ಕೂಲಿಕಾರರು ಸಿಗದೇ ತೊಂದರೆಪಡುತ್ತಿರುವ ರೈತರಿಗೆ ಈ ಯಂತ್ರ ಸಹಕಾರಿಯಾಗಿದೆ.
ಕೃಷಿಬಾಟ್ ಸುಧಾರಿತ ಬಿತ್ತನೆ ತಂತ್ರಜ್ಞಾನ ಹೊಂದಿದೆ. ಈ ಯಂತ್ರವನ್ನು ಬಳಸಿ ಪ್ರತಿ ಬೀಜವನ್ನು ಬೇಕಾಗುವ ಆಳ ಮತ್ತು ಗರಿಷ್ಠ ಇಳುವರಿಯನ್ನು ಮನಗಂಡು ಸಮಾನಾಂತರದಲ್ಲಿ ನೀಡಬಹುದಾಗಿದೆ. ಕೃಷಿ ಬಾಟ್ ಯಂತ್ರದ ಸಹಾಯದಿಂದ ವ್ಯರ್ಥ ಬೀಜ ನೆಡುವುದನ್ನು ತಡೆಯಬಹುದಾಗಿದೆ. ಇದು ಕೇವಲ ಬೀಜಗಳನ್ನು ನೆಡುವುದಲ್ಲದೇ, ಗೊಬ್ಬರ ಹಾಕಲು ಕೂಡ ಬಳಕೆಯಾಗಲಿದೆ.
ಕೃಷಿ ಬಾಟ್ ಅನ್ನು ಸಂಪೂರ್ಣವಾಗಿ ರಿಮೋಟ್ ಸಿಸ್ಟಂ ಮೂಲಕ ನಿಯಂತ್ರಿಸಬಹುದಾಗಿದೆ. ಇದರಿಂದ ಗೊಬ್ಬರ ಸಿಂಪಡಿಸುವುದು ಮತ್ತು ಕೃಷಿಯ ಸಂಪೂರ್ಣ ಪ್ರಕ್ರಿಯೆಯನ್ನು ದೂರದಿಂದಲೇ ಸುಲಭವಾಗಿ ನಿಯಂತ್ರಿಸಬಹುದಾಗಿದೆ. ಇಡೀ ದಿನದ ಕಾರ್ಯಾಚರಣೆಗೆ ಇದನ್ನು ಸಜ್ಜುಗೊಳಿಸಲಾಗಿದೆ. ಈ ಯಂತ್ರದಲ್ಲಿ ಬ್ಯಾಟರಿ ಬದಲಿಸಲು ಕೂಡ ಅವಕಾಶ ಮಾಡಿಕೊಡಲಾಗಿದೆ.
ಯಂತ್ರಕ್ಕಿದೆ 20 ನಿಮಿಷದಲ್ಲಿ 1 ಎಕರೆಗೆ ಗೊಬ್ಬರ ಹರಡಬಲ್ಲ ಸಾಮರ್ಥ್ಯ: ಸ್ವಯಂಚಾಲಿತ ರಸಗೊಬ್ಬರ ಹಾಕಲು ಕೂಡ ಇದು ಸಹಕಾರಿಯಾಗಿದೆ. ಈ ಉಪಕರಣ ಗೊಬ್ಬರವನ್ನು 7 ಮೀಟರ್ ದೂರದವರೆಗೆ ಹರಡುತ್ತದೆ. ಶಿಫಾರಸು ಮಾಡಿದ ರಸಗೊಬ್ಬರ ನಕ್ಷೆಯನ್ನು ಕೂಡ ಒದಗಿಸಲಿದೆ. ಯಾವುದೇ ರಸಗೊಬ್ಬರ ವ್ಯರ್ಥವಾಗದಂತೆ ಏಕರೂಪದ ವಿತರಣೆಗೆ ಇದು ಸಹಾಯ ಮಾಡಲಿದೆ. ಸುಮಾರು 20 ನಿಮಿಷಗಳಲ್ಲಿ 1 ಎಕರೆ ವಿಸ್ತೀರ್ಣಕ್ಕೆ ಗೊಬ್ಬರ ಹರಡಬಲ್ಲ ಸಾಮರ್ಥ್ಯ ಕೃಷಿ ಕೃಷಿಬಾಟ್ ಯಂತ್ರಕ್ಕೆ ಇದೆ.
ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ವಿ. ಸುರೇಶ್ ಮಾತನಾಡಿ, "ಈ ಬಾರಿ ಕೃಷಿ ಮೇಳದಲ್ಲಿ ರೈತರಿಗೆ ಅನುಕೂಲವಾಗುವಂತಹ ಸಾಕಷ್ಟು ಯಂತ್ರಗಳನ್ನು ಪರಿಚಯಿಸಲಾಗಿದೆ. ನಾನಾ ಸ್ಟಾರ್ಟಪ್‌ಗಳು ಆವಿಷ್ಕರಿಸಿರುವ ಯಂತ್ರಗಳನ್ನೂ ಪ್ರದರ್ಶಿಸಲಾಗುತ್ತಿದೆ. ಕಡಲೆಬೀಜ ಬಿತ್ತನೆ, ರಸಗೊಬ್ಬರ ಹಾಕಲು, ಔಷಧ ಸಿಂಪಡಣೆ ಹೀಗೆ ಹಲವು ಕೆಲಸಗಳನ್ನು ಕೂಲಿಕಾರರಿಲ್ಲದೇ ಮಾಡಲು ಇವು ಅನುಕೂಲಕರವಾಗಲಿವೆ. ಈ ಯಂತ್ರಗಳಿಂದ ರೈತರು ಲಾಭದಾಯಕ ಹಾಗೂ ವೈಜ್ಞಾನಿಕ ಕೃಷಿಗೆ ಒತ್ತು ನೀಡಬಹುದಾಗಿದೆ" ಎಂದು ತಿಳಿಸಿದರು.
ಇದನ್ನೂ ಓದಿ: ಕೃಷಿ ಮೇಳ 2024 : ಜನರ ಗಮನ ಸೆಳೆಯುತ್ತಿರುವ ಬಣ್ಣದ ಬ್ರಾಯ್ಲರ್ ಕೋಳಿಗಳು; ಏನಿದರ ವಿಶೇಷತೆಗಳು?