ಕರ್ನಾಟಕ

karnataka

ETV Bharat / state

ಪತ್ನಿ ಆತ್ಮಹತ್ಯೆಗೆ ಪ್ರಚೋದನೆ ಆರೋಪ: ಪತಿ ವಿರುದ್ಧದ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಕಾರ - Wife Suicide Case - WIFE SUICIDE CASE

ಪತ್ನಿಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಪ್ರಕರಣದಲ್ಲಿ ಪತಿ ವಿರುದ್ಧ ದಾಖಲಾದ ಪ್ರಕರಣವನ್ನು ರದ್ದು ಮಾಡಲು ರಾಜ್ಯ ಹೈಕೋರ್ಟ್ ನಿರಾಕರಿಸಿದೆ. ಗಂಡನ ಕಡೆಯಿಂದ ಹೆಂಡತಿಯ ಆತ್ಮಹತ್ಯೆಗೆ ಸ್ಪಷ್ಟವಾದ ಪ್ರಚೋದನೆ ಇತ್ತು ಎಂಬುದಕ್ಕೆ ಸಾಕ್ಷ್ಯಗಳು ಇರುವ ಕಾರಣ ಪೂರ್ಣ ಪ್ರಮಾಣದ ವಿಚಾರಣೆಯ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿದೆ.

high court
ಹೈಕೋರ್ಟ್ (ETV Bharat)

By ETV Bharat Karnataka Team

Published : Aug 28, 2024, 7:34 AM IST

ಬೆಂಗಳೂರು: ಪತ್ನಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಸಂಬಂಧ ಸಾಕ್ಷ್ಯಾಧಾರಗಳಿದ್ದಲ್ಲಿ ನ್ಯಾಯಾಲಯ ಸಂಪೂರ್ಣ ವಿಚಾರಣೆ ನಡೆಸಿದ ಬಳಿಕವಷ್ಟೇ ಅದರ ಸಾರಾಂಶ ಅರ್ಥೈಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಪತ್ನಿ ಆತ್ಮಹತ್ಯೆಗೆ ಪ್ರಚೋದಿಸಿದ ಆರೋಪ ಎದುರಿಸುತ್ತಿದ್ದ ಪತಿಯ ವಿರುದ್ಧ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದುಪಡಿಸಲು ನಿರಾಕರಿಸಿದೆ.

ಪತ್ನಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದು ಕೋರಿ ಬೆಂಗಳೂರಿನಲ್ಲಿ ನೆಲೆಸಿರುವ ಪಶ್ಚಿಮ ಬಂಗಾಳ ಮೂಲದ ಮಯೂಕ್ ಮುಖರ್ಜಿ ಎಂಬವರು ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಪ್ರಕರಣದಲ್ಲಿ ತನಿಖಾಧಿಕಾರಿಗಳು ಸಲ್ಲಿಸಿರುವ ದಾಖಲೆಗಳು ಮತ್ತು ಸಂತ್ರಸ್ತೆ ಆತ್ಮಹತ್ಯೆಯ ವಿಡಿಯೋ, ದೂರು ಹಾಗೂ ದೋಷರೋಪಣಾ ಪಟ್ಟಿ ಪರಿಶೀಲಿಸಿದ ನ್ಯಾಯಪೀಠ, ದಂಪತಿಯು ಮದುವೆಯಾದ ಬಳಿಕ ಬೆಂಗಳೂರಿನಲ್ಲಿ ನೆಲೆಸಿದ್ದರು. ಪತ್ನಿಯೂ ತನ್ನ ಡೈರಿಯ ಹಲವೆಡೆ ಪತಿಗೆ ವಿವಾಹೇತರ ಸಂಬಂಧವಿರುವ ಬಗ್ಗೆ ಬರೆದುಕೊಂಡು ತನ್ನ ಅಳಲನ್ನು ತೋಡಿಕೊಂಡಿದ್ದಾಳೆ. ಇದು ಕೇವಲ ಕಲ್ಪನೆಯಾಗಿದ್ದರೆ, ಸನ್ನಿವೇಶವೂ ಸಂಪೂರ್ಣ ಭಿನ್ನವಾಗಿರುತ್ತಿತ್ತು. ಆದರೆ, ಆಕೆಯೂ ತನ್ನ ವೈವಾಹಿಕ ಜೀವನದ ಪ್ರತಿ ಹಂತದಲ್ಲೂ ಗಂಡನಿಗೆ ಅಕ್ರಮ ಸಂಬಂಧವಿರುವ ಬಗ್ಗೆ ಹೇಳಿಕೊಂಡಿದ್ದಾಳೆ ಎಂದು ಆದೇಶದಲ್ಲಿ ತಿಳಿಸಿದೆ.

