ಬೆಂಗಳೂರು:ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-29ನೇ ಅವಧಿಯ ಚುನಾವಣಾ ಪ್ರಕ್ರಿಯೆ ಹಾಗೂ ಚುನಾವಣಾಧಿಕಾರಿಗಳ ನೇಮಕಕ್ಕೆ ತಡೆ ವಿಧಿಸಿದ್ದ ಬೆಂಗಳೂರು ನಗರ ಸಿಟಿ ಸಿವಿಲ್ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್ ಶುಕ್ರವಾರ ತಡೆ ನೀಡಿ ಆದೇಶಿಸಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠ, ಸಿಟಿ ಸಿವಿಲ್ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಬೇಕು ಎಂಬ ಅರ್ಜಿದಾರರ ಮನವಿಯನ್ನು ಅಂಗೀಕರಿಸಿ ಆದೇಶಿಸಿದೆ.
ಚುನಾವಣಾ ಪ್ರಕ್ರಿಯೆ ಹಾಗೂ ಚುನಾವಣಾಧಿಕಾರಿ ನೇಮಕಕ್ಕೆ ತಡೆ ವಿಧಿಸಿ ಸೆ.30ರಂದು ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯ (ಸಿಸಿಹೆಚ್-19) ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಿ ಹೈಕೋರ್ಟ್ ನ್ಯಾಯಪೀಠ ಆದೇಶ ಹೊರಡಿಸಿತು. ಇದೇ ವೇಳೆ ಈ ಆದೇಶಕ್ಕೆ ಬದಲಾವಣೆ ಅಥವಾ ಮಾರ್ಪಾಡು ಮಾಡುವಂತೆ ಕೋರುವ ಹಕ್ಕನ್ನು ಪ್ರತಿವಾದಿಗಳು ಹೊಂದಿರುತ್ತಾರೆ ಎಂದು ಆದೇಶದಲ್ಲಿ ಹೇಳಿರುವ ನ್ಯಾಯಪೀಠ, ವಿಚಾರಣೆಯನ್ನು ಅಕ್ಟೋಬರ್ 21ಕ್ಕೆ ಮುಂದೂಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ, ''ಚುನಾವಣಾಧಿಕಾರಿಗಳನ್ನಾಗಿ ನೇಮಕ ಆದವರು ನಿವೃತ್ತ ಉಪ ಕಾರ್ಯದರ್ಶಿ. ಇದು ಸಂಘದ ಬೈಲಾದ ನಿಯಮ-48ಎಗೆ ವಿರುದ್ಧವಾಗಿದೆ ಎಂಬ ಏಕೈಕ ಆಧಾರದಲ್ಲಿ ಸಿಟಿ ಸಿವಿಲ್ ನ್ಯಾಯಾಲಯ ಚುನಾವಣಾ ಪ್ರಕ್ರಿಯೆ ಮತ್ತು ಚುನಾವಣಾಧಿಕಾರಿಗಳ ನೇಮಕಕ್ಕೆ ತಡೆ ನೀಡಿದೆ. ಆದರೆ, ಬೈಲಾದ ನಿಯಮ 48ಎಗೆ ತಿದ್ದುಪಡಿ ತರಲಾಗಿದೆ. ಹಳೆಯ ನಿಯಮಗಳನ್ನು ತೋರಿಸಿ ಸಿಟಿ ಸಿವಿಲ್ ಕೋರ್ಟ್‌ಗೆ ಹಾದಿ ತಪ್ಪಿಸಲಾಗಿದೆ. ಅಲ್ಲದೇ ಸಂಘದ ವಾದ ಆಲಿಸಿದೆ ಸಿಟಿ ಸಿವಿಲ್ ಕೋರ್ಟ್ ಆದೇಶ ಮಾಡಿದೆ'' ಎಂದರು.
ಪ್ರತಿವಾದಿಗಳ ಪರ ವಕೀಲರು, ''ಸರ್ಕಾರಿ ನೌಕರರ ಸಂಘಕ್ಕೆ ಈಗಾಗಲೇ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ. ಹಾಗಾಗಿ, ಚುನಾವಣಾಧಿಕಾರಿಯಾಗಿ ನೇಮಕವಾಗಿರುವ ಹನುಮನರಸಯ್ಯ ಹಾಗೂ ಹಾಲಿ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಸರ್ಕಾರಿ ನೌಕರರ ಸಂಘವನ್ನು ಪ್ರತಿನಿಧಿಸುವ ಹಕ್ಕು ಹೊಂದಿಲ್ಲ'' ಎಂದು ಹೇಳಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ ಹಾಗೂ ಚುನಾವಣಾದಿಕಾರಿ ನೇಮಕ ಪ್ರಶ್ನಿಸಿ ಲೋಕೋಪಯೋಗಿ ಇಲಾಖೆಯಲ್ಲಿ ಎಸ್‌ಡಿಎ ಆಗಿರುವ ಕೃಷ್ಣಯ್ಯ ಎಂಬವರು ಸಿಟಿ ಸಿವಿಲ್ ಕೋರ್ಟ್‌ನಲ್ಲಿ ದಾವೆ ಹಾಕಿದ್ದರು.
ಓದಿ:ಬಿಜೆಪಿಯಿಂದ ಅವಹೇಳನಕಾರಿ ನಿಂದನೆ ಆರೋಪಿಸಿ ರಾಜ್ಯ ಮಹಿಳಾ ಆಯೋಗಕ್ಕೆ ಟಬು ರಾವ್ ದೂರು - Tabu Rao Complaint