ಕರ್ನಾಟಕ

karnataka

ನಾಗಮಂಗಲ ಗಲಾಟೆ ಸಂಬಂಧ ಪಿಎಸ್​ಐ ಅಮಾನತು, ಘಟನೆಗೆ ಕಾರಣಗಳ ವರದಿಗೆ ಸೂಚನೆ: ಡಾ.ಜಿ.ಪರಮೇಶ್ವರ್ - Home Minister Parameshwar

By ETV Bharat Karnataka Team

Published : Sep 13, 2024, 12:43 PM IST

ನಾಗಮಂಗಲ ಗಲಾಟೆಯ ಬಗ್ಗೆ ರಾಜಕೀಯ ಮಾಡಬೇಡಿ ಎಂದು ಈಗಾಗಲೇ ಪ್ರತಿಪಕ್ಷಗಳಿಗೆ ಮನವಿ ಮಾಡಿದ್ದೇವೆ. ಆದರೂ ಮಾಡ್ತೇವೆ ಅಂದ್ರೆ ಅದನ್ನು ನಿಭಾಯಿಸಲು ನಮಗೆ ಗೊತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

Home Minister G Parameshwar
ಗೃಹ ಸಚಿವ ಡಾ.ಜಿ.ಪರಮೇಶ್ವರ್ (ETV Bharat)

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ (ETV Bharat)

ಬೆಂಗಳೂರು: "ಯಾವುದೇ ಘಟನೆಗಳಾದರೂ ನಿಮ್ಮನ್ನೇ ಹೊಣೆ ಮಾಡುವುದಾಗಿ ಪೊಲೀಸ್ ಅಧಿಕಾರಿಗಳಿಗೆ ಮೊದಲೇ ಎಚ್ಚರಿಸಿದ್ದೇವೆ. ನಾಗಮಂಗಲದಲ್ಲಿ ನಡೆದ ಘಟನೆಗೆ ಕಾರಣಗಳೇನು ಎಂಬುದರ ಕುರಿತು ವರದಿ ನೀಡುವಂತೆ ಸೂಚಿಸಿದ್ದೇನೆ‌. ವರದಿ ಬಂದ ನಂತರ ಮುಂದಿನ ಕ್ರಮ ಜರುಗಿಸಲಾಗುವುದು" ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದ ಬಳಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾಗಮಂಗಲ ಗಲಾಟೆಗೆ ಸಂಬಂಧಿಸಿದಂತೆ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಪೊಲೀಸ್ ಇನ್ಸ್‌ಪೆಕ್ಟರ್‌ ಅಶೋಕ್ ಕುಮಾರ್‌ ಅವರನ್ನು ಅಮಾನತುಗೊಳಿಸಲಾಗಿದೆ. ಡಿವೈಎಸ್‌ಪಿ ಮೇಲೂ ತನಿಖೆ ನಡೆಯುತ್ತಿದೆ" ಎಂದರು.

"ಗಣೇಶ ಮೆರವಣಿಗೆ ಹೊರಡಬೇಕಿದ್ದ ದಾರಿಯನ್ನು ಮುಂಚಿತವಾಗಿ ನೀಡಲಾಗಿತ್ತು. ಇದನ್ನು ಇನ್‌ಸ್ಪೆಕ್ಟರ್ ಬದಲಾಯಿಸಿದ್ದರು. ಯಾವುದೇ ಅಹಿತರ ಘಟನೆ ನಡೆಯದಂತೆ, ಮುನ್ನೆಚ್ಚರಿಕೆ ವಹಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ‌. ಅದರ ಆಧಾರದ ಮೇಲೆ ಡಿಜಿಪಿ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ಸಂಬಂಧಪಟ್ಟ ಎಲ್ಲ ಎಸ್‌ಪಿ ಮತ್ತು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಸಾರ್ವಜನಿಕರೊಂದಿಗೆ ಕಾನೂನು ಸುವ್ಯವಸ್ಥೆ ಎಡಿಜಿಪಿ, ಎಸ್‌ಪಿ‌ ಎಲ್ಲರೂ ಸಭೆಗಳನ್ನು ನಡೆಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಕೆಎಸ್‌ಆರ್‌ಪಿ ವಾಹನ ಇರಿಸಲಾಗಿದೆ" ಎಂದು ತಿಳಿಸಿದರು.