ಅಲ್ಲದೇ, ದಂಪತಿಯು 10 ವರ್ಷಗಳ ಹಿಂದೆ ಮದುವೆ ಆಗಿದ್ದಲ್ಲ. ಸಂತ್ರಸ್ತೆಯ ಸಾವಿನ ವೇಳೆ ಆಕೆ ಮದುವೆಯಾಗಿ ಕೇವಲ 24 ತಿಂಗಳು ಕಳೆದಿತ್ತು. ಗಂಡನ ಕಡೆಯಿಂದ ಪ್ರಾಥಮಿಕವಾಗಿ ಹೆಂಡತಿಯ ಆತ್ಮಹತ್ಯೆಗೆ ಸ್ಪಷ್ಟವಾದ ಪ್ರಚೋದನೆ ಇತ್ತು ಎಂಬುದನ್ನು ವಿಡಿಯೋ ಮತ್ತು ಬರಹಗಳು ಸ್ಪಷ್ಟಪಡಿಸುತ್ತವೆ. ಈ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದ ವಿಚಾರಣೆಯ ಅಗತ್ಯವಿದೆ ಎಂದು ತಿಳಿಸಿದ ಪೀಠ, ಅರ್ಜಿಯನ್ನು ವಜಾಗೊಳಿಸಿದೆ.

ಅರ್ಜಿದಾರರ ಪರ ವಕೀಲರ ವಾದವೇನು?:ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ''ಸಂತ್ರಸ್ತೆ ಖಿನ್ನತೆಯಿಂದ ಬಳಲುತ್ತಿದ್ದಳು. ಆಕೆ ಆತ್ಮಹತ್ಯೆಯ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದು, ಕುಂಟುಂಬದ ಯಾವೊಬ್ಬ ಸದಸ್ಯನ ಮೇಲೆಯೂ ಆರೋಪ ಹೊರಿಸಿಲ್ಲ. ಅಲ್ಲದೇ, ದೂರಿನಲ್ಲಿ ಹೇಳಿರುವ ಹಾಗೆ ಅರ್ಜಿದಾರರು ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಸಾಬೀತುಪಡಿಸುವಲ್ಲಿ ಯಾವುದೇ ಸಾಕ್ಷಾಧಾರಗಳು ಲಭ್ಯವಾಗಿಲ್ಲ. ಇದೆಲ್ಲವೂ ಸತ್ಯಕ್ಕೆ ದೂರವಾದ ಸಂಗತಿ. ಸಂತ್ರಸ್ತೆಯೂ ಡೈರಿಯಲ್ಲಿ ಆಗೊಮ್ಮೆ, ಇಗೊಮ್ಮೆ ಪತಿಯಿಂದ ಕಿರುಕುಳ ಅನುಭವಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಹೊರತಾಗಿ, ಬೇರೆನೂ ಇಲ್ಲ. ಆತ್ಮಹತ್ಯೆಗೆ ಒಳಗಾಗುವಂತೆ ಯಾವುದೇ ರೀತಿಯಲ್ಲಿ ಪತಿಯೂ ಪ್ರಚೋದನೆ ನೀಡಿಲ್ಲ. ಹಾಗಾಗಿ, ಅರ್ಜಿದಾರರ ವಿರುದ್ಧ ವಿಚಾರಣಾ ನ್ಯಾಯಾಲಯದ ಎಲ್ಲ ತನಿಖಾ ಪ್ರಕ್ರಿಯೆ ರದ್ದುಗೊಳಿಸಬೇಕು'' ಎಂದು ಮನವಿ ಮಾಡಿದರು.

