ಬೆಂಗಳೂರು: ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಗಮ ಹಗರಣ ಪ್ರಕರಣದ ಎರಡನೇ ಆರೋಪಿಯಾಗಿರುವ ಬಿಜೆಪಿ ಮಾಜಿ ವಿಧಾನ ಪರಿಷತ್ ಸದಸ್ಯ ಡಿ.ಎಸ್.ವೀರಯ್ಯ ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಆರೋಪಪಟ್ಟಿಗೆ ಹೈಕೋರ್ಟ್ ಇಂದು ತಡೆ ನೀಡಿತು. ತನ್ನ ವಿರುದ್ಧದ ಕ್ರಿಮಿನಲ್ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕೆಂದು ಕೋರಿ ವೀರಯ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅರ್ಜಿದಾರರ ಪರ ವಕೀಲರ ವಾದವೇನು?: ಈ ವಿಚಾರವಾಗಿ ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಾಗಿದೆ. ಆರೋಪಿ ಸೇರಿದಂತೆ ಸರ್ಕಾರಿ ಸೇವಕರು, ಮತ್ತಿತರರು ಇರುವುದರಿಂದ ಭ್ರಷ್ಟಾಚಾರ ಕಾಯಿದೆ ಸೆಕ್ಷನ್ 17ಎ ಅಡಿಯಲ್ಲಿ ತಿಳಿಸಿರುವಂತೆ ಅನುಮತಿಯಿಲ್ಲದೆ ತನಿಖೆ ನಡೆಸುವುದಕ್ಕೆ ಅವಕಾಶವಿಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್ ಹಲವು ಪ್ರಕರಣಗಳಲ್ಲಿ ತಿಳಿಸಿದೆ. ಅಲ್ಲದೆ, ಪ್ರಕರಣದಲ್ಲಿ ಆರೋಪಿಗಳು ಅಪರಿಚಿತರಾಗಿದ್ದು, 9 ತಿಂಗಳುಗಳ ಕಾಲ ತನಿಖೆ ನಡೆಸಲಾಗಿದೆ. ಇದಾದ ನಂತರ ಅರ್ಜಿದಾರರ ತನಿಖೆ ನಡೆಸುವುದಕ್ಕೆ ಸೆಕ್ಷನ್ 17ಎ ಅಡಿಯಲ್ಲಿ ಮನವಿ ಮಾಡಲಾಗಿದೆ. ಆದ್ದರಿಂದ ಈ ಪ್ರಕ್ರಿಯೆಯಲ್ಲಿ ಅರ್ಜಿದಾರರ ವಿರುದ್ಧ ವಿಚಾರಣೆಗೆ ಅನುಮತಿ ನೀಡುವುದಕ್ಕೆ ಸಾಧ್ಯವಿಲ್ಲ ಎಂಬುದಾಗಿ ಅರ್ಜಿದಾರರ ಪರ ವಕೀಲರು ಮನವಿ ಮಾಡಿದ್ದಾರೆ.
ಅರ್ಜಿದಾರರ ವಾದವನ್ನು ಪರಿಗಣಿಸುವ ಅಗತ್ಯವಿದೆ. ಹೀಗಾಗಿ ಮುಂದಿನ ವಿಚಾರಣೆಯವರೆಗೂ ಅರ್ಜಿದಾರರ ವಿರುದ್ಧ ವಿಚಾರಣಾ ನ್ಯಾಯಾಲಯದಲ್ಲಿ ನಡೆಯಲಿರುವ ಪ್ರಕ್ರಿಯೆಗೆ ತಡೆ ನೀಡಲಾಗುತ್ತಿದೆ ಎಂದು ತಿಳಿಸಿದ ಪೀಠ, ವಿಚಾರಣೆಯನ್ನು ಡಿಸೆಂಬರ್ 19ಕ್ಕೆ ಮುಂದೂಡಿತು. ರಾಜ್ಯ ಸರ್ಕಾರ, ಸಿಐಡಿ ಮತ್ತು ದೂರುದಾರರಿಗೆ ನೋಟಿಸ್ ಜಾರಿ ಮಾಡಿತು.