ಸರ್ಕಾರ ಕುಮ್ಮಕ್ಕು ನೀಡಿದೆ, ಪೂರ್ವನಿಯೋಜಿತ ಘಟನೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, "ಯಾವ ಸರ್ಕಾರವೂ ಹೋಗಿ ಗಲಾಟೆ ಮಾಡಿ ಅಂತ ಹೇಳುತ್ತದೆಯೇ? ಈ ರೀತಿ ಆಗಬಾರದಾಗಿತ್ತು ಅಂತ ಹೇಳುವುದೇ ತಪ್ಪಾ? ಇವರಿಗೆ ಕನ್ನಡ ಭಾಷೆ ಅರ್ಥವಾಗುವುದಿಲ್ಲವೇ? ನಾವು ಹಳ್ಳಿಯಿಂದ ಬಂದವರು, ಹಳ್ಳಿ ಭಾಷೆಯಲ್ಲಿ ಹೇಳುತ್ತೇವೆ. ಪುಸ್ತಕ ಭಾಷೆ ಬಳಸುತ್ತೇವೆಯೇ? ಒಂದು ಮಾತನ್ನು ಸ್ಪಷ್ಟವಾಗಿ ಹೇಳಲಿಚ್ಛಿಸುತ್ತೇನೆ, ರಾಜ್ಯದಲ್ಲಿ ಯಾರು ಕೂಡ ಕಾನೂನನ್ನು ಕೈಗೆತ್ತಿಕೊಳ್ಳಲು ಬಿಡುವುದಿಲ್ಲ. ಯಾರೇ ಆಗಿರಲಿ. ಗಣೇಶ ಹಬ್ಬ ಸೇರಿದಂತೆ ಇನ್ನಿತರ ಹಬ್ಬಗಳಲ್ಲಿ ಅನವಶ್ಯಕವಾಗಿ ಗೊಂದಲಗಳನ್ನು ಸೃಷ್ಟಿಸಿ, ಗಲಾಟೆ ಮಾಡಿದರೆ ಸುಮ್ಮನೆ ಬಿಡುವುದಿಲ್ಲ. ಕಾನೂನು ಚೌಕಟ್ಟಿನಲ್ಲಿ ಏನೆಲ್ಲ‌ ಕ್ರಮ ತೆಗೆದುಕೊಳ್ಳಬೇಕೋ, ಕಟ್ಟುನಿಟ್ಟಾಗಿ ಮುಲಾಜಿಲ್ಲದೇ ಕೈಗೊಳ್ಳುತ್ತೇವೆ" ಎಂದು ಸ್ಪಷ್ಟಪಡಿಸಿದರು.

"ಯಾವುದೇ ಸಮುದಾಯವನ್ನು ತುಷ್ಟೀಕರಣ ಮಾಡುವ ಅಗತ್ಯತೆ ನಮಗೆ ಇಲ್ಲ. ಹೇಳಿಕೆಗಳನ್ನು ತಿರುಚಿ, ತಮಗೆ ಬೇಕಾದಂತೆ ವ್ಯಾಖ್ಯಾನ ಮಾಡಿಕೊಂಡರೆ ನಾವೇನು ಮಾಡಲಾಗುವುದಿಲ್ಲ" ಎಂದು ತಿರುಗೇಟು ಕೊಟ್ಟರು.

"ನಾನು ಗೃಹ ಸಚಿವನಾಗಿ ಜವಾಬ್ದಾರಿಯಿಂದ‌ ಕೆಲಸ‌ ಮಾಡುತ್ತಿದ್ದೇನೆ.‌ ಬಿಜೆಪಿಯವರಿಂದ ಸರ್ಟಿಫಿಕೇಟ್ ಬೇಕಿಲ್ಲ. ನನಗೂ ಜವಾಬ್ದಾರಿ ಇದೆ. ಜವಾಬ್ದಾರಿ ಇಲ್ಲದೆ, ಆ ಸ್ಥಾನದಲ್ಲಿ ಕುಳಿತಿಲ್ಲ. ಕೆಲಸ ಮಾಡುತ್ತಿದ್ದೇವೆ. ನಾಗಮಂಗಲ ಘಟನೆಯನ್ನು ಸಮರ್ಥನೆ ಮಾಡುತ್ತಿಲ್ಲ. ಇದಕ್ಕೆ ಕಾರಣರಾದವರ ವಿರುದ್ಧ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ. ಈಗಾಗಲೇ 52 ಜನರನ್ನು ಸುಮ್ಮನೆ ಬಂಧಿಸಲಾಗಿದೆಯೇ" ಎಂದು ಪ್ರಶ್ನಿಸಿದರು.

"ಬಿಜೆಪಿಯವರು ಹೇಳಿಕೆಗಳನ್ನು ಟ್ವಿಸ್ಟ್ ಮಾಡಿ ವ್ಯಾಖ್ಯಾನ ಮಾಡಿಕೊಳ್ಳಲಿ. ಪರಮೇಶ್ವರ್ ಹೀಗೆ ಹೇಳಿದರು, ಸಣ್ಣದೆಂದರು, ದೊಡ್ಡದು ಅಂತ ಹೇಳಿಕೊಳ್ಳಲಿ. ನನಗೂ ಅವರಂತೆ ಮಾತನಾಡುವುದಕ್ಕೆ ಬರುತ್ತದೆ. ನಾನು ನಿನ್ನೆಯೇ ಈ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು‌ ವಿಪಕ್ಷದವರಿಗೆ ಮನವಿ ಮಾಡಿದ್ದೇನೆ. ಆದರೂ ರಾಜಕೀಯ ಮಾಡುತ್ತೇವೆ ಅನ್ನುವುದಾದರೆ ಮಾಡಲಿ. ನಾವು ನಿಭಾಯಿಸುತ್ತೇವೆ" ಎಂದರು.

"ಇಂತಹ ಘಟನೆಗಳಾದ ಸಂದರ್ಭದಲ್ಲಿ ಪರಿಹಾರ ಕೊಡಲು ಕೆಲವು ನಿಯಮಗಳಿವೆ. ಘಟನೆಯ ತನಿಖಾ ವರದಿ ಬಂದ ನಂತರ ಪರಿಶೀಲನೆ ಮಾಡುತ್ತೇವೆ" ಎಂದು ಹೇಳಿದರು.

ಇದನ್ನೂ ಓದಿ:ನಾಗಮಂಗಲ ಗಲಭೆ ಬಗ್ಗೆ ಅಮಿತ್ ಶಾಗೆ ಮಾಹಿತಿ- ಪ್ರಲ್ಹಾದ್ ಜೋಶಿ; 'ಕರ್ನಾಟಕ ಬಾಂಗ್ಲಾದೇಶವಾಗದಿರಲಿ'- ಯತ್ನಾಳ್​ - nagamangala clash

ABOUT THE AUTHOR

...view details