ಮೃತರ ಪೋಷಕರ ವಾದವೇನು?:ದೂರುದಾರರ (ಮೃತರ ಪೋಷಕರು) ಪರ ವಕೀಲರು ವಾದ ಮಂಡಿಸಿ, ''ದೋಷರೋಪಣಾ ಪಟ್ಟಿಯಲ್ಲಿ ಲಭ್ಯವಾದ ಅನೇಕ ಅಂಶಗಳು ಅರ್ಜಿದಾರರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎನ್ನುವ ಸಂಗತಿಯನ್ನು ಬಹಿರಂಗಪಡಿಸುತ್ತವೆ. ಪತಿಯಿಂದ ಅನುಭವಿಸುತ್ತಿರುವ ಕಿರುಕುಳದ ಬಗ್ಗೆ ಸಂತ್ರಸ್ತೆಯೂ ತನ್ನ ಡೈರಿಯಲ್ಲಿ ಬರೆದುಕೊಂಡಿದ್ದಾಳೆ. ಪತಿಗೆ ವಿವಾಹೇತರ ಸಂಬಂಧವಿದೆ. ಈ ನಿಟ್ಟಿನಲ್ಲಿ ಆತ ತನಗೆ ವಿವಿಧ ರೀತಿಯಲ್ಲಿ ಹಿಂಸೆ ನೀಡುತ್ತಿರುವ ಬಗ್ಗೆ ಆಕೆ ಹೇಳಿಕೊಂಡಿದ್ದಾಳೆ'' ಎಂಬುದನ್ನು ನ್ಯಾಯಪೀಠದ ಗಮನಕ್ಕೆ ತಂದರು.

ಪ್ರಾಸಿಕ್ಯೂಷನ್ ಪರ ವಕೀಲರು, ''ಪ್ರಕರಣ ಸಂಬಂಧ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಆರೋಪಪಟ್ಟಿ ಸಲ್ಲಿಸಲಾಗಿದೆ. ಈ ಬಗ್ಗೆ ವಿಚಾರಣೆ ನಡೆಯುತ್ತಿದೆ. ಅರ್ಜಿ ವಜಾಗೊಳಿಸಬೇಕು'' ಎಂದು ಮನವಿ ಮಾಡಿದರು.

ಪ್ರಕರಣದ ಹಿನ್ನೆಲೆ: ಮಯೂಕ್ ಮುಖರ್ಜಿ ಮಹಿಳೆಯನ್ನು 2021ರಲ್ಲಿ ವಿವಾಹವಾಗಿದ್ದರು. ಬಳಿಕ ದಂಪತಿ ಬೆಂಗಳೂರಿನಲ್ಲಿ ನೆಲೆಸಿದ್ದರು. ದಿನ ಕಳೆದಂತೆ ದಂಪತಿಯ ನಡುವೆ ವೈವಾಹಿಕ ಜೀವನ ಹದಗೆಟ್ಟಿತ್ತು. 2023ರ ಫೆಬ್ರವರಿ 24ರಂದು ಪತ್ನಿ ಬೆಂಗಳೂರಿನ ನಿವಾಸದಲ್ಲಿ ಆತ್ಮಹತ್ಯೆಗೆ ಮಾಡಿಕೊಂಡಿದ್ದರು. ಮಗಳು ಸಂದೇಶ ಹಾಗೂ ಕರೆಗಳಿಗೆ ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ಪೋಷಕರು ಆಕೆಯ ಮನೆಗೆ ಭೇಟಿ ನೀಡಿದಾಗ, ಅವಳು ಸಾವನ್ನಪ್ಪಿರುವ ಅಂಶ ಬೆಳಕಿಗೆ ಬಂದಿತ್ತು.

ಈ ಕುರಿತಂತೆ ಮೃತಳ ತಂದೆ ಅರ್ಜಿದಾರ ಹಾಗೂ ಆತನ ತಂದೆ - ತಾಯಿಯ ವಿರುದ್ಧ ನಗರದ ಮಾರತ್‌ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ತನಿಖೆ ನಡೆಸಿದ್ದ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ:ಮಾಲೂರು ವಿಧಾನಸಭಾ ಕ್ಷೇತ್ರದ ಮತ ಎಣಿಕೆ ವಿಡಿಯೋ ನಾಪತ್ತೆ : ಪ್ರಮಾಣಪತ್ರ ಸಲ್ಲಿಸಲು ಅಂದಿನ ಚುನಾವಣಾಧಿಕಾರಿಗೆ ಹೈಕೋರ್ಟ್ ಸೂಚನೆ - Video Missing

ABOUT THE AUTHOR

...